ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಹಿನ್ನೆಲೆಯಲ್ಲಿ ಬಿಜೆಪಿ ವತಿಯಿಂದ ಇಂದಿನಿಂದ ಅಕ್ಟೋಬರ್ 2ರ ವರೆಗೆ ಸೇವಾ ಪಾಕ್ಷಿಕವಾಗಿ ಆಚರಿಸಲಾಗುತ್ತದೆ ಎಂದು ದ.ಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ತಿಳಿಸಿದರು.
ಸೆ.2ರಂದು ಪ್ರಧಾನಿ ಮೋದಿಯವರು ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಸ್ವತಃ ಪ್ರಧಾನಿಯವರೇ ಪಕ್ಷದ ಸದಸ್ಯತ್ವವನ್ನು ಹೊಸದಾಗಿ ಪಡೆಯುವ ಮೂಲಕ ಚಾಲನೆ ನೀಡಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಶಾ ಹಾಗೂ ಇತರ ಸಚಿವರು, ಹಿರಿಯ ನಾಯಕರು ಬಿಜೆಪಿಯ ಹೊಸ ಸದಸ್ಯತ್ವ ಪಡೆದಿದ್ದಾರೆ ಎಂದು ಸತೀಶ್ ಕುಂಪಲ ವಿವರಿಸಿದರು.
ವಿವಿಧ ಸಾಮಾಜಿಕ ಸಂಸ್ಥೆಗಳು, ರಕ್ತನಿಧಿ ಕೇಂದ್ರಗಳು, ಭಾರತೀಯ ರೆಡ್‌ಕ್ರಾಸ್ ಸೊಸೈಟಿ ಮತ್ತು ಆರೋಗ್ಯ ಇಲಾಖೆಗಳ ಸಹಯೋಗದಲ್ಲಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ರಕ್ತದಾನ ಶಿಬಿರಗಳನ್ನು ಇಂದು ಆಯೋಜಿಸಲಾಗುತ್ತಿದೆ. ನಾಳೆ ಮತ್ತು ನಾಡಿದ್ದು ಕೂಡ ಶಿ ಬಿರಗಳು ನಡೆಯಲಿವೆ.ಸೆ.18ರಿಂದ 24ರ ವರೆಗೆ ಎಲ್ಲಾ ಶಾಲೆ ಮತ್ತು ಆಸ್ಪತ್ರೆ ಆವರಣದಲ್ಲಿ ಸ್ವಚ್ಛತಾ ಅಭಿಯಾನ ನಡೆಸಲಾಗುತ್ತದೆ. ದಿವ್ಯಾಂಗರಿಗೆ ಉಚಿತ ಸಲಕರಣೆಗಳ ವಿತರಣೆ, ಕ್ರೀಡಾಪಟುಗಳಿಗೆ ಗೌರವಿಸುವುದು, ಆಯುಷ್ಮಾನ್ ಭಾರತ್ ಯೋಜನೆಯ ಪ್ರಾರಂಭದ ದಿನವಾದ ಸೆ.23ರಂದು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 60 ವರ್ಷ ಮೇಲ್ಪಟ್ಟ ವೃದ್ಧ ಮಹಿಳೆಯರಿಗೆ ಉಚಿತ ಆರೋಗ್ಯ ಶಿಬಿರಗಳ ಆಯೋಜನೆ ಮಾಡಲಾಗುವುದು.
ಪ್ರಧಾನಿಯವರ ಜೀವನ ಮತ್ತು ಸಾಧನೆಗಳ ಚಿತ್ರ ಪ್ರದರ್ಶನವನ್ನು 15 ದಿನಗಳ ಕಾಲ ರಾಜ್ಯದ ವಿವಿಧ ಕಡೆಗಳಲ್ಲಿ ಆಯೋಜಿಸಲಾಗುವುದು. ಕಾನೂನು, ವೈದ್ಯಕೀಯ, ಕೈಗಾರಿಕಾ, ಎನ್‌ಜಿಓ, ಪ್ರಬುದ್ಧರು ಮತ್ತು ಶಿಕ್ಷಕರ ಪ್ರಕೋಷ್ಠಗಳು ‘ಪವರ್ ವಿಥ್ ಇನ್: ದಿ ಲೀಡರ್‌ಶಿಪ್ ಲೆಗಸಿ ಆಫ್ ನರೇಂದ್ರ ಮೋದಿ’ ಪುಸ್ತಕ ಆಧರಿಸಿ ಸೆಮಿನಾರ್‌ಗಳನ್ನು ಆಯೋಜಿಸಲಿವೆ.ಕಲೆ ಮತ್ತು ಚಿತ್ರಕಲೆ ಸ್ಪರ್ಧೆಗಳು, ಭಾಷಣ ಮತ್ತು ಪ್ರಬಂಧ ಸ್ಪರ್ಧೆಗಳು, ಮರಳು ಕಲಾಕೃತಿ ಸ್ಪರ್ಧೆಗಳು, ಗ್ರಾಫಿಕ್ ವಿನ್ಯಾಸ ಸ್ಪರ್ಧೆಗಳು ಮತ್ತು ಆತ್ಮನಿರ್ಭರ ಭಾರತ್, ವಿಕಸಿತ್ ಭಾರತ್ 2047 ಹಾಗೂ ಸ್ಥಳೀಯ ವಿಷಯಗಳಿಗೆ ಸಂಬಂಧಿಸಿದ ಗೋ ವೋಕಲ್ ಆಧರಿತ ರಸಪ್ರಶ್ನೆ ಸ್ಪರ್ಧೆಗಳನ್ನು ನಡೆಸಲಾಗುವುದು ಎಂದು ಸತೀಶ್ ಕುಂಪಲ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷರಾದ ಪ್ರಸನ್ನ ಮಾರ್ತ, ಪೂಜಾ ಪೈ, ಸೇವಾ ಪಾಕ್ಷಿಕದ ಜಿಲ್ಲಾ ಸಹ ಸಂಚಾಲಕ ಪುರುಷೋತ್ತಮ ಮುಂಗ್ಲಿಮನೆ ಪುತ್ತೂರು, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ನಂದನ್ ಮಲ್ಯ ಹಾಗೂ ಜಿಲ್ಲಾ ಉಪಾಧ್ಯಕ್ಷರು ಹಾಗೂ ಸೇವಾ ಪಾಕ್ಷಿಕದ ಜಿಲ್ಲಾ ಸಂಚಾಲಕ ರಾಜೇಶ್ ರೈ ಕೆಡೆಂಜಿ ಉಪಸ್ಥಿತರಿದ್ದರು.