ಪುತ್ತೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಯಕರ್ತರ ಸಭೆ ಸೋಮವಾರ ಮಂಜಲ್ಪಡ್ಪು ಉದಯಗಿರಿ ಸಭಾಭವನದಲ್ಲಿ ನಡೆಯಿತು.
ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ರಾಜ್ಯದಿಂದ ಸಮೀಕ್ಷೆ ನಡೆಸುತ್ತಿದ್ದಾರೆ. ಅವರು ಕರೆ ಮಾಡಿ ತಿಳಿಸಿದರು, ಸ್ವಲ್ಪ ಪ್ರಯತ್ನ ಮಾಡಿದರೆ 75ರಿಂದ 1 ಲಕ್ಷದ ಮತದ ಅಂತರದಿಂದ ಗೆಲ್ಲಬಹುದು. ಆದ್ದರಿಂದ ಈ ಬಾರಿ ನಮ್ಮ ಪ್ರಯತ್ನವನ್ನು ಹೆಚ್ಚು ಹಾಕಿ, ಅಭ್ಯರ್ಥಿಯನ್ನು ಗೆಲ್ಲಿಸಿಕೊಡಬೇಕು ಎಂದರು.
ಪದ್ಮರಾಜ್ ಆರ್. ಮಾತನಾಡಿ, ಗ್ರಾಮೀಣ ಪ್ರದೇಶದ ಜನರ ಸಮಸ್ಯೆಗಳ ಬಗ್ಗೆ ಅರಿವಿದೆ. ಜನರು ನನ್ನ ಮೇಲೆ ಇಟ್ಟಿರುವ ನಿರೀಕ್ಷೆಗಳ ಬಗ್ಗೆಯೂ ಅರಿವಿದೆ. ಕಾಂಗ್ರೆಸ್ ಲೋಕಸಭಾ ಸದಸ್ಯರು ಅಧಿಕಾರದಲ್ಲಿದ್ದಾಗ ಈ ಜಿಲ್ಲೆಗೆ ಅನೇಕ ಯೋಜನೆಗಳು ಬಂದಿವೆ. ನಂತರ ಸಾಮರಸ್ಯದ ವೈಭವಕ್ಕೆ ತೊಡಕು ಮಾಡಿ, ಜಾತಿ – ಧರ್ಮಗಳ ನಡುವೆ ಕಂದಕ ಸೃಷ್ಟಿಸಿ ಅಧಿಕಾರಕ್ಕೆ ಬಂದರು. ಅಧಿಕಾರಕ್ಕೆ ಬಂದ ಬಳಿಕ ಯಾವೊಂದು ಹೊಸ ಯೋಜನೆಗಳನ್ನು ಜಿಲ್ಲೆಗೆ ತಂದಿಲ್ಲ. ಆದ್ದರಿಂದ ಜಿಲ್ಲೆಯ ಸಾಮರಸ್ಯವನ್ನು ಮತ್ತೊಮ್ಮೆ ಹುಟ್ಟುಹಾಕಬೇಕಾಗಿದೆ. ಹೊಸ ಯೋಜನೆಗಳನ್ನು ಜಿಲ್ಲೆಗೆ ತರಬೇಕಾಗಿದೆ ಎಂದರು.
ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ಜಿಲ್ಲೆಯ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಕೇಂದ್ರದ ಕಾಂಗ್ರೆಸ್ ನಾಯಕರು ಜೊತೆಯಾಗಿದ್ದರು. ಆದ್ದರಿಂದ ಕಾಂಗ್ರೆಸ್ ಬಗ್ಗೆ ಮಾತನಾಡುವ ಹಕ್ಕು ಬಿಜೆಪಿಗರಿಗೆ ಇಲ್ಲ ಎಂದರು, ಪದ್ಮರಾಜ್ ಅವರ ಗೆಲುವು ನಿಶ್ಚಿತ. ಮುಂದಿನ ಕೆಲ ದಿನ ನಿದ್ದೆ ಕಡಿಮೆ ಮಾಡಿ ಪದ್ಮರಾಜ್ ಅವರನ್ನು ಗೆಲ್ಲಿಸಿಕೊಡಿ. ಮುಂದಿನ ಐದು ವರ್ಷ ಪದ್ಮರಾಜ್ ಅವರು ನಿದ್ದೆಗೆಟ್ಟು ನಮ್ಮ ಏಳಿಗೆಗಾಗಿ ಶ್ರಮಿಸುತ್ತಾರೆ ಎಂದರು.
ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ಗ್ಯಾರೆಂಟಿ ಯೋಜನೆ ಕಸದ ಬುಟ್ಟಿಗೆ ಎಂದು ಹೇಳುತ್ತಿದ್ದವರು ಇಂದು ನಮ್ಮದೊಂದು ಗ್ಯಾರೆಂಟಿ ಇದೆ ಎಂದು ಹೇಳುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಭೂತಪೂರ್ವ ಜಯ ಸಾಧಿಸುತ್ತಿದ್ದಂತೆ, ಗ್ಯಾರೆಂಟಿ ಆಶ್ವಾಸನೆಗಳನ್ನು ಜಾರಿಗೆ ತರಲಾಗಿದೆ. ಇದನ್ನು ಮನೆಮನೆಗೂ ತಲುಪಿಸಿ ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಅವರನ್ನು ಗೆಲ್ಲಿಸಿಕೊಡಬೇಕು ಎಂದರು.
ಕಾವು ಹೇಮನಾಥ್ ಶೆಟ್ಟಿ ,ನೈಋತ್ಯ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ವಿಶ್ವನಾಥ್, ಡಾ. ರಾಜಾರಾಮ್, ಕಾವು ಹೇಮನಾಥ ಶೆಟ್ಟಿ, ಡಿಸಿಸಿ ಜಿಲ್ಲಾ ವಕ್ತಾರ ಎಂ.ಎಸ್. ಮಹಮ್ಮದ್, ಮಹಮ್ಮದ್ ಆಲಿ, ಮಹಮ್ಮದ್ ಬಡಗನ್ನೂರು, ಸೇವಾದಳದ ಜಿಲ್ಲಾಧ್ಯಕ್ಷ ಜೋಕಿಂ ಡಿಸೋಜಾ, ಶ್ರೀಪ್ರಸಾದ್ ಪಾಣಾಜೆ, ರಮಾನಾಥ್ ವಿಟ್ಲ, ನವೀನ್ ರೈ, ಫಾರೂಕ್ ಪೆರ್ನೆ, ಶ್ರೀನಿವಾಸ್ ವಿಟ್ಲ ಮೊದಲಾದವರು ಉಪಸ್ಥಿತರಿದ್ದರು