ಮಂಗಳೂರು: ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ಪರಿಕಲ್ಪನೆಯ ” ಬ್ಯಾಕ್ ಟು ಊರು” ಭಾಗವಾಗಿ ಜರ್ಮನಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಈಟ್ಯಾಗ್ ಎನರ್ಜಿಟೆಕ್ನಿಕ್ ಪ್ರೈವೆಟ್ ಲಿಮಿಟೆಡ್( ಯುರೋಪಿಯನ್ ಟೆಕ್ನಾಲಜಿ ಅಲೆಯೆನ್ಸ್ ಗ್ರೂಪ್) ಮಂಗಳೂರು ವಿಶೇಷ ಆರ್ಥಿಕ ವಲಯದಲ್ಲಿ 300 ಕೋಟಿ ರೂ. ಹೂಡಿಕೆ ಮಾಡುವ ಮೂಲಕ ಉತ್ಪಾದನಾ ಘಟಕ ಸ್ಥಾಪಿಸುವ ಜತೆಗೆ ತನ್ನ ಜಾಗತಿಕ ಕಚೇರಿಯನ್ನೂ ಮಂಗಳೂರಿಗೆ ಸ್ಥಳಾಂತರಿಸುವುದಕ್ಕೆ ಆಸಕ್ತಿ ತೋರಿದೆ. ಈ ಹಿನ್ನಲೆಯಲ್ಲಿ ಇಂದು ಈಟ್ಯಾಗ್ ಗ್ರೂಪ್ ಹಾಗೂ ಮಂಗಳೂರು ಎಸ್ ಇ ಝೆಡ್ ಜತೆ ಬಂಡವಾಳ ಹೂಡಿಕೆಗೆ ಆಸಕ್ತಿ ತೋರಿದ ಒಪ್ಪಂದ ಪತ್ರ(ಇಒಐ)ಕ್ಕೆ ಸಹಿ ಹಾಕಲಾಯಿತು.
ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈಟ್ಯಾಗ್ ಕಂಪೆನಿಯ ನಿರ್ದೇಶಕ ಪ್ರಕಾಶ್ ಪಿರೇರಾ ಹಾಗೂ ಎಸ್ಇಝೆಡ್’ನ ಸಿಇಒ ಸೂರ್ಯನಾರಾಯಣ ಅವರು ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ಸಮ್ಮುಖದಲ್ಲಿ ಈ ಬೃಹತ್ ಮೊತ್ತದ ಬಂಡವಾಳ ಹೂಡಿಕೆಗೆ ಪೂರಕವಾದ ಒಡಂಬಡಿಕೆ(ಎಂಒಯು)ಗೆ ಪರಸ್ಪರ ಸಹಿ ಹಾಕಿದ್ದಾರೆ.
ಈ ಸಂದರ್ಭ ಮಾತನಾಡಿದ ಕ್ಯಾ. ಚೌಟ ಅವರು, ದೇಶ-ವಿದೇಶದಲ್ಲಿರುವ ಮಂಗಳೂರು ಮೂಲದ ಉದ್ಯಮಿಗಳನ್ನು ನಮ್ಮೂರಿಗೆ ಕರೆತರುವ ಭಾಗವಾಗಿ “ಬ್ಯಾಕ್ ಟು ಊರು” ಪರಿಕಲ್ಪನೆ ಆರಂಭಿಸಿದ್ದು, ಇದಕ್ಕೆ ಇಷ್ಟು ಬೇಗ ದೊಡ್ಡ ಮಟ್ಟದ ಯಶಸ್ವಿ ಸಿಗುತ್ತದೆಂದು ಭಾವಿಸಿರಲಿಲ್ಲ. ‘ಬ್ಯಾಕ್ ಟು ಊರು’ ಕಲ್ಪನೆಯಡಿ ಮಂಗಳೂರಿನ ವಿಶೇಷ ಆರ್ಥಿಕ ವಲಯದಲ್ಲಿ ಬಂಡವಾಳ ಹೂಡಿಕೆ ಮುಂದಾಗಿರುವ ಎರಡನೇ ಕಂಪನಿ ಇದಾಗಿದೆ. ಈಟ್ಯಾಗ್ ಕಂಪೆನಿಯು ಸುಸ್ಥಿರ ಇಂಧನ ಹಾಗೂ ಇವಿ ತಂತ್ರಜ್ಞಾನ ಅಭಿವೃದ್ಧಿಗೆ ಮಂಗಳೂರಿನಲ್ಲಿ 300 ಕೋಟಿ ಬಂಡವಾಳ ಹೂಡಿಕೆ ಮಾಡುವ ಜತೆಗೆ ಜಾಗತಿಕ ಕಚೇರಿಯನ್ನೂ ನಮ್ಮೂರಿಗೆ ಶಿಫ್ಟ್ ಮಾಡಲು ಆಸಕ್ತಿ ತೋರಿಸಿರುವುದು ಬಹಳ ಸಂತಸ ತಂದಿದೆ ಎ೦ದರು.
ಪ್ರಕಾಶ್ ಪಿರೇರಾ ಮಾತನಾಡಿ, “ನಮ್ಮ ಕಂಪೆನಿ ಮಂಗಳೂರಿನ ಎಸ್ಇಝೆಡ್ ನಲ್ಲಿ ಸುಸ್ಥಿರ ಇಂಧನ ಮತ್ತು ಇವಿ ಕ್ಷೇತ್ರಗಳಿಗೆ ಅತ್ಯಾಧುನಿಕ ಪರಿಹಾರಗಳನ್ನು ಅಭಿವೃದ್ದಿಪಡಿಸುವ ಸಂಶೋಧನೆ ಹಾಗೂ ಉತ್ಪಾದನ ಘಟಕವನ್ನು ಸ್ಥಾಪಿಸಲಿದೆ. ಮಂಗಳೂರಿನಲ್ಲಿ ಜಾಗತಿಕ ಕಚೇರಿ ಪ್ರಾರಂಭಿಸುವ ಮೂಲಕ 2026ರ ವೇಳೆಗೆ ನಮ್ಮ ಉತ್ಪಾದನಾ ಘಟಕ ಪ್ರಾರಂಭಿಸಲಾಗುವುದು. ವಾರ್ಷಿಕ 110 ಮಿಲಿಯನ್ ಡಾಲರ್ ಮೌಲ್ಯದ ಉತ್ಪನ್ನವನ್ನು ರಫ್ತು ಮಾಡುವ ಗುರಿ ಇದೆ. ಅಲ್ಲದೆ ಇಲ್ಲಿನ ಘಟಕದಲ್ಲಿ ವಿಶೇಷ ಚೇತನರಿಗೆ ಶೇ.10ರಷ್ಟು ಉದ್ಯೋಗಾವಕಾಶ ನೀಡಲಿದ್ದು, ಅದರಲ್ಲಿಯೂ ಮೂಗ-ಕಿವುಡರಿಗೆ ತರಬೇತಿ ಕೊಟ್ಟು ಉದ್ಯೋಗ ನೀಡಲಾಗುವುದು. ಮಂಗಳೂರಿನಲ್ಲಿ ಬಂಡವಾಳ ಹೂಡಿಕೆಗೆ ವಿಪುಲ ಅವಕಾಶಗಳಿದ್ದು, ಈಟ್ಯಾಗ್ ಗ್ರೂಪ್’ಗೆ ಈ ಅವಕಾಶ ಕಲ್ಪಿಸಿದ ಎಸ್ಇಝೆಡ್’ನ ಪ್ರಮುಖರು ಹಾಗೂ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಈ ವೇಳೆ ಮಾತನಾಡಿದ ಎಸ್ಇಝೆಡ್ ಸಿಇಒ ಸೂರ್ಯನಾರಾಯಣ, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಪ್ರಯತ್ನಗಳನ್ನು ಶ್ಲಾಘಿಸಿದ್ದು,”ಮೊದಲನೆಯ ಇಒಐ ಸಹಿ ಮಾಡಿದ ಕೆಲವೇ ವಾರಗಳಲ್ಲಿ ಇದೀಗ ಮತ್ತೊಂದು ದೊಡ್ಡ ಮಟ್ಟದ ಹೂಡಿಕೆಗೆ ಸಂಬಂಧಿಸಿದಂತೆ ಎರಡನೇ ಇಒಐಗೆ ಸಹಿ ಹಾಕುತ್ತಿದ್ದೇವೆ. ಮಂಗಳೂರಿನಲ್ಲಿಎಸ್ಇಝೆಡ್’ನಲ್ಲಿ ಮತ್ತಷ್ಟು ಕಂಪನಿಗಳ ಹೂಡಿಕೆ ಆಕರ್ಷಿಸಲು ಇದು ಪ್ರೇರಣೆಯಾಗಲಿದೆ ಎಂದರು.
ಈ ವೇಳೆ ಇಟಿಎಜಿ ಎನರ್ಜಿಟೆಕ್ನಿಕ್ ಸಿಇಒ ಜ್ಯೋತಿ ಪಿರೇರಾ ಎಸ್ಇಝೆಡ್ ಸಿಎಫ್ಒ ರಮೇಶ್ ಕುಮಾರ್ ಮತ್ತು ಸಿಎ ನಿತಿನ್ ಜೆ ಶೆಟ್ಟಿ ಸೇರಿದಂತೆ ಈಟ್ಯಾಗ್ ಕಂಪೆನಿಯ ಪ್ರಮುಖರು ಹಾಗೂ ಎಂಎಸ್ಇಜೆಡ್ ಅಧಿಕಾರಿಗಳು ಉಪಸ್ಥಿತರಿದ್ದರು.
