ಮಂಗಳೂರು: ಕುದುರೆಮುಖ ವನ್ಯಜೀವಿ ವಿಭಾಗದ ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಮೇ 1 ರಿಂದ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪ್ರವಾಸಿಗರ ಉಪಯೋಗಕ್ಕೆ ರಾಷ್ಟ್ರೀಯ ಉದ್ಯಾನವನದಲ್ಲಿ ಹಾದು ಹೋಗಿರುವ ರಸ್ತೆಗಳಲ್ಲಿ ಇರುವ ಮುಳ್ಳೂರು ತನಿಖಾ ಠಾಣೆ, ಬಸ್ರಿಕಲ್ಲು ತನಿಖಾ ಠಾಣೆ, ಹಾಗೂ ತನಿಕೋಡು ತನಿಖಾ ಠಾಣೆಯಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದ್ದು, ಪ್ರವಾಸಿಗರು ಇದರ ಸಂಪೂರ್ಣ ಪ್ರಯೋಜನ ಪಡೆದುಕೊಂಡು ಲಭ್ಯ ನೀರನ್ನು ಅಲ್ಲಿಯೇ ಕುಡಿದು ಮುಂದುವರಿಯಲು ಕೋರಲಾಗಿದೆ. ಪ್ರವಾಸಿಗರು ಯಾವುದೇ ಪ್ಲಾಸ್ಟಿಕ್ ಬಾಟಲಿ ತೆಗೆದುಕೊಂಡು ಹೋಗುವುದನ್ನು ಸಂಪೂರ್ಣ ನಿಷೇಧಿಸಲಾಗಿದ್ದು ವಾಹನದಲ್ಲಿ ಇರುವ ಯಾವುದೇ ಪ್ಲಾಸ್ಟಿಕ್ ಬಾಟಲಿಗಳನ್ನು ತನಿಖಾ ಠಾಣೆಯಲ್ಲಿ ನಿರ್ಮಿಸಲಾಗಿರುವ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಣಾ ಘಟಕದಲ್ಲಿ ಹಾಕಿ ಪ್ರಯಾಣವನ್ನು ಮುಂದುವರಿಸಲು ಕುದುರೆಮುಖ ವನ್ಯಜೀವಿ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ.
