ಮಂಗಳೂರು: ತೆರಿಗೆ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೆ ತೋರುತ್ತಿರುವ ತಾರತಮ್ಯ ಧೋರಣೆ ಖಂಡಿಸಿ ಹಾಗೂ ಸಂಸದ ನಳಿನ್ ಕುಮಾರ್ ಕಟೀಲು ಅವರು ಜಿಲ್ಲೆಗೆ ಸಮರ್ಪಕ ಅನುದಾನ ತರುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿ ಎನ್.ಎಸ್.ಯು.ಐ. ಜಿಲ್ಲಾಧ್ಯಕ್ಷ ಸುಹಾನ್ ಆಳ್ವ ನೇತೃತ್ವದಲ್ಲಿ ಕಾರ್ಯಕರ್ತರು ಉರ್ವಾ ಬಳಿ ಸಂಸದರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಗುರುವಾರ ನಡೆಯಿತು.
ಈ ವೇಳೆ ಮಾತನಾಡಿದ ಸುಹಾನ್ ಆಳ್ವ, ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗಿದೆ. ಜಿಲ್ಲೆಯಲ್ಲಿ ಸಾಕಷ್ಟು ಶಾಲಾ ಕಾಲೇಜುಗಳಿದ್ದರೂ ಯುವಕರು ಉದ್ಯೋಗದಿಂದ ವಂಚಿತರಾಗಿದ್ದಾರೆ. ಕೇಂದ್ರ ಸರಕಾರದಿಂದ ರಾಜ್ಯಕ್ಕೆ ನೀಡುವ ಅನುದಾನದಲ್ಲಿ ತಾರಮತ್ಯ ಮಾಡಲಾಗುತ್ತಿದೆ. ನಮ್ಮ ತೆರಿಗೆ ಹಣ ನಮಗೆ ನೀಡಲು ನಿರಾಕರಿಸಲಾಗುತ್ತಿದೆ. ಜಿಲ್ಲೆಗೆ ಸಂಸದ ಕೊಡುಗೆ ಏನು ಎಂದು ಪ್ರಶ್ನಿಸಿದರು.
ಬ್ಯಾರಿಕೇಡ್ ತಳ್ಳಿ ಮುತ್ತಿಗೆಗೆ ಮುಂದಾದಾಗ ಎನ್.ಎಸ್.ಯು.ಐ. ಕಾರ್ಯಕರ್ತರನ್ನು ಸ್ಥಳದಲ್ಲಿದ್ದ ಪೊಲೀಸರು ತಡೆದು ವಶಕ್ಕೆ ಪಡೆದು ಬಳಿಕ ಬಿಡುಗಡೆಗೊಳಿಸಿದರು.
ಪ್ರತಿಭಟನೆಯಲ್ಲಿ ಎನ್.ಎಸ್.ಯು.ಐ. ರಾಜ್ಯ ಕಾರ್ಯದರ್ಶಿ ಬಾತೀಷ್ ಅಳಕೆಮಜಲು, ಮುಖಂಡರಾದ ತನುಷ್ ಶೆಟ್ಟಿ, ಅಲ್ಪಾಝ್, ಹರ್ಷನ್ ಪೂಜಯ, ಸುಖ್ವಿಂದರ್ ಸಿಂಗ್, ಸಾಹಿಲ್ ಮಂಚಿಲ, ವಿಶಾಲ್ ಮತ್ತಿತರರಿದ್ದರು.