ಮಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲೂ ಗುಣಮಟ್ಟದ ಚಿಕಿತ್ಸೆ ಸಿಗುತ್ತದೆ ಎನ್ನುವುದಕ್ಕೆ ವೆನ್ಲಾಕ್ ಆಸ್ಪತ್ರೆ ಉತ್ತಮ ನಿದರ್ಶನ. ಸರ್ಕಾರಿ ಆಸ್ಪತ್ರೆಗಳ ಬಗ್ಗೆ ತಾತ್ಸಾರ ಬೇಡ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ ಹೇಳಿದರು.
ಮಂಗಳೂರಿನ ವೆನ್ಲಾಕ್ ಸರ್ಕಾರಿ ಆಸ್ಪತ್ರೆಯ ಸಿಟಿವಿಎಸ್ ತಂಡ ವಿಶೇಷ ಶಸ್ತ್ರಚಿಕಿತ್ಸೆ ನಡೆಸಿ 12 ವರ್ಷದ ಬಾಲಕನ ಕುತ್ತಿಗೆಯ ಮೂಲಕ ಎದೆಗೂಡಿಗೆ ಸೇರಿದ ತೆಂಗಿನಗರಿ ಹಾಗೂ ಬಾಲಕನ ಕುತ್ತಿಗೆಗೆ ಹಾಕಿಕೊಂಡಿದ್ದ ಚೈನ್ ಹೊರತೆಗೆಯುವ ಮೂಲಕ ಜೀವದಾನ ನೀಡಿರುವ ವೈದ್ಯರ ಸಾಧನೆಯನ್ನು ಗುರುತಿಸಿ ವೈದ್ಯರ ತಂಡವನ್ನು ಸನ್ಮಾನಿಸಿ ಮಾತನಾಡಿದರು.
ವೆನ್ಲಾಕ್ ಆಸ್ಪತ್ರೆಯ ಹೃದ್ರೋಗ ವಿಭಾಗ ಮುಖ್ಯಸ್ಥ ಡಾ.ಸುರೇಶ್ ಪೈ ನೇತೃತ್ವದ ತಂಡ ಅಪೂರ್ವ ಶಸ್ತ್ರಚಿಕಿತ್ಸೆ ಮೂಲಕ ಬಾಲಕನಿಗೆ ಜೀವದಾನ ನೀಡುವ ಮೂಲಕ ದೇಶಕ್ಕೆ ಉತ್ತಮ ಸಂದೇಶ ನೀಡಿದೆ. ಇವರ ಕಾರ್ಯ ನಿಜಕ್ಕೂ ಶ್ಲಾಘನೀಯ. ದಿನೇಶ್ ಗುಂಡೂರಾವ್ ಆರೋಗ್ಯ ಸಚಿವರಾದ ಬಳಿಕ ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ವ್ಯವಸ್ಥೆಗಳನ್ನು ಕಲ್ಪಿಸಿ ಉತ್ತಮ ಚಿಕಿತ್ಸೆ ನೀಡುವ ಮೂಲಕ ಖಾಸಗಿ ಆಸ್ಪತ್ರೆಗೂ ಪೈಪೋಟಿ ನೀಡುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಸುರೇಶ್ ಪೈ, ವೆನ್ಲಾಕ್ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಸಿಗುತ್ತಿದೆ. ಇಲ್ಲಿನ ಚಿಕಿತ್ಸೆ ಬಗ್ಗೆ ಯಾವುದೇ ಮುಜುಗರಬೇಡ. ಖಾಸಗಿ ಆಸ್ಪತ್ರೆಗೂ ಮೀರುವಂತಹ ಚಿಕಿತ್ಸೆ ಇಲ್ಲಿ ನೀಡಲಾಗುತ್ತದೆ. ಆದರೆ ಪ್ರಚಾರದಲ್ಲಿ ಹಿಂದೆ ಬಿದ್ದಿದ್ದೇವೆ ಎಂದರು.
ಕಾರ್ಡಿಯೋಥೋರಾಸಿಕ್ ಮತ್ತು ವ್ಯಾಸ್ ಕ್ಯುಲರ್ ಸರ್ಜರಿ ವಿಭಾಗದ ಡಾ.ಸುರೇಶ್ ಪೈ, ಡಾ.ಸೂರಜ್ ಪೈ, ನಸಿರ್ಂಗ್ ಅಧಿಕಾರಿ ವಹೀದಾ , ಡಾ.ಪ್ರಣವ್, ಡಾ.ಶುಭಂ ಗುಪ್ತಾ, ಜಿಲ್ಲಾ ವೈದ್ಯಾಧಿಕಾರಿ ಡಾ.ಶಿವಪ್ರಕಾಶ್, ಪ್ರಾದೇಶಿಕ ವೈದ್ಯಕೀಯ ಅಧಿಕಾರಿ ಡಾ.ಸುಧಾಕರ್, ಜಿಲ್ಲಾ ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಪದ್ಮನಾಭ ಅಮೀನ್, ಪ್ರಮೀಳಾ ಈಶ್ವರ್, ಶಶೀಧರ ಕೊಠಾರಿ, ಅನೀಲ್, ನಾಮನಿದೇಶೀತ ಪಾಲಿಕೆ ಸದಸ್ಯ ಸತೀಶ್, ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯ ಸಮರ್ಥ್ ಭಟ್, ಕಾರ್ಮಿಕ ಘಟಕದ ರಾಜ್ಯ ಪ್ರ.ಕಾರ್ಯದರ್ಶಿ ವಹಬ್ ಕುದ್ರೋಳಿ, ಸಾಮಾಜಿಕ ಕಾರ್ಯಕರ್ತೆ ಮಂಜುಳಾ ನಾಯಕ್, ಟಿ.ಸಿ ಗಣೇಶ್ , ಕಾರ್ಮಿಕ ಘಟಕದ ಮುಖಂಡರಾದ ಜಯರಾಜ್ ಅಂಚನ್, ಸೀತಾರಾಮ್ ಶೆಟ್ಟಿ , ನೀತ್ ಶರಣ್ ಮತ್ತಿತರು ಉಪಸ್ತಿತರಿದ್ದರು.
ಮಡಿಕೇರಿಯಲ್ಲಿ ಕಾಫಿ ಎಸ್ಟೇಟ್‌ನಲ್ಲಿ ಶನಿವಾರ ಕಮಲ್ ಹುಸೇನ್ (12) ಎಂಬಾತ ಆಟವಾಡುತ್ತಿದ್ದಾಗ ಹತ್ತಿರದಲ್ಲಿದ್ದ ತೆಂಗಿನ ಮರದ ಗರಿ ಬಾಲಕನ ಮೇಲೆ ಬಿದ್ದು ಅವಘಡ ಸಂಭವಿಸಿತ್ತು. ಇದರಿಂದ ತೆಂಗಿನಗರಿಯ (ಅಂದಾಜು 20 ಸೆಂ.ಮೀ. ಉದ್ದ) ಭಾಗ ಬಾಲಕನ ಕುತ್ತಿಗೆಯಲ್ಲಿ ಹಾಕಿಕೊಂಡಿದ್ದ ಸ್ಟೀಲ್ ಚೈನ್‌ನೊಂದಿಗೆ ಎದೆಯೊಳಗೆ ಹೊಕ್ಕಿತ್ತು. ಮಡಿಕೇರಿ ಸರಕಾರಿ ಆಸ್ಪತ್ರೆಯಲ್ಲಿ ಬಾಲಕನಿಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆಸ್ಲಾಕ್ ಆಸ್ಪತ್ರೆಗೆ ರೆಫರ್ ಮಾಡಲಾಗಿತ್ತು. ತಕ್ಷಣವೇ ಮಂಗಳೂರಿನ ವೆನ್ಸಾಕ್ ಸರಕಾರಿ ಆಸ್ಪತ್ರೆಯನ್ನು ಸಂಪರ್ಕಿಸಿ ಬಾಲಕನಿಗೆ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ತೆಂಗಿನ ಗರಿಯ ತುಂಡು ಹಾಗೂ ಚೈನ್ ಹೊರತೆಗೆದು ಬಾಲಕನಿಗೆ ಹೊಸ ಬದುಕು ನೀಡಲಾಗಿತ್ತು
