23.4 C
Karnataka
Saturday, November 16, 2024

ರೆಡ್‌ಕ್ರಾಸ್‌ನಿಂದ ಪ್ರತಿ ವರ್ಷ 6 ಸಾವಿರ ಯುನಿಟ್ ಉಚಿತ ರಕ್ತ:ಸಿಎ ಶಾಂತಾರಾಮ ಶೆಟ್ಟಿ

ಮಂಗಳೂರು : ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಶಾಖೆ 5 ದಶಕಗಳಿಂದ ಜಿಲ್ಲೆಯಲ್ಲಿ ವಿವಿಧ ಮಾನವೀಯ ಸೇವೆಗಳಿಂದ ದೇಶದಲ್ಲೇ ಒಂದು ಉತ್ತಮ ಶಾಖೆ ಆಗಿ ಹೊರಹೊಮ್ಮಿದೆ. ಕಳೆದ 7 ವರ್ಷಗಳಲ್ಲಿ ಕರ್ನಾಟಕ ರಾಜ್ಯಪಾಲರಿಂದ ಗೌರವ ಪ್ರಶಸ್ತಿ, ರಾಜ್ಯದಅತೀ ಉತ್ತಮ ಶಾಖೆ ಪ್ರಶಸ್ತಿ, ಅತ್ಯುತ್ತಮ ರಕ್ತನಿಧಿ ಪ್ರಶಸ್ತಿ ಸಹಿತ ಹಲವು ಪ್ರಶಸ್ತಿಗಳನ್ನು ಪಡೆದಿದೆ ಎಂದು ದ.ಕ.ಜಿಲ್ಲಾ ರೆಡ್‌ಕ್ರಾಸ್ ಸೊಸೈಟಿ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ ಪ್ರಸ್ತುತ ಸರ್ಕಾರಿ ಲೇಡಿಗೋಷನ್ ಆಸ್ಪತ್ರೆಯ ಆವರಣದಲ್ಲಿರುವ ಜಿಲ್ಲಾ ರೆಡ್‌ಕ್ರಾಸ್ ಸೊಸೈಟಿಯ ಬ್ಲಡ್ ಬ್ಯಾಂಕ್‌ನಿಂದ ಅವಶ್ಯ ಇರುವ ನವಜಾತ ಶಿಶುಗಳ ತಾಯಂದಿರಿಗೆ ಪ್ರತಿ ವರ್ಷ ಸುಮಾರು 6000 ಯುನಿಟ್ ರಕ್ತ ಉಚಿತವಾಗಿ ಪೂರೈಸುತ್ತಿದೆ. ಯಾವುದೇ ಶುಲ್ಕ ನೀಡುವ ಅವಶ್ಯಕತೆ ಇಲ್ಲ. ಪರ್ಯಾಯ ರಕ್ತ ಕೂಡಾ ನೀಡಬೇಕಾಗಿಲ್ಲ ಎಂದರು.
ಲೇಡಿಗೋಷನ್ ಆಸ್ಪತ್ರೆಯಲ್ಲಿ ಪ್ರತಿ ದಿನ ಜನಿಸುವ 20ರಿಂದ 25 ನವಜಾತ ಶಿಶುಗಳ ತಾಯಂದಿರಿಗೆ ರಕ್ತ ಪೂರೈಸುತ್ತಿದ್ದು, ಮಾಸಿಕ ಸುಮಾರು 500 ಯುನಿಟ್ ರಕ್ತ ಉಚಿತವಾಗಿ ಪೂರೈಸುತ್ತಿದ್ದೇವೆ. ಇದಕ್ಕಾಗಿ ರೆಡ್‌ಕ್ರಾಸ್ ಸಂಸ್ಥೆ ಪ್ರತಿ ತಿಂಗಳು ಸುಮಾರು 4 ಲಕ್ಷ ರೂ. ವಿನಿಯೋಗಿಸುತ್ತಿದೆ. ಪ್ರಸ್ತುತ ಲೇಡಿಗೋಶನ್‌ಆಸ್ಪತ್ರೆಗೆ ದಾಖಲಾದವರಿಗೆ ಉಚಿತ ಹಾಗೂ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾದವರಿಗೆ ಶೇ.50 ರಿಯಾಯಿತಿ ದರದಲ್ಲಿ ರಕ್ತ ಪೂರೈಸಲಾಗುತ್ತಿದೆ. ಭವಿಷ್ಯದಲ್ಲಿ ಮಂಗಳೂರಿನ ಯಾವುದೇ ಆಸ್ಪತ್ರೆಯಲ್ಲಿ ದಾಖಲಾದ ಬಿಪಿಎಲ್ ಕಾರ್ಡ್ ಹೊಂದಿದ ರೋಗಿಗಳಿಗೆ ಅವಶ್ಯವಿದ್ದರೆ ಉಚಿತವಾಗಿ ರಕ್ತ ಪೂರೈಸಲಿದ್ದೇವೆ ಎಂದರು.
ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕ ರಕ್ತನಿಧಿ ನಿರ್ವಹಣೆಯಲ್ಲಿ 2022-23ನೇ ಸಾಲಿನಲ್ಲಿ ರಾಜ್ಯದ ಅತ್ಯುತ್ತಮ ಘಟಕ ಪ್ರಶಸ್ತಿ ಗಳಿಸಿದೆ. ಸ್ವಯಂ ಸೇವಾ ಸಂಸ್ಥೆಗಳು, ಯುವಕ ಸಂಘಟನೆಗಳು, ಕಾಲೇಜುಗಳ ಎನ್‌ಎಸ್‌ಎಸ್, ಎನ್‌ಸಿಸಿ, ಯೂತ್ ರೆಡ್‌ಕ್ರಾಸ್ ಘಟಕಗಳ ಸಹಯೋಗದಲ್ಲಿ ನಿರಂತರ ರಕ್ತದಾನ ಶಿಬಿರಗಳನ್ನು ಆಯೋಜಿಸಿ ರಕ್ತದ ಕೊರತೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಿದ್ದೇವೆ. ಅವಶ್ಯ ಇರುವವರಿಗೆ ರೆಡ್‌ಕ್ರಾಸ್ ಸಂಸ್ಥೆಯಿಂದ ವ್ಹೀಲ್ ಚೇರ್, ವಾಟರ್ ಬೆಡ್ ಸಹಿತ ವಿವಿಧ ಸೌಲಭ್ಯಗಳನ್ನು ಉಚಿತವಾಗಿ ನೀಡುತ್ತಿದ್ದೇವೆ ಎಂದು ಅವರು ತಿಳಿಸಿದರು.
ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಸಂರಕ್ಷಣೆ ಸಂಬಂಧಿಸಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆ.ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಶಾಶ್ವತವಾದ ಸಹಾಯವಾಣಿ ಮತ್ತು ಸಮುದಾಯ ವಾಚನಾಲಯ ತೆರೆದಿದ್ದು, ಪ್ರತಿ ದಿನ 15 ರಿಂದ 20ಯುವ ರೆಡ್‌ಕ್ರಾಸ್ ವಿದ್ಯಾರ್ಥಿಗಳು ರೋಗಿಗಳಿಗೆ ಮತ್ತು ರೋಗಿಗಳ ಸಂಬಂಧಿಕರಿಗೆ ಸಹಾಯ ಮಾಡುತ್ತಿರುವುದು ದೇಶದಲ್ಲೇ ಯುವ ರೆಡ್‌ಕ್ರಾಸ್‌ನ ಮಾದರಿ ಕಾರ್ಯವಾಗಿದೆ ಎಂದು ಅವರು ತಿಳಿಸಿದರು.
ಶತಮಾನೋತ್ಸವ ಕಟ್ಟಡ
ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ಶತಮಾನೋತ್ಸವ ಹಿನ್ನೆಲೆಯಲ್ಲಿ ರೆಡ್‌ಕ್ರಾಸ್ ಸೊಸೈಟಿ ದ.ಕ. ಜಿಲ್ಲೆ ಶಾಖೆ ವತಿಯಿಂದ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ಶತಮಾನೋತ್ಸವ ಕಟ್ಟಡ ನಿರ್ಮಾಣವಾಗುತ್ತಿದ್ದು, ಮುಂದಿನ 6 ತಿಂಗಳ ಒಳಗೆ ಲೋಕಾರ್ಪಣೆ ಯಾಗಲಿದೆ. 16,000 ಚದರ ಅಡಿಯ 3 ಅಂತಸ್ತಿನ ಈ ಕಟ್ಟಡ 6 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಶತಮಾನೋತ್ಸದ ಕಟ್ಟಡದ ನಿರ್ಮಾಣಕ್ಕೆ ಹಲವು ಸಂಸ್ಥೆಗಳು ಮತ್ತು ದಾನಿಗಳು ನೆರವಾಗಿದ್ದಾರೆ. ರೆಡ್‌ಕ್ರಾಸ್ ಸೊಸೈಟಿ ದ.ಕ. ಜಿಲ್ಲೆ ಶಾಖೆಯ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಇತ್ತೀಚೆಗೆ ಶತಮಾನೋತ್ಸವ ಕಟ್ಟಡದ ಕಾಮಗಾರಿಯನ್ನು ವೀಕ್ಷಿಸಿ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ ಎಂದು ಸಿಎ ಶಾಂತಾರಾಮ ಶೆಟ್ಟಿ ತಿಳಿಸಿದರು.
ದ.ಕ.ಜಿಲ್ಲಾ ರೆಡ್‌ಕ್ರಾಸ್ ಸೊಸೈಟಿಯ ಖಜಾಂಚಿ ಮೋಹನ್ ಶೆಟ್ಟಿ, ಆಡಳಿತ ಮಂಡಳಿ ಸದಸ್ಯರಾದ ಯತೀಶ್ ಬೈಕಂಪಾಡಿ, ಪುಷ್ಪರಾಜ್ ಜೈನ್, ವಿಠಲ, ಗುರುದತ್ ಕಾಮತ್, ಡಾ. ಸುಮನ ಬೋಳಾರ್, ಪಿ.ಬಿ. ಹರೀಶ್ ರೈ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles