ಸುರತ್ಕಲ್: “ರಂಗಚಾವಡಿ” ಮಂಗಳೂರು ಇದರ ಆಶ್ರಯದಲ್ಲಿ ಸುಭಾಷಿತನಗರ ರೆಸಿಡೆಂಟ್ಸ್ ವೆಲ್ ಫೇರ್ ಅಸೋಸಿಯೇಶನ್ ಸುರತ್ಕಲ್ ಸಹಯೋಗದೊಂದಿಗೆ ರಂಗಚಾವಡಿ ವರ್ಷದ ಹಬ್ಬ ಹಾಗೂ ರಂಗಚಾವಡಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಸುರತ್ಕಲ್ ಬಂಟರ ಭವನದಲ್ಲಿ ಜರುಗಿತು.ಖ್ಯಾತ ರಂಗಕರ್ಮಿ, ನಾಟಕ ರಚನೆಕಾರ-ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ದಂಪತಿಯನ್ನು ವೇದಿಕೆಯಲ್ಲಿ ಅತಿಥಿಗಳು ಸನ್ಮಾನಿಸಿ ಗೌರವಿಸಿದರು. ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಅವರಿಗೆ “ರಂಗಚಾವಡಿ-2023” ಪ್ರಶಸ್ತಿ ಪ್ರದಾನ ಮಾಡಲಾಯಿತು.
ಉದ್ಘಾಟನೆ ನೆರವೇರಿಸಿ ಮಾತಾಡಿದ ಹೇರಂಭ ಇಂಡಸ್ಟ್ರೀಸ್ ಮುಂಬೈ ಇದರ ಆಡಳಿತ ನಿರ್ದೇಶಕ ಕನ್ಯಾನ ಸದಾಶಿವ ಶೆಟ್ಟಿ ಅವರು, “ರಂಗಚಾವಡಿ ಸಂಘಟನೆ ಹಿರಿಯ ಕಲಾವಿದರನ್ನು ಗುರುತಿಸಿ ಸನ್ಮಾನಿಸುವುದು ಶ್ಲಾಘನೀಯ ವಿಚಾರ. ಇಂದು ಸನ್ಮಾನಿಸಲ್ಪಟ್ಟಿರುವ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಅವರ ಸಾಧನೆ ಹಾಗೂ ಮಹಾ ವ್ಯಕ್ತಿತ್ವ ಮೆಚ್ಚುವಂತದ್ದು. ರಂಗಚಾವಡಿ ಮಂಗಳೂರು ಸಂಸ್ಥೆ ಬಹಳಷ್ಟು ಒಳ್ಳೆಯ ಕೆಲಸ ಮಾಡುತ್ತಿದೆ. ಅತ್ಯಂತ ಯೋಗ್ಯ ವ್ಯಕ್ತಿಯನ್ನು ಸನ್ಮಾನಿಸಿರುವುದು ಖುಷಿ ತಂದಿದೆ. ದೇವರು ಕೊಡಿಯಾಲ್ ಬೈಲ್ ರ ಕಲೆಯನ್ನು ಇನ್ನಷ್ಟು ಆಶೀರ್ವದಿಸಲಿ” ಎಂದರು.
ಸನ್ಮಾನ ಸ್ವೀಕರಿಸಿ ಮಾತಾಡಿದ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಅವರು, “ಇದು ಅರ್ಜಿ ಹಾಕದೇ ಸಿಗುತ್ತಿರುವ ಪ್ರಶಸ್ತಿ. ಯಾವುದೇ ಲಾಬಿಯಿಲ್ಲದೆ ಕಲಾವಿದರ ಶ್ರಮವನ್ನು ಗುರುತಿಸಿ ರಂಗ ಚಾವಡಿ ಸಂಘಟನೆ ಪ್ರಶಸ್ತಿ ನೀಡುತ್ತಿರುವ ಕಾರಣ ಇದಕ್ಕೆ ಮೌಲ್ಯ ಜಾಸ್ತಿ. ಹೀಗಾಗಿ ಬೇರೆ ಪ್ರಶಸ್ತಿಗಿಂತ ಇದನ್ನು ಪಡೆಯುವಾಗ ಆಗುತ್ತಿರುವ ಖುಷಿಯೇ ಬೇರೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು “ತುಳುನಾಡಿನಲ್ಲಿ ವಿಜಯ ಕುಮಾರ್ ಕೊಡಿಯಾಲ್ ಬೈಲ್ ಮಾಡಿರುವ ಸಾಧನೆ ಅಭೂತಪೂರ್ವವಾದುದು ಎಂದು ಹೇಳಿದರು.
ಶ್ರೀ ಡೆವಲಪರ್ಸ್ ಕಟೀಲು ಇದರ ಆಡಳಿತ ನಿರ್ದೇಶಕ ಗಿರೀಶ್ ಎಂ ಶೆಟ್ಟಿ ಕಟೀಲು ,ಚಲನಚಿತ್ರ ನಿರ್ಮಾಪಕ ಡಾ.ಸಂಜೀವ ದಂಡೆಕೇರಿ, ಮನಪಾ ಸದಸ್ಯ ವರುಣ್ ಚೌಟ, ಬಂಟರ ಮಾತೃಸಂಘ ತಾಲೂಕು ಸಮಿತಿ ಸಂಚಾಲಕ ವಸಂತ ಶೆಟ್ಟಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ಸುರತ್ಕಲ್ ಘಟಕದ ಅಧ್ಯಕ್ಷ ಸುಧಾಕರ ಎಸ್ ಪೂಂಜ, ಸುಭಾಷಿತನಗರ ರೆಸಿಡೆಂಟ್ಸ್ ವೆಲ್‌ಫೇರ್ ಅಸೋಸಿಯೇಶನ್ ಅಧ್ಯಕ್ಷ ರಮೇಶ್ ಶೆಟ್ಟಿ,ಯಥಾಥ್೯ ಸೋಶಿಯಲ್ ಮಂಗಳೂರು ಇದರ ಸ್ಥಾಪಕ ಈಶ್ವರ್ ಪ್ರಸಾದ್ ಶೆಟ್ಟಿ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ, ರಂಗಚಾವಡಿ ಸಂಚಾಲಕ ಜಗನ್ನಾಥ ಶೆಟ್ಟಿ ಬಾಳ, ಚಿತ್ರಾ ಜೆ. ಶೆಟ್ಟಿ ಉಪಸ್ಥಿತರಿದ್ದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್ ಅಭಿನಂದನಾ ಭಾಷಣ ಮಾಡಿದರು. ನಿತೇಶ್ ಶೆಟ್ಟಿ ಎಕ್ಕಾರ್, ರಾಜೇಶ್ವರಿ ಡಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.ಬಳಿಕ ವಿಜಯಕುಮಾರ್ ಕೊಡಿಯಾಲ್ ಬೈಲ್ ರವರ ಮೈತಿದಿ ನಾಟಕ ಪ್ರದರ್ಶನಗೊಂಡಿತು.