ಮಂಗಳೂರು: ಹೆಣ್ಣು ಮಕ್ಕಳಿಗೆ ತಮ್ಮ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದೇ ನನ್ನ ಗುರಿ, ಹೆಣ್ಣು ಅಬಲೆಯಲ್ಲ ಸಬಲೆ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಹೇಳಿದರು.
ಅವರು ಮಾ.5 ರಂದು ಮಂಗಳವಾರ ನಗರದ ಲೇಡಿಘೋಷನ್ ಆಸ್ವತ್ರೆಯಲ್ಲಿನ ಸಖಿ ಒನ್ ಸ್ಟಾಪ್ ಸೆಂಟರ್‍ನಲ್ಲಿ ಮಾತನಾಡಿದರು. ಮಹಿಳೆಯರಿಗೆ ಹಾಗೂ ಹೆಣ್ಣು ಮಕ್ಕಳಿಗೆ ತಮ್ಮ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುವುದೇ ನನ್ನ ಉದ್ದೇಶ ಹಾಗೂ ಗುರಿ, ಮಹಿಳೆಯರಿಗೆ ತಮ್ಮ ಹಕ್ಕುಗಳ ಬಗ್ಗೆ ಸೌಲಭ್ಯಗಳ ಬಗ್ಗೆ ಅರಿವಿರಬೇಕು. ಆಗ ಮಾತ್ರ ಅನ್ಯಾಯದ ವಿರುದ್ಧ ಹೋರಡಲು ಸಾಧ್ಯ, ಅಪರಾಧಗಳು ನಡೆಯದಂತೆ ತಡೆಯಲು ಶಾಲಾ ಕಾಲೇಜುಗಳಲ್ಲಿ ಜಾಗೃತಿಯನ್ನು ಮೂಡಿಸುವ ಕೆಲಸವಾಗಬೇಕು ಎಂದರು.
ಲೇಡಿಘೋಷನ್ ಆಸ್ವತ್ರೆಯಲ್ಲಿರುವ ಸಖಿ ಒನ್ ಸ್ಟಾಪ್ ಸೆಂಟರ್‍ನಲ್ಲಿ ದೌರ್ಜನ್ಯಕ್ಕೆ ಒಳಗಾದ ಹೆಣ್ಣು ಮಕ್ಕಳನ್ನು ಮಾನಸಿಕವಾಗಿ ಸಧೃಢಗೊಳಿಸುವ ಉತ್ತಮ ಕೆಲಸ ನಡೆಯುತ್ತಿದೆ. ಸಖಿ ಒನ್ ಸ್ಟಾಪ್ ಸೆಂಟರ್ ಬಗ್ಗೆ ಹೆಣ್ಣುಮಕ್ಕಳಿಗೆ ಮಾಹಿತಿ ಇಲ್ಲದೆ ಇರುವುದರಿಂದ ಅವರಿಗೆ ಸರಿಯಾದ ಮಾಹಿತಿ ಒದಗಿಸಬೇಕು. ದಿನದ 24 ಗಂಟೆಯೂ ಈ ಕೇಂದ್ರ ಹೆಣ್ಣು ಮಕ್ಕಳಿಗಾಗಿ ಕಾರ್ಯ ನಿರ್ವಹಿಸುತ್ತದೆ. ರಾಜ್ಯದ ಮಹಿಳಾ ಆಯೋಗದಲ್ಲಿ ಕಾಲ್ ಸೆಂಟರ್ ಅನ್ನು ನಿರ್ಮಿಸುವ ಕಾರ್ಯನಡೆಯುತ್ತಿದ್ದು ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶ ಹೊಂದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಲೇಡಿಗೋಷನ್ ಆಸ್ವತ್ರೆಯ ಅಧೀಕ್ಷ ಡಾ. ದುಗಾ೯ಪ್ರಸಾದ್ ಅವರು ತಾಯಿ ಮಗಳಿಗೆ ಸಂಬಂಧಿಸಿದ ತಮ್ಮ ಕವನ ಸಂಕಲನವನ್ನು ಅಧ್ಯಕ್ಷರಿಗೆ ಹಸ್ತಾಂತರಿಸಿದರು. ಸಖಿ ಓನ್ ಸ್ಟಾಪ್ ಸೆಂಟರ್‍ನ ಘಟಕ ಆಡಳಿತ ಅಧಿಕಾರಿ ಪ್ರಿಯಾ ಹಾಗೂ ಇನ್ನಿತರರು ಉಪಸ್ಥಿತರಿದ್ದರು.