ಮಂಗಳೂರು: ನಗರದ ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿರುವ ಸೌಪರ್ಣಕ ಸಭಾಂಗಣದಲ್ಲಿ ಶಾಸಕ ವೇದವ್ಯಾಸ್ ಕಾಮತ್ ನೇತೃತ್ವದ ಸಭೆಯಲ್ಲಿ, ರೈಲ್ವೆ ಲೈನ್ ಹಾದು ಹೋಗುವ ಕೊಂಗೂರು ಮಠದ ರಸ್ತೆ, ಅತ್ತಾವರದ ಸೈಕಲ್ ಟ್ರ್ಯಾಕ್ ರಸ್ತೆ, ಸಿಲ್ವರ್ ಗೇಟ್ ರಸ್ತೆ, ಅಳಪೆ ಮಠ, ಸೂರ್ಯ ನಗರ, ನೂಜಿ, ಹೊಯ್ಗೆ ಬಜಾರ್, ಮಹಾಕಾಳಿ ಪಡ್ಪು, ಆದರ್ಶ ನಗರ, ಬೋಳಾರ, ಹಾಗೂ ಜೆಪ್ಪು ವಾರ್ಡಿನ ಕೆಲವು ಭಾಗಗಳಲ್ಲಿ ಇರುವಂತಹ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ಮ.ನ.ಪಾ ಅಧಿಕಾರಿಗಳ ಮುಖಾಂತರ ರೈಲ್ವೆ ಇಲಾಖೆಗೆ ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸುವುದು, ಆನ್ಲೈನ್ ನಲ್ಲಿ ಅರ್ಜಿಗಳನ್ನು ಸಲ್ಲಿಸುವುದು, ಹಾಗೂ ರಸ್ತೆಗಳನ್ನು ನಿರ್ಮಿಸುವುದು, ಇತ್ಯಾದಿ ಕ್ರಮಗಳ ಬಗ್ಗೆ ಸಮಗ್ರವಾಗಿ ಚರ್ಚಿಸಲಾಯಿತು.
ಇತ್ತೀಚಿಗೆ ಜಿಲ್ಲಾ ಪಂಚಾಯತ್ ನ ನೇತ್ರಾವತಿ ಸಭಾಂಗಣದಲ್ಲಿ ಮಾನ್ಯ ಸಂಸದನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದ, ರೈಲ್ವೆ ಇಲಾಖೆಯ ಡಿ.ಆರ್.ಎಂ ಮತ್ತು ಉನ್ನತಾಧಿಕಾರಿಗಳು ಹಾಜರಿದ್ದ ಸಭೆಯಲ್ಲಿ ಮಂಗಳೂರು ನಗರ ದಕ್ಷಿಣ ವ್ಯಾಪ್ತಿಯಲ್ಲಿ ರೈಲ್ವೆ ಇಲಾಖೆಗೆ ಸಂಬಂಧಿಸಿದ ಹಲವು ಸಮಸ್ಯೆಗಳ ಬಗ್ಗೆ ಶಾಸಕ ವೇದವ್ಯಾಸ್ ಕಾಮತ್ ಅವರು ವಿಶೇಷ ಗಮನ ಸೆಳೆದಿದ್ದರು.ಅದಕ್ಕೆ ಸ್ಪಂದಿಸಿದ್ದ ಸಂಸದರು ಹಾಗೂ ರೈಲ್ವೆ ಇಲಾಖೆಯ ಡಿ.ಆರ್.ಎಂ, ಶಾಸಕರು ಉಲ್ಲೇಖಿಸಿದ ಎಲ್ಲಾ ಸಮಸ್ಯೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಸಂಗ್ರಹಿಸಿ, ಅದಕ್ಕೆ ಶೀಘ್ರವಾಗಿ ಪರಿಹಾರವನ್ನು ಕಂಡುಕೊಳ್ಳುವ ಸಲುವಾಗಿ ಶಾಸಕರ ನೇತೃತ್ವದಲ್ಲಿ ಸ್ಥಳೀಯ ಮ.ನ.ಪಾ ಸದಸ್ಯರು ಹಾಗೂ ಅಧಿಕಾರಿಗಳು, ರೈಲ್ವೆ ಅಧಿಕಾರಿಗಳು ಸಭೆ ನಡೆಸಿ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲು ಅವಕಾಶವನ್ನು ಕಲ್ಪಿಸಿಕೊಡಲಾಗಿತ್ತು.
ಕೆಲವೊಂದು ಅಗತ್ಯ ಬದಲಾವಣೆಗಳಿಗೆ ಅವಕಾಶ ಮಾಡಿಕೊಟ್ಟ ಈ ಸಭೆಯು ಯಶಸ್ವಿಯಾಗಿ ನಡೆದಿದ್ದು ಈ ಭಾಗದ ಜನರ ಹಲವಾರು ವರ್ಷಗಳ ಬೇಡಿಕೆಗಳಿಗೆ ಮನ್ನಣೆ ಸಿಗಲಿದೆ ಎಂದು ಶಾಸಕರು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪಾಲಕ್ಕಾಡ್ ರೈಲ್ವೆ ವಿಭಾಗದ ಅಸಿಸ್ಟೆಂಟ್ ಡಿವಿಜಿನಲ್ ಇಂಜಿನಿಯರ್ ವಿಜಯ್ ಸುಂದರ್, ರೈಲ್ವೆ ಅಧಿಕಾರಿಗಳಾದ ರಂಜಿತ್, ಸುದೀಪ್, ವೀಣಾ, ಮ.ನ.ಪಾ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ಮ.ನ.ಪಾ ಸದಸ್ಯರುಗಳಾದ ಶೋಭಾ ಪೂಜಾರಿ, ಭಾನುಮತಿ, ಕಿಶೋರ್ ಕೊಟ್ಟಾರಿ, ರೂಪಶ್ರೀ ಪೂಜಾರಿ, ಶೈಲೇಶ್ ಶೆಟ್ಟಿ, ಭರತ್ ಸೂಟರ್ ಪೇಟೆ, ಸಂದೀಪ್ ಗರೋಡಿ, ಹಾಗೂ ಅಜಯ್ ಕುಲಶೇಖರ, ತೇಜಸ್ ಕುಲಶೇಖರ ಮತ್ತು ಮ.ನ.ಪಾ ಅಧಿಕಾರಿಗಳು ಉಪಸ್ಥಿತರಿದ್ದರು