ಮಂಗಳೂರು : 2024-25 ನೇ ಸಾಲಿನ ಮುಂಗಾರು ಮಳೆ ಹಾಗೂ ಪ್ರಾಕೃತಿಕ ವಿಕೋಪದಿಂದ ಜೀವಹಾನಿ, ನೆರೆಹಾವಳಿ, ಜಾನುವಾರು, ಹಾಗೂ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಯಾವುದೇ ರೀತಿಯ ಹಾನಿಯಾಗದಂತೆ ಮುನ್ನೆಚ್ಚರಿಕೆ ವಹಿಸುವ ಬಗ್ಗೆ ಮಂಗಳೂರು ಉತ್ತರ ಹಾಗೂ ದಕ್ಷಿಣದ ಶಾಸಕರ ನೇತೃತ್ವದಲ್ಲಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಲಾಯಿತು.
ಶಾಸಕ ವೇದವ್ಯಾಸ ಕಾಮತ್ ಅವರು ಮಾತನಾಡಿ ಮಳೆಗಾಲ ಆರಂಭವಾಗಿದ್ದು ಅಗತ್ಯವಿರುವೆಡೆ ತುರ್ತಾಗಿ ಹೂಳೆತ್ತುವಿಕೆ ಮೂಲಕ ನೀರು ಸರಾಗವಾಗಿ ಹರಿಯುವಂತೆ ಮಾಡುವುದು, ನೆರೆಯ ಸಾಧ್ಯತೆ ಇರುವಂತಹ ಸ್ಥಳಗಳಲ್ಲಿ ಸ್ಥಳೀಯರಿಗೆ ಅಗತ್ಯ ಸಲಹೆ ಸೂಚನೆಗಳ ಸಹಿತ ಮುನ್ನೆಚ್ಚರಿಕೆ ನೀಡುವುದು, ತುರ್ತು ನಿರಾಶ್ರಿತರ ಕೇಂದ್ರ ತೆರೆಯುವುದು, ಮಳೆ ಹಾನಿಯಿಂದ ತೊಂದರೆಗೀಡಾಗುವ ಸಂತ್ರಸ್ತರ ಸಹಾಯಕ್ಕೆ ಹಾಗೂ ಪರಿಹಾರಕ್ಕಾಗಿ ಅಧಿಕಾರಿಗಳು ವಿಳಂಬ ನೀತಿ ಅನುಸರಿಸದೇ ಕೂಡಲೇ ಕ್ರಮ ಕೈಗೊಳ್ಳುವುದು, ಅಪಾಯಕಾರಿ ರೀತಿಯಲ್ಲಿರುವ ಮರ-ಗಿಡಗಳ ರೆಂಬೆ ಕೊಂಬೆಗಳನ್ನು ಕೂಡಲೇ ತೆಗೆಸುವುದು, ಹಾಗೂ ಯಾವುದೇ ಸನ್ನಿವೇಶದಲ್ಲಿಯೂ ದಿನದ 24 ಗಂಟೆಯೂ ಮೆಸ್ಕಾಂ ಸಿಬ್ಬಂದಿಗಳು ಕಾರ್ಯೋನ್ಮುಖರಾಗಿರುವಂತೆ ಸೂಚನೆ ನೀಡಿದರು.
ತಹಶೀಲ್ದಾರ್, ಸಿಇಓ, ಅಗ್ನಿಶಾಮಕ ಅಧಿಕಾರಿಗಳು, ಸೇರಿದಂತೆ ಅನೇಕ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.