ಮಂಗಳೂರು: ಸಮಾಜ ಸೇವೆ ಮಾಡಲು ಬದುಕಿನಲ್ಲಿ ಸಿಕ್ಕಿದ ಯೋಗ ಎಂದು ಭಾವಿಸಿದ್ದೇನೆ. ಬಡವರಿಗೆ ಮಾಡುವ ದಾನದಿಂದ ತೃಪ್ತನಾಗಿದ್ದೇನೆ. ನನ್ನ ಸಾಧನೆಗೆ ಸಮಾಜದ ಸರ್ವರ ಸಹಕಾರ ಇದೆ ಎಂದು ಉದ್ಯಮಿ, ಕರ್ನಾಟಕ ಸುವರ್ಣ ಸಂಭ್ರಮ ಪ್ರಶಸ್ತಿ ಪುರಸ್ಕೃತ ಕನ್ಯಾನ ಸದಾಶಿವ ಕೆ. ಶೆಟ್ಟಿ ಹೇಳಿದರು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ವತಿಯಿಂದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಶನಿವಾರ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ನೊಂದ ಬಹಳಷ್ಟು ಮಂದಿ ಸಹಾಯ ಕೇಳಿಕೊಂಡು ಬರುತ್ತಾರೆ. ಅನೇಕ ಸಂಘ ಸಂಸ್ಥೆಗಳು, ಧಾರ್ಮಿಕ ಕೇಂದ್ರಗಳಿಗೆ ನನ್ನಿಂದಾದ ಸಹಾಯ ಮಾಡುತ್ತಿದ್ದೇನೆ. ಆರ್ಥಿಕವಾಗಿ ಕೆಳಸ್ತರದ ಕುಟುಂಬದಿಂದ ಬಂದು ಶಿಕ್ಷಣದ ಮೂಲಕ ಹಂತ ಹಂತವಾಗಿ ಉದ್ಯಮ ಕ್ಷೇತ್ರದಲ್ಲಿ ಬೆಳೆದು ನಿಂತಿದ್ದೇನೆ. ಹಲವಾರು ಮಂದಿ ಸಹಾಯ ಮಾಡಿದ್ದಾರೆ. ಬಂದ ಹಾದಿಯನ್ನು ಮರೆಯುವುದಿಲ್ಲ. ಪಟ್ಲ ಫೌಂಡೇಶನ್ ಟ್ರಸ್ಟ್ ಹೊಸ ಪರಿಕಲ್ಪನೆಯೊಂದಿಗೆ ಅಧ್ಬುತವಾಗಿ ಸನ್ಮಾನ ಮಾಡಿದ್ದಾರೆ. ಇದರಿಂದ ಪರಮಾನಂದವಾಗಿದೆ. ಜೀವನ ಪಾವನವಾಯಿತು ಎಂದವರು ಸಂತಸ ವ್ಯಕ್ತಪಡಿಸಿದರು.
ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಅತಿಥಿಯಾಗಿ ಮಾತನಾಡಿ, ಕನ್ಯಾನ ಸದಾಶಿವ ಶೆಟ್ಟಿಯವರ ವ್ಯಕ್ತಿತ್ವದ ಪೂಜೆ ನಡೆದಿದೆ. ದೇವರು ಕೊಟ್ಟ ಸಂಪತ್ತನ್ನು ಭಗವಂತನ ಪ್ರಸಾದ ಎಂದು ಊರಿಗೆ ಹಂಚುವ ಅವರ ಮನಸ್ಸು ವಿಶಾಲವಾದುದು ಎಂದು ಬಣ್ಣಿಸಿದರು.
ಪಟ್ಲ ಫೌಂಡೇಶನ್‌ನ ಪ್ರಧಾನ ಸಂಚಾಲಕ, ಉದ್ಯಮಿ ಶಶಿಧರ ಶೆಟ್ಟಿ ಬರೋಡ ಮಾತನಾಡಿ, ಸದಾಶಿವ ಶೆಟ್ಟಿಯವರು 150 ಕೋಟಿ ರೂ.ಗಿಂತಲೂ ಅಧಿಕ ಸಮಾಜಕ್ಕೆ ದೇಣಿಗೆಯಾಗಿ ನೀಡಿದ್ದಾರೆ. ಬಡವರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ದಾನ ಮಾಡಿದಾಗ ಸಮಾಜ ಗುರುತಿಸುತ್ತದೆ: ಐಕಳ
ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡಿ, ಅಪಾರ ಸಂಪತ್ತು ಇದ್ದರೂ ಅದನ್ನು ದಾನ ಮಾಡುವ ಮನಸ್ಸು ಎಲ್ಲರಿಗೂ ಇರುವುದಿಲ್ಲ. ದಾನ ಮಾಡಿದಾಗ ಸಮಾಜ ಅವರನ್ನು ಗುರುತಿಸುತ್ತದೆ. ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯುತ್ತದೆ. ಕನ್ಯಾನ ಸದಾಶಿವ ಶೆಟ್ಟಿ ಅವರು ಸಮಾಜಸೇವೆಯ ಮೂಲಕ ಈಗ ಮನೆಮಾತಾಗಿದ್ದಾರೆ. ಬಡವರ, ಕಲಾವಿದರ ಬದುಕಿಗೆ ಅವರು ಆಸರೆಯಾಗಿದ್ದಾರೆ ಎಂದರು.
ಶಾಸಕ ರಾಜೇಶ್ ನಾಕ್ ಉಳೇಪಾಡಿ, ಉದ್ಯಮಿಗಳಾದ ಸಿ.ಎ.ದಿವಾಕರ ರಾವ್, ಕೆ.ಎಂ. ಶೆಟ್ಟಿ ಮಧ್ಯಗುತ್ತು, ಕೋಶಾಧಿಕಾರಿ ಸುದೇಶ್ ಕುಮಾರ್ ರೈ, ಪಟ್ಲ ಫೌಂಡೇಶನ್‌ನ ಪದಾಧಿಕಾರಿಗಳಾದ ರಾಜೀವ ಪೂಜಾರಿ ಕೈಕಂಬ, ಪ್ರದೀಪ್ ಆಳ್ವ ಕದ್ರಿ, ಬಾಳ ಜಗನ್ನಾಥ ಶೆಟ್ಟಿ, ಆರತಿ ಆಳ್ವ, ರವಿಚಂದ್ರ ಶೆಟ್ಟಿ ಅಶೋಕನಗರ, ಪಟ್ಲ ಮಹಾಬಲ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ ಸ್ವಾಗತಿಸಿದರು. ಪುರುಷೋತ್ತಮ ಭಂಡಾರಿ ಅಡ್ಯಾರ್ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು. ಪಟ್ಲ ಫೌಂಡೇಶನ್‌ನ ಸರ್ವ ಘಟಕಗಳ ವತಿಯಿಂದ ಸದಾಶಿವ ಶೆಟ್ಟಿ ಅವರನ್ನು ಗೌರವಿಸಲಾಯಿತು.
ವಿನೂತನ ಶೈಲಿಯಲ್ಲಿ ಸನ್ಮಾನ
ಕನ್ಯಾನ ಸದಾಶಿವ ಶೆಟ್ಟಿ ಅವರನ್ನು ಚಂದ್ರಹಾಸ ಶೆಟ್ಟಿ ಅವರ ಪರಿಕಲ್ಪನೆಯಲ್ಲಿ ವಿನೂತನವಾಗಿ ಸನ್ಮಾನಿಸಲಾಯಿತು. ಸನ್ಮಾನದ ಪೇಟ, ಶಾಲು, ಸ್ಮರಣಿಕೆ, ತೈಲಚಿತ್ರವನ್ನೊಳಗೊಂಡ ವಸ್ತುಗಳನ್ನು ಸಭಾಂಗಣದ ಮೂಲಕ ಪಲ್ಲಕ್ಕಿಯಲ್ಲಿ ತರಲಾಯಿತು. ಜತೆಗೆ ಗೆಂದಾಳೆ ಸಿಯಾಳ, ಅಡಕೆ ಗೊನೆ, ತರಕಾರಿ, ಹಣ್ಣು ಹಂಪಲು, ಅಕ್ಕಿ ಹಾಗೂ ಭತ್ತದ ಮುಡಿ, ಹಿಂಗಾರ ಮೊದಲಾದ ಬುಟ್ಟಿಗಳನ್ನು 6 ಜತೆ ಪತಾಕೆ, ಬಣ್ಣದ ಕೊಡೆ, ಕೊಂಬು, ವಾಲಗದೊಂದಿಗೆ ವೇದಿಕೆಗೆ ಮೆರವಣಿಗೆ ಮೂಲಕ ತರಲಾಯಿತು. ವೇದಿಕೆಯಲ್ಲಿದ್ದ ಅತಿಥಿಗಳು ವ್ಯವಸ್ಥಿತವಾಗಿ ಒಂದೊಂದು ವಸ್ತುಗಳನ್ನು ಸದಾಶಿವ ಶೆಟ್ಟಿ ಅವರಿಗೆ ಅರ್ಪಿಸಿ, ಗೌರವ ಸಲ್ಲಿಸಿದರು. ಈ ಸಂದರ್ಭ ಸೌಮ್ಯಾ ಅವರ ಹಾಡಿನೊಂದಿಗೆ ಮಂಜುಶ್ರೀ ಚಂದ್ರಹಾಸ್ ಶೆಟ್ಟಿ ಅವರು ಆರತಿ ಬೆಳಗಿದರು. ಬಳಿಕ ಸತೀಶ್ ಶೆಟ್ಟಿ ಪಟ್ಲ ಅಭಿನಂದನಾ ಗೀತೆಯ ಮೂಲಕ ಗೌರವ ಸಲ್ಲಿಸಿದರು. ಈ ವೇಳೆ ಸದಾಶಿವ ಶೆಟ್ಟಿಯವರಿಗೆ ಮೇಲ್ಗಡೆಯಿಂದ ಪುಷ್ಪವೃಷ್ಠಿ ದೃಶ್ಯ ಅಮೋಘವಾಗಿತ್ತು. ಬೃಹತ್ ಗಾತ್ರದ ಹೂವಿನ ಹಾರ ಹಾಗೂ ಆ್ಯಪಲ್ ಹಾರ ಹಾಕಿ ಗೌರವಿಸಲಾಯಿತು.