ಕೋಡಿಕಲ್: ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಮನೋಜ್ ಕುಮಾರ್ ಅವರು ಪ್ರತಿನಿಧಿಸುತ್ತಿರುವ ವಾರ್ಡ್ 17ರ ಕೋಡಿಕಲ್ ಶಾಲೆಯ ಬಳಿ ಸುಸಜ್ಜಿತ ಡಾ.ಬಿ.ಆರ್ ಅಂಬೇಡ್ಕರ್ ಭವನದ ಉದ್ಘಾಟನೆ ರವಿವಾರ ನಡೆಯಿತು.
ಶಾಸಕರಾದ ಡಾ. ಭರತ್ ಶೆಟ್ಟಿ ವೈ ಅವರು ಉದ್ಘಾಟಿಸಿ ಮಾತನಾಡಿ,ಬಾಬಾ ಸಾಹೇಬ್ ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆದಾಗ ಸಮಾಜದಲ್ಲಿ ಶಿಕ್ಷಣದೊಂದಿಗೆ ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆ. ಅವರ ಹೆಸರಿನಲ್ಲಿ ನಿರ್ಮಾಣವಾದ ಈ ಸಮಾಜ ಭವನದಲ್ಲಿ ಶಿಕ್ಷಣ ತರಬೇತಿ,ಉದ್ಯೋಗ, ಮತ್ತಿತರ ತರಬೇತಿಗಳು,ಆರ್ಥಿಕವಾಗಿ ಹಿಂದುಳಿದ ಸಮಾಜಕ್ಕೆ ಪ್ರಯೋಜನವಾಗಲಿ ಎಂದರು. ಇದೇ ಸಂದರ್ಭ ಭವನವನ್ನು ಪೂರ್ಣಗೊಳಿಸಲು ಬೇಕಾದ ಕ್ರಮ ಕೈಗೊಂಡ ಮೇಯರ್ ಮನೋಜ್ ಕುಮಾರ್ ಅವರನ್ನು ಅಭಿನಂದಿಸಿದರು.
ಮನೋಜ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದ ಜಯಲಕ್ಷ್ಮಿ ,ಕಿರಣ್ ಕುಮಾರ್ ಕೋಡಿಕಲ್, ಕೋಡಿಕಲ್ ಎಸ್ ಎನ್ ಡಿ ಪಿ ಮಂದಿರದ ಸಂಚಾಲಕರಾದ ಪುರುಷೋತ್ತಮ್ ಪೂಜಾರಿ, ಮುಂಡಾಲ ಯುವ ವೇದಿಕೆಯ ಪ್ರದೀಪ್ ಕಾಪಿಕಾಡ್, ಪರಿಶಿಷ್ಟ ಜಾತಿ ಹಿತರಕ್ಷಣಾ ಸಮಿತಿಯ ಚಂದ್ರಕುಮಾರ್ ,ಡಾ. ಬಿ ಆರ್ ಅಂಬೇಡ್ಕರ್ ಸೇವಾ ಸಮಿತಿಯ ಚಂದ್ರಹಾಸ್ ಸ್ಥಳೀಯರು,ಮತ್ತಿತರರು ಉಪಸ್ಥಿತರಿದ್ದರು.