ಮ೦ಗಳೂರು: ಪ್ರಧಾನ ಮಂತ್ರಿಗಳ ಮಹತ್ವಾಕಾಂಕ್ಷಿ ಯೋಜನೆಯಾದ “ಪಿಎಂ ಸ್ವನಿಧಿ” “ಪಿಎಂ ವಿಶ್ವಕರ್ಮ” ಸೇರಿದಂತೆ ಪ್ರಧಾನ ಮಂತ್ರಿಗಳ ವಿವಿಧ ಯೋಜನೆಯಡಿಯಲ್ಲಿ ನೀಡಲಾಗುವ ಸಾಲ ಸೌಲಭ್ಯಗಳ ಬಗ್ಗೆ ನಗರದ ಕೊಡಿಯಾಲ್ ಬೈಲ್ ನಲ್ಲಿರುವ ಅಟಲ್ ಸೇವಾ ಕೇಂದ್ರದಲ್ಲಿ ಶಾಸಕ ವೇದವ್ಯಾಸ್ ಕಾಮತ್ ಅವರು ಬೀದಿಬದಿ ವ್ಯಾಪಾರಿಗಳ ಸಂಘದ ಹಾಗೂ ವಿವಿಧ ಸಮುದಾಯಗಳ ಮುಖಂಡರ ಸಭೆ ನಡೆಸಿದರು.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ, ಹಲವು ವಿವಿಧ ಬೀದಿಬದಿ ವ್ಯಾಪಾರಿಗಳಿಗೆ “ಪಿಎಂ ಸ್ವನಿಧಿ ಯೋಜನೆ” ಮೂಲಕ ನೀಡಲಾಗುವ ಸಾಲ ಸೌಲಭ್ಯ, ಹಾಗೂ ಹಲವು ರೀತಿಯ ಸಾಂಪ್ರದಾಯಿಕ ಕರಕುಶಲತೆಯಲ್ಲಿ ತೊಡಗಿರುವ ವಿಶ್ವಕರ್ಮ ಸಮುದಾಯದ ಜನರಿಗೆ “ಪಿಎಂ ವಿಶ್ವಕರ್ಮ” ಮೂಲಕ ಸಿಗುವ ಸೌಲಭ್ಯಗಳ ಬಗ್ಗೆ ಶಾಸಕರು ಸಮಗ್ರವಾಗಿ ಮಾಹಿತಿ ನೀಡಿದರು.
ದುಡಿಯುವ ವರ್ಗಗಳಿಗೆ ವಿವಿಧ ಹಂತಗಳಲ್ಲಿ ಸಿಗುವ ಹಲವು ರೀತಿಯ ಸಾಲ ಸೌಲಭ್ಯಗಳ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಹಾಗೂ ಅಗತ್ಯವಿರುವ ಎಲ್ಲಾ ಅರ್ಹರಿಗೂ ಈ ಯೋಜನೆಗಳ ಬಗ್ಗೆ ಮಾಹಿತಿ ನೀಡುವಂತೆ ಶಾಸಕರು ಮನವಿ ಮಾಡಿದರು.
ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಬಿಜೆಪಿ ದಕ್ಷಿಣ ಮಂಡಲದ ಅಧ್ಯಕ್ಷ ವಿಜಯ್ ಕುಮಾರ್ ಶೆಟ್ಟಿ, ಮಾಜಿ ಮೇಯರ್ ದಿವಾಕರ್ ಪಾಂಡೇಶ್ವರ, ಮಾಜಿ ಉಪಮೇಯರ್ ಪೂರ್ಣಿಮಾ, ಬಿಜೆಪಿ ದಕ್ಷಿಣ ಮಂಡಲದ ಪ್ರಧಾನ ಕಾರ್ಯದರ್ಶಿ ರೂಪಾ ಡಿ ಬಂಗೇರ, ಮ.ನ.ಪಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಗಣೇಶ್ ಕುಲಾಲ್, ಭರತ್ ಸೂಟರ್ ಪೇಟೆ, ಬಿಜೆಪಿ ಹಿರಿಯ ಮುಖಂಡ ನಿತಿನ್ ಕುಮಾರ್ ಹಾಗೂ ಮ.ನ.ಪಾ ಅಧಿಕಾರಿಗಳು ಉಪಸ್ಥಿತರಿದ್ದರು.