ಮ೦ಗಳೂರು: ಸಮಾಜದಲ್ಲಿರುವ ಅಶಕ್ತರ ಶ್ರೇಯೋಭಿವೃದ್ಧಿಗಾಗಿ ತೊಡಗಿಸಿಕೊಳ್ಳುವ ಮೂಲಕ ಭಗವಂತನ ಸೇವೆ ನಡೆಸುತ್ತಿರುವ ಯಂಗ್ ಬ್ರದರ್ಸ್ ಸ್ಪೋರ್ಟ್ಸ್ ನೇತೃತ್ವದ ಸಂಘಟನೆಯ ಕಾರ್ಯ ಶ್ಲಾಘನೀಯ. ಬಡ ಜನರ ಶ್ರೇಯಸ್ಸಿನ ಮೂಲಕ ಸಮಾಜದ ಏಳಿಗೆಯನ್ನು ಕಾಣುವುದು ಅದ್ವಿತೀಯ ಕಾರ್ಯ ಎಂದು ಸಂಸದ ನಳಿನ್ ಕುಮಾರ್ ಕಟೀಲು ಅಭಿಪ್ರಾಯಪಟ್ಟರು.
ಪಾಂಡೇಶ್ವರ ದೇವಳದ ದೀಪೋತ್ಸವದ ಅಂಗವಾಗಿ ಯಂಗ್ ಬ್ರದರ್ಸ್ ಸ್ಪೋರ್ಟ್ಸ್ ಅಶ್ವತ್ಥಕಟ್ಟೆ ಇದರ ವತಿಯಿಂದ ಮಾಜಿ ಮೇಯರ್ ದಿವಾಕರ ಪಾಂಡೇಶ್ವರ ನೇತೃತ್ವದಲ್ಲಿ ಸೋಮವಾರ ರಾತ್ರಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.ಕಳೆದ 18 ವರ್ಷಗಳಿಂದ ನಿರಂತರವಾಗಿ ಸೇವಾ ಚಟುವಟಿಕೆಯ ಮೂಲಕ ಬಡವರ ಪಾಲಿಗೆ ಬೆಳಕನ್ನು ಹರಿಸುವ ಕೆಲಸ ಮಾಡುತ್ತಿರುವುದು ಯುವ ಜನರಿಗೆ ಪ್ರೇರಣೆಯಾಗಿದೆ. ಇನ್ನಷ್ಟು ಸೇವಾ ಕಾರ್ಯಕ್ರಮಗಳು ನಡೆಯುವ ಮೂಲಕ ಅಭಿವೃದ್ಧಿಯ ಸಮಾಜ ನಿರ್ಮಾಣವಾಗಲಿ ಎಂದರು.
ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ದಿವಾಕರ ಪಾಂಡೇಶ್ವರ ಅವರು ಸಮಾಜ ಕಾರ್ಯದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ಯಂಗ್ ಬ್ರದರ್ಸ್ ಸ್ಪೋರ್ಟ್ಸ್ ಮೂಲಕ ಮಾಡುತ್ತಿರುವ ಸೇವಾ ಚಟುವಟಿಕೆ ಅಭೂತಪೂರ್ವ ಕಾರ್ಯ ಎಂದರು.
ಸ್ಟಾರ್ ನೈಟ್ ಕಾರ್ಯಕ್ರಮದ ಸಂಘಟಕ, ಮಾಜಿ ಮೇಯರ್ ದಿವಾಕರ ಪಾಂಡೇಶ್ವರ ಅಧ್ಯಕ್ಷತೆ ವಹಿಸಿದ್ದರು. ಸಮಾಜದ ನಾಗರಿಕರು, ದಾನಿಗಳು ಹಾಗೂ ಯಂಗ್ ಬ್ರದರ್ಸ್ ತಂಡದ ಸಹಕಾರದಿಂದಾಗಿ ಸೇವಾ ಚಟುವಟಿಕೆಯಲ್ಲಿ ತೊಡಗಲು ಸಾಧ್ಯವಾಗಿದೆ ಎಂದವರು ಹೇಳಿದರು.
ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಮಾಜಿ ಮೇಯರ್‌ಗಳಾದ ಪ್ರೇಮಾನಂದ ಶೆಟ್ಟಿ, ಜಯಾನಂದ ಅಂಚನ್, ಬಿಜೆಪಿ ದಕ್ಷಿಣ ಮಂಡಲದ ಅಧ್ಯಕ್ಷ ವಿಜಯ ಕುಮಾರ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.ಯಂಗ್ ಬ್ರದರ್ಸ್ ಅಧ್ಯಕ್ಷ ರಾಜೇಶ್ ಪಾಂಡೇಶ್ವರ ಸ್ವಾಗತಿಸಿದರು. ವಿಶ್ವಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್ ವರದಿ ವಾಚಿಸಿ, ವಂದಿಸಿದರು. ಮಂಜುಳಾ ಶೆಟ್ಟಿ ನಿರೂಪಿಸಿದರು.
ಬಳಿಕ ಸ್ಟಾರ್ ನೈಟ್ ಸಂಗೀತ ರಸಮಂಜರಿ ಕಾರ್ಯಕ್ರಮ ಜರಗಿತು. ನಟ ರೂಪೇಶ್ ಶೆಟ್ಟಿ ವಿಶೇಷ ಆಹ್ವಾನಿತರಾಗಿದ್ದರು.
29 ಮಂದಿಗೆ ಹೊಲಿಗೆ ಯಂತ್ರ ವಿತರಣೆ
ಮಂಗಳೂರು ಪಾಲಿಕೆಯ ವಿವಿಧ ವಾರ್ಡ್‌ಗಳ 29 ಮಂದಿಗೆ ಹೊಲಿಗೆ ಯಂತ್ರ ಹಾಗೂ ಒಬ್ಬರಿಗೆ ಗಾಲಿ ಕುರ್ಚಿ ವಿತರಿಸಲಾಯಿತು. ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲಾಯಿತು. ಕರಾಟೆಪಟು ಋತ್ವಿನ್ ಆರ್.ವಿ. ಅವರನ್ನು ಸಮ್ಮಾನಿಸಲಾಯಿತು. ಸಾಮಾಜಿಕ ರಂಗದ ಸಾಧನೆಗೆ ರಾಜ್ಯೋತ್ಸವ ಪ್ರಶಸ್ತಿ ಪಡೆದ ಉಳ್ಳಾಲ ಮಾರುತಿ ಜನ ಸೇವಾ ಸಂಘ ಹಾಗೂ ಈ ಬಾರಿ ಮೂರು ಕಡೆ ಹುಲಿ ವೇಷ ಸ್ಫರ್ಧೆಯಲ್ಲಿ ಚಾಂಪಿಯನ್ ಆದ ಮುಳಿಹಿತ್ಲು ಫ್ರೆಂಡ್ಸ್ ಸರ್ಕಲ್ ಜಗದಂಬಾ ಹುಲಿ ತಂಡವನ್ನು ಗೌರವಿಸಲಾಯಿತು