ಮಂಗಳೂರು: ಕೈಗಾರಿಕೆ ಮತ್ತು ಕಾರ್ಖಾನೆಗಳಲ್ಲಿ ಅನಾಹುತ ಮತ್ತು ವಿಪತ್ತುಗಳ ನಿರ್ವಹಣೆಗೆ ಸ್ಥಳೀಯ ಮಟ್ಟದಲ್ಲಿ ಬಿಕ್ಕಟ್ಟು ಪರಿಹಾರ ಸಮಿತಿಗಳನ್ನು ರಚಿಸುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಸೂಚಿಸಿದ್ದಾರೆ
ಅವರು ಪಣಂಬೂರು ಎಂಸಿಎಫ್ ನಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಬಿಕ್ಕಟ್ಟು ಪರಿಹಾರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪಣಂಬೂರು, ಬೈಕಂಪಾಡಿ, ಸುರತ್ಕಲ್ ಆಸುಪಾಸಿನಲ್ಲಿ ಹಲವು ಸಣ್ಣ, ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳಿವೆ. ಯಾವುದೇ ರೀತಿಯಲ್ಲಿ ಎದುರಾಗಬಹುದಾದ ವಿಪತ್ತು ಹಾಗೂ ದುರ್ಘಟನೆಗಳ ನಿರ್ವಹಣೆಗೆ ಕೈಗಾರಿಕೆಗಳು ಸನ್ನದ್ಧವಾಗಿರಬೇಕು ಈ ನಿಟ್ಟಿನಲ್ಲಿ ತಮ್ಮದೇ ಆದ ವಿಪತ್ತು ನಿರ್ವಹಣೆ ಯೋಜನೆಯನ್ನು ಮಾಡಿಕೊಂಡಿರಬೇಕು ಎಂದು ಅವರು ತಿಳಿಸಿದರು.
ನೈಸರ್ಗಿಕ ವಿಪತ್ತು ಕೈಗಾರಿಕಾ ಅಪಾಯ ಮತ್ತು ಸಂಭವನೀಯ ವಿಪತ್ತುಗಳು ಸಂಭವಿಸಿದಾಗ ಕೈಗೊಳ್ಳುವ ಕಾರ್ಯವಿಧಾನಗಳ ಬಗ್ಗೆ ಎಲ್ಲಾ ಕೈಗಾರಿಕಾ ಘಟಕಗಳು ಮಾಹಿತಿ ಹೊಂದಿರಬೇಕು. ಪ್ರಾಥಮಿಕ ಹಂತದಲ್ಲಿ ಸಮುದಾಯದ ಸ್ವಸಹಾಯ ಅಗತ್ಯವಿದ್ದು, ಈ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಅಪಾಯಕಾರಿ ಕಾರ್ಖಾನೆಗಳ ಸುತ್ತಮುತ್ತಲಿನ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಬೇಕು.ತೈಲ ಸಾಗಾಟದ ಟ್ಯಾಂಕರ್‍ಗಳು ಲೋಡಿಂಗ್‍ನಿಂದ ಅನ್‍ಲೋಡಿಂಗ್ ಸ್ಥಳದವರೆಗೂ ಸಾಗಾಟದ ಹಾದಿಯಲ್ಲಿ ಯಾವುದೇ ಸೋರಿಕೆ ಸೇರಿದಂತೆ ಅನಾಹುತಗಳಾಗದಂತೆ ಆಯಾ ತೈಲ ಕಂಪನಿಗಳೇ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ತಿಳಿಸಿದರು.
ಸಭೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಆ್ಯಂಟೋನಿ ಮರಿಯಪ್ಪ, ಕಾರ್ಖಾನೆಗಳ ಉಪನಿರ್ದೇಶಕ ಎಂ.ಎಸ್ ಮಹಾದೇವ್, ಎಂಸಿಎಫ್ ಮುಖ್ಯ ಉತ್ಪಾದನಾಧಿಕಾರಿ ಗಿರೀಶ್, ಜಿಲ್ಲಾ ವಿಪತ್ತು ನಿರ್ವಹಣಾ ಸಮನ್ವಯಾಧಿಕಾರಿ ವಿಜಯ್ ಕುಮಾರ್, ವಿವಿಧ ಕೈಗಾರಿಕಾ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.