ಮಂಗಳೂರು: ಅಕ್ರಮ ಮರಳುಗಾರಿಕೆ ಕಂಡುಬಂದಲ್ಲಿ ತಡ ಮಾಡದೇ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಸೂಚಿಸಿದರು.
ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮರಳು ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಿಲ್ಲೆಯ ಸಮುದ್ರದ ಮತ್ತು ನದಿಯ ಕಡಲ ತೀರದಲ್ಲಿ ಸಿ.ಆರ್‍ಝಡ್ ಮರಳುಗಾರಿಕೆ ನಿಷೇಧ ಇರುವುದರಿಂದ ಅಕ್ರಮ ಮರಳುಗಾರಿಕೆ ಆಗದಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ಎಚ್ಚರ ವಹಿಸಬೇಕು. ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸುವ ಪೋಲಿಸ್ ಅಧಿಕಾರಿಗಳು ಅಕ್ರಮವಾಗಿ ಮರಳುಗಾರಿಕೆ ಆಗುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಹೇಳಿದರು.
ಅಕ್ರಮ ಮರಳುಗಾರಿಕೆ ಕಂಡು ಬಂದ ತಕ್ಷಣ ಸಂಬಂಧಿಸಿದ ವಾಹನ ಸಂಖ್ಯೆಯ ಆಧಾರದ ಮೇಲೆ ಪೋಲಿಸ್ ಇಲಾಖೆಯಲ್ಲಿ ದೂರು ದಾಖಲಿಸಬೇಕು. ಇದರಿಂದ ಯಾವ ಸ್ಥಳದಿಂದ ಅಕ್ರಮ ಮರಳು ಸಾಗಾಣಿಕೆಯಾಗುತ್ತಿದೆ ಎಂದು ಕಂಡುಹಿಡಿಯಬಹುದು. ಈ ರೀತಿಯ ಪ್ರಕರಣಗಳನ್ನು ನಿರ್ಲಕ್ಷಿಸದೆ, ಅದರ ಆಳದವರೆಗೆ ಹೋಗಿ ಮಾಹಿತಿ ಕಲೆ ಹಾಕುವಂತೆ ಅಧಿಕಾರಿಗಳಿಗೆ ಹೇಳಿದರು.
ತಾಲೂಕು ಮಟ್ಟದಲ್ಲಿ ಇರುವ ಕಂಟ್ರೋಲ್ ರೂಂ ಮೂಲಕ ಮತ್ತು ಸಿಸಿ ಕ್ಯಾಮೆರಾಗಳ ಮೂಲಕ ಈ ಕಾರ್ಯವನ್ನು ಚುರುಕುಗೊಳಿಸಬೇಕು. ಲೈಸೆನ್ಸ್ ಇಲ್ಲದೆ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿರುವವರ ವಿರುದ್ಧ ಕಾನೂನು ಕ್ರಮವಹಿಸಿ ಅಂತಹ ಪ್ರಕರಣಗಳ ಮೇಲೆ ಕಾನೂನು ರೀತಿ ದಂಡ ವಿಧಿಸಬೇಕು ಎಂದು ಜಿಲ್ಲಾಧಿಕಾರಿಗಳು ಎಲ್ಲ ತಹಶೀಲ್ದಾರ್‍ಗಳಿಗೆ ಸೂಚಿಸಿದರು.
ಎಲ್ಲಾ ಚೆಕ್‍ಪೋಸ್ಟ್ ಗಳಲ್ಲಿ ಬರುವ ವಾಹನಗಳ ಮೇಲೆ ಹದ್ದಿನ ಕಣ್ಣು ಇಡಬೇಕು. ಅಕ್ರಮ ಮರಳುಗಾರಿಕೆಯಲ್ಲಿ ದಾಖಲಾಗಿರುವ ಪ್ರಕರಣವನ್ನು ಸಂಬಂಧಪಟ್ಟ ಅಧಿಕಾರಿಗಳೇ ಜವಾಬ್ದಾರಿ ವಹಿಸಿ ಸೂಕ್ತ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಪೆÇಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್ ಮಾತನಾಡಿ ಮರಳು ಕಳ್ಳತನ ಮಾಡುವ ವಾಹನ ಅಥವಾ ದೋಣಿಯನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಬೇಕು. ನಾನ್ ಸಿ.ಆರ್.ಝಡ್ ಪ್ರದೇಶಗಳಲ್ಲಿ ಅಕ್ರಮ ಗಣಿಗಾರಿಕೆ ಅಥವಾ ಮರಳು ದಾಸ್ತಾನು ತಡೆಗಟ್ಟಲು ಕಟ್ಟೆಚ್ಚರ ವಹಿಸಬೇಕು ಎಂದು ಹೇಳಿದರು.
ಉಪ ಪೊಲೀಸ್ ಆಯುಕ್ತ ಸಿದ್ದಾರ್ಥ್ ಗೋಯೆಲ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಆ್ಯಂಥನಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂವಿಜ್ಞಾನಿ ಗಿರೀಶ್ ಮುಂತಾದವರು ಉಪಸ್ಥಿತರಿದ್ದರು