26.8 C
Karnataka
Monday, April 7, 2025

ನದಿಮುಖಜ ಭೂಮಿ ಕೃಷಿ ಬಳಕೆಗೆ ರಾಜೇಶ್ ನಾಯಕ್‌ ಸಲಹೆ

ಮಂಗಳೂರು:ದ.ಕ. ಜಿಲ್ಲೆಯಾದ್ಯಂತ ನದಿಗಳ ಸುತ್ತಮುತ್ತಲಿನ ಭೂಮಿಯಲ್ಲಿ ಮಳೆಗಾಲವನ್ನು ಹೊರತುಪಡಿಸಿ ಇತರ ಅವಧಿಯಲ್ಲಿ ಕೃಷಿಗೆ ಬಳಸಿಕೊಳ್ಳುವ ಮೂಲಕ ಅಂತರ್ಜಲವನ್ನು ಕಾಯ್ದುಕೊಳ್ಳುವ ಜತೆಗೆ ವಿವಿಧ ಕೃಷಿ ಉತ್ಪನ್ನಗಳನ್ನೂ ಬೆಳೆಸಲು ಸಾಧ್ಯ ಎಂದು ಬಂಟ್ವಾಳ ಶಾಸಕ ಹಾಗೂ ಪ್ರಗತಿಪರ ಕೃಷಿಕರಾದ ರಾಜೇಶ್ ನಾಯಕ್‌ ಸಲಹೆ ನೀಡಿದ್ದಾರೆ.

ಸೋಮವಾರ ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಗೌರವ ಅತಿಥಿಯಾಗಿ ಭಾಗವಹಿಸಿ ಪತ್ರಕರ್ತರ ಜತೆಗಿನ ಸಂವಾದದ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿದರು.

ಮೇವಿನ ಕೊರತೆಯಿಂದ ಜಿಲ್ಲೆಯಲ್ಲಿ ದನ ಸಾಕಲು ಕೃಷಿಕರು ಹಿಂದೇಟು ಹಾಕುತ್ತಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ನದಿಗಳ ಸುತ್ತಮುತ್ತಲಲ್ಲಿ ಲಭ್ಯವಿರುವ ಜಾಗದಲ್ಲಿ ಜೋಳದ ಗಿಡಗಳನ್ನು ಬೆಳೆಯಬಹುದು. ಇದರಿಂದ ನದಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರಿನ ಒರತೆ ಹೆಚ್ಚುವುದಲ್ಲದೆ, ಗಿಡದಲ್ಲಿ ಜೋಳ ಹುಟ್ಟಿಕೊಂಡು ಅದನ್ನು ಕಟಾವಿಗೆ ಬರುವ ಮುನ್ನ ಬುಡ ಸಹಿತ ಕುಯ್ದುಕೊಂಡು ಪಶು ಆಹಾರವಾಗಿ ವರ್ಷವಿಡೀ ಬಳಕೆ ಮಾಡಬಹುದು. ಜಿಲ್ಲೆಯಲ್ಲಿ ನದಿಗಳ ಸುತ್ತಮುತ್ತಲು ಮಳೆಗಾಲದಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗುವುದರಿಂದ ಕಡಿಮೆ ಅವಧಿಯ ಇಂತಹ ಬೆಳೆ ಸೂಕ್ತ. ಒಡ್ಡೂರು ಫಾರ್ಮ್‌ನಲ್ಲಿ ಹಲವು ವರ್ಷಗಳಿಂದ ಈ ವ್ಯವಸ್ಥೆ ಜಾರಿಯಲ್ಲಿದೆ. ಈಗಾಗಲೇ ಕೊಯ್ಲ ಫಾರ್ಮ್‌ನಲ್ಲಿಯೂ ಪ್ರಾಯೋಗಿಕ ರೀತಿಯಲ್ಲಿ ಇದನ್ನು ಬೆಳೆಸಲಾಗುತ್ತಿದೆ. ಜಿಲ್ಲಾಡಳಿತದಿಂದಲೂ ನದಿಮುಖಜ ಭೂಮಿಯ ಸರ್ವೆ ಕಾರ್ಯ ನಡೆಯುತ್ತಿದೆ ಎಂದವರು ಹೇಳಿದರು.

ಕೃಷಿ ಉತ್ಪತ್ತಿ ದ್ವಿಗುಣ ಆದಾಗ ದೇಶ ಸೂಪರ್ ಪವರ್

ಮುಂದಿನ ಜನಾಂಗಕ್ಕೆ ಆಹಾರಕ್ಕೆ ಪೂರಕವಾದ ಕೃಷಿಯ ಜತೆ, ತ್ಯಾಜ್ಯ ನಿರ್ವಹಣೆ ಬಹು ದೊಡ್ಡ ಉದ್ಯಮವಾಗಿ ಪರಿಣಮಿಸಲಿದೆ. ಇದಕ್ಕೆ ಅನುಗುಣವಾಗಿ ತಂತ್ರಜ್ಞಾನದಲ್ಲಿ ಬದಲಾವಣೆ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಸರಕಾರದಿಂದ ಉತ್ತೇಜನ ದೊರಕಿದರೆ ಕೃಷಿ ಉತ್ಪತ್ತಿ ದ್ವಿಗುಣವಾಗಲಿದೆ. ಇದರಿಂದ ದೇಶ ಸೂಪರ್ ಆಗಿ ಹೊರಹೊಮ್ಮಲಿದೆ ಎಂದು ರಾಜೇಶ್ ನಾಯ್ಕ ವಿಶ್ಲೇಷಿಸಿದರು.

ನಾನು ಒಡ್ಡೂರು ಫಾರ್ಮ್‌ನಲ್ಲಿ ಕೃಷಿ ಮಾಡುತ್ತೇನೆಂದಾಗ ನನ್ನನ್ನು ಮೂದಲಿಸಿದವರೇ ಹೆಚ್ಚು. ಆದರೆ ಬರಡು ಭೂಮಿ ಈಗ ಸಮೃದ್ಧ ಹಾಗೂ ಹಚ್ಚ ಹಸುರಿನ ಕೃಷಿ ಭೂಮಿಯಾಗಿ ಪರಿವರ್ತನೆಯಾಗಿದೆ. 2 ಎಕರೆ ಕೆರೆ ನಿರ್ಮಾಣ ಮಾಡಿ ಸುತ್ತಮುತ್ತ ಬೆಳೆ ಬೆಳೆಯುವ ಮೂಲಕ ಪ್ರಸ್ತುತ ಕನಿಷ್ಟ 12 ಅಡಿ ನೀರು ಸದಾ ಇರುತ್ತದೆ. ಇದರಿಂದ ಸುತ್ತಮುತ್ತಲಿನ ಪ್ರದೇಶದಲ್ಲಿಯೂ ನೀರಿನ ಒರತೆ ಹೆಚ್ಚಳವಾಗಿದೆ ಎಂದವರು ಹೇಳಿದರು.

ಕೃಷಿಯಿಂದ ಹಿಂದೆ ಸರಿಯುತ್ತಿರುವ ಕುಟುಂಬಗಳ ಯುವಜನಾಂಗವನ್ನು ಉದ್ದೇಶಿಸಿ ಮಾತನಾಡಿದ ಅವರು, ಕನಿಷ್ಟ ಎರಡು ತಿಂಗಳು ಕೆಲಸ ಮಾಡಿ ಸುಮಾರು 8 ತಿಂಗಳು ಕಾಲ ಬದುಕಿಗೆ ಬೇಕಾದಷ್ಟು ಆಹಾರ ವಸ್ತುಗಳೊಂದಿಗೆ ಜೀವನ ಸಾಗಿಸಲು ಕೃಷಿ ಪೂರಕ ಆದಾಯಭರಿತ ಉದ್ಯಮ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ಪತ್ರಕರ್ತ ಪ್ರೊ. ಬಾಲಕೃಷ್ಣ ಗಟ್ಟಿ, ಪ್ರಪಂಚವನ್ನು ಒಗ್ಗೂಡಿಸುವ ಶಕ್ತಿ ಹೊಂದಿರುವ ಕೃಷಿ ಉಳಿದರೆ ಮಾತ್ರವೇ ದೇಶ ಉಳಿಯಲು ಸಾಧ್ಯ ಎಂದರು.

ನಮ್ಮ ಸುತ್ತಮುತ್ತಲಿನಲ್ಲಿ ಉಪಯೋಗವಾದ ಗುಡ್ಡಕಾಡು ಪ್ರದೇಶ, ರಸ್ತೆ, ರೈಲ್ವೇ ಹಾಗೂ ನದಿಗಳ ಸುತ್ತಮುತ್ತಲಿನ ಜಾಗು ಪ್ರದೇಶವನ್ನು ಕೃಷಿಗೆ ಬಳಸಿಕೊಳ್ಳುವ ಮೂಲಕ ಆಹಾರೋತ್ಪಾದನೆಯಲ್ಲೂ ಸ್ವಾವಲಂಬಿಯಾಗಲು ಸಾಧ್ಯ ಎಂದು ಹೇಳಿದ ಅವರು, ಜಿಲ್ಲೆಯ ಜನಸಾಮಾನ್ಯರ ಸಾಧನೆಗಳನ್ನು ಬೆಳೆಕಿಗೆ ತರುವಲ್ಲಿ ಮಂಗಳೂರು ಪ್ರೆಸ್‌ಕ್ಲಬ್ ಅತ್ಯುತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಶ್ಲಾಘಿಸಿದರು.

ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್‌ನ ಅಧ್ಯಕ್ಷ ರಾಮಕೃಷ್ಣ ಆರ್. ಉಪಸ್ಥಿತರಿದ್ದರು.ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಮುಹಮ್ಮದ್ ಆರಿಫ್ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಇಬ್ರಾಹೀಂ ಅಡ್ಕಸ್ಥಳ ವಂದಿಸಿದರು.

15 ಟನ್ ತ್ಯಾಜ್ಯದಿಂದ 700 ಕೆಜಿ ಸಿಎನ್‌ಜಿ

ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ನಿರ್ವಹಣೆಗೆ ಕಷ್ಟಸಾಧ್ಯವೆನಿಸಿದ್ದ ಹಸಿ ತ್ಯಾಜ್ಯವನ್ನು ಉಪಯೋಗಿಸಿಕೊಂಡು ಒಡ್ಡೂರು ಫಾರ್ಮ್‌ನಲ್ಲಿ ದಿನಕ್ಕೆ 700 ಕೆಜಿ ಅನಿಲ ಉತ್ಪಾದಿಸಲಾಗುತ್ತಿದೆ. ದಿನಕ್ಕೆ ಘಟಕಕ್ಕೆ ಪೂರೈಕೆಯಾಗುವ 15 ಟನ್ ಹಸಿ ತ್ಯಾಜ್ಯವು ಸಂಸ್ಕರಣೆಗೊಂಡು ಅನಿಲದ ಜತೆಗೆ 15 ಕೆಜಿಯಷ್ಟು ಗೊಬ್ಬರವೂ ಈ ಘಟಕದ ಮೂಲಕ ತಯಾರಾಗುತ್ತಿದೆ. ಸುಮಾರು 60 ಸೆಂಟ್ಸ್ ಪ್ರದೇಶದಲ್ಲಿ ಈ ಘಟಕವನ್ನು ರಚಿಸಲಾಗಿದ್ದು, 15 ಟನ್ ತ್ಯಾಜ್ಯ ಸಂಸ್ಕರಣಾ ಘಟಕಕ್ಕಾಗಿ ಸುಮಾರು 4 ಕೋಟಿ ರೂ.ಗಳಷ್ಟು ಹೂಡಿಕೆ ಮಾಡಲಾಗಿದೆ. ಮುಂದೆ ಗಂಜಿಮಠ, ಕಂದಾವರ ಸೇರಿದಂತೆ ಇತರ ಗ್ರಾಮಗಳು ತಮ್ಮ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಹಸಿ ತ್ಯಾಜ್ಯ ನೀಡಿದರೆ ಮತ್ತೊಂದು ಘಟಕ ಮಾಡಲು ಸಿದ್ಧನಿರುವುದಾಗಿ ಹೇಳಿದ ಶಾಸಕ ರಾಜೇಶ್ ನಾಯ್ಕ, ಸ್ವಚ್ಛ ಭಾರತ್ ಪರಿಕಲ್ಪನೆಯಡಿ ಕೈಗೊಂಡಿರುವ ಇಂತಹ ತ್ಯಾಜ್ಯ ಸಂಸ್ಕರಣಾ ಘಟಕಗಳಿಂದ ನಗರ ಪಾಲಿಕೆ, ಪುರಸಭೆ, ನಗರಸಭೆ ಮಾತ್ರವಲ್ಲದೆ, ಗ್ರಾಮ ಪಂಚಾಯತ್‌ಗಳಲ್ಲಿ ತಲೆನೋವಾಗಿರುವ ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ಸಾಧ್ಯ ಎಂದು ರಾಜೇಶ್ ನಾಯಕ್‌ ಹೇಳಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles