20.3 C
Karnataka
Wednesday, November 20, 2024

ಐಟಿಐ, ಜಿಟಿಟಿಸಿ ಕೋರ್ಸುಗಳಿಗೆ ವಿದ್ಯಾರ್ಥಿಗಳನ್ನುಆಕರ್ಷಿಸಲು ಜಿ.ಪಂ. ಸಿಇಓ ಸೂಚನೆ

ಮಂಗಳೂರು: ಐಟಿಐ ಮತ್ತು ಜಿಟಿಟಿಸಿ ಕೋರ್ಸುಗಳನ್ನು ಕಲಿತವರಿಗೆ ಉದ್ಯೋಗದಲ್ಲಿ ಹೆಚ್ಚಿನ ಬೇಡಿಕೆ ಇದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಇದರತ್ತ ಆಕರ್ಷಿಸಲು ಒತ್ತು ನೀಡುವಂತೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ಆನಂದ್ ಸೂಚಿಸಿದ್ದಾರೆ.

 ಅವರು ಜಿಲ್ಲಾ ಪಂಚಾಯತ್ ನಲ್ಲಿ ನಡೆದ ಜಿಲ್ಲಾ ಕೌಶಲ್ಯ ಮಿಷನ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸಕ್ತ 26 ಐಟಿಐಗಳಿದ್ದು, ಈ ಪೈಕಿ 5 ಸರಕಾರಿ ಮತ್ತು 21 ಖಾಸಗಿ ಐಟಿಐ ಗಳಿವೆ. ಇವುಗಳಲ್ಲಿ ಒಟ್ಟು ೧೦೬೪ ಸೀಟುಗಳು ಲಭ್ಯವಿದ್ದರೂ, ಪ್ರಸಕ್ತ ವರ್ಷ ಕೇವಲ 497 ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪಡೆದಿದ್ದಾರೆ. ಇದು ಕಳವಳಕಾರಿಯಾಗಿದೆ ಎಂದರು.

ಅದೇ ರೀತಿ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ ಸರಕಾರಿ ಉಪಕರಣಾಗಾರ ತರಭೇತಿ ಕೇಂದ್ರ(ಜಿಟಿಟಿಸಿ) ಜಿಲ್ಲೆಯ ಏಕೈಕ ಜಿಟಿಟಿಸಿ ಕೇಂದ್ರವಾಗಿದೆ. 100 ಶೇಕಡಾ ಉದ್ಯೋಗಾವಕಾಶ ಇರುವ ವಿವಿಧ ಡಿಪ್ಲೋಮಾ ಕೋರ್ಸುಗಳು ಈ ಸಂಸ್ಥೆಯಲ್ಲಿದ್ದು, ಇಲ್ಲಿ ಕಲಿತವರಿಗೆ ವಿದೇಶದಲ್ಲಿಯೂ ಸಾಕಷ್ಟು ಬೇಡಿಕೆ ಇದೆ. ಪ್ರಸಕ್ತ ವರ್ಷ ಈ ಸಂಸ್ಥೆಯಲ್ಲಿ ಸಾಕಷ್ಟು ಸೀಟುಗಳು ಖಾಲಿ ಇವೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಜಿಟಿಟಿಸಿ ಮತ್ತು ಐಟಿಐ ಕೋರ್ಸುಗಳಿಗೆ ಆಕರ್ಷಿಸಲು ಪರಿಣಾಮಕಾರಿಯಾದ ಕಾರ್ಯಕ್ರಮಗಳನ್ನು ನಡೆಸುವಂತೆ ಜಿ.ಪಂ. ಸಿಇಓ ಅವರು ತಿಳಿಸಿದರು.

ವಿವಿಧ ಇಲಾಖೆಗಳು ನಡೆಸುವ ಕೌಶಲ್ಯ ತರಭೇತಿ ಕಾರ್ಯಕ್ರಮಗಳಲ್ಲಿ ಉದ್ಯೋಗ ದೊರಕಿಸಿಕೊಡಲು ಆದ್ಯತೆ ನೀಡಬೇಕು. ಸ್ವಯಂ ಉದ್ಯೋಗ ತರಭೇತಿ ಪಡೆದವರಿಗೆ ಬ್ಯಾಂಕ್ ಸಾಲ ದೊರಕಿಸಿಕೊಡಲು ಆಯಾ ಇಲಾಖೆಗಳು ನೆರವು ನೀಡಬೇಕು. ಕೌಶಲ್ಯ ಕೋರ್ಸುಗಳಲ್ಲಿ ತರಭೇತಿ ಪಡೆದವರಿಗೆ ಉದ್ಯೋಗಾವಕಾಶಗಳನ್ನು ಒದಗಿಸಲು ಕೈಗಾರಿಕೆ- ಉದ್ಯಮ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಿಳಿಸಿದರು.

 ವಿವಿಧ ಪದವಿ ಕೋರ್ಸುಗಳಿಗೆ ಉದ್ಯಮಗಳಲ್ಲಿ ಅಪ್ರೆಂಟಿಶಿಪ್ ತರಬೇತಿ ನಿಗಧಿತವಾಗಿ ದೊರಕಿಸಿಕೊಡಬೇಕು. ವೃತ್ತಿಪರ ಶಿಕ್ಷಣ ಸಂಸ್ಥೆಗಳು ಈ ನಿಟ್ಟಿನಲ್ಲಿ ಕೈಗಾರಿಕೆ- ಉದ್ಯಮ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡರೆ ವಿದ್ಯಾರ್ಥಿಗಳಿಗೆ ಬಹಳ ಅನುಕೂಲವಾಗಲಿದೆ ಎಂದು ಅವರು ಹೇಳಿದರು.

ಜಿಲ್ಲೆಯ ವಿವಿಧ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸ್ವಉದ್ಯೋಗ ಸೇರಿದಂತೆ ವಿವಿಧ ಕೌಶಲ್ಯ ತರಭೇತಿ ಕಾರ್ಯಕ್ರಮಗಳಿಗೆ ಅರ್ಜಿಯನ್ನೇ ಆಹ್ವಾನಿಸದಿರುವುದಕ್ಕೆ ತೀವ್ರ ಅಸಮಾಧನಾನ ವ್ಯಕ್ತಪಡಿಸಿದ ಅವರು, ಕೌಶಲ್ಯ ತರಭೇತಿ ಕಾರ್ಯಕ್ರಮಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು. ಬೀದಿಬದಿ ವ್ಯಾಪಾರಿಗಳಿಗೆ ಆರ್ಥಿಕ ನೆರವು ನೀಡುವ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಡಾ. ಕೆ. ಆನಂದ್ ತಿಳಿಸಿದರು.

  ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರದೀಪ್ ಡಿಸೋಜ ಸಭೆಯಲ್ಲಿ ಮಾತನಾಡಿ, ಯುವನಿಧಿ ಯೋಜನೆಯಲ್ಲಿ ನಿರುದ್ಯೋಗಿಗಳಿಗೆ ಮಾಸಿಕ ಭತ್ಯೆ ದೊರಕಲು ಪೋರ್ಟಲ್‌ನಲ್ಲಿ ಸ್ವಯಂಘೋಷಣೆ ಸಲ್ಲಿಸುವುದು ಕಡ್ಡಾಯವಾಗಿದೆ. ಸ್ವಯಂಘೋಷಣೆ ಸಲ್ಲಿಸಿದರೆ ಭತ್ಯೆ ಪ್ರತೀ ತಿಂಗಳು ಜಮೆಯಾಗಲಿದೆ ಎಂದರು.

  ಸಭೆಯಲ್ಲಿ ಕೈಗಾರಿಕಾ ಜಂಟಿ ನಿರ್ದೇಶಕ ಗೋಕುಲದಾಸ್ ನಾಯಕ್, ಮೀನುಗಾರಿಕಾ ಉಪನಿರ್ದೇಶಕ ದಿಲೀಪ್, ಕೃಷಿ ಜಂಟೀ ನಿರ್ದೇಶಕ ಕೆಂಪೇಗೌಡ, ಕೆಜಿಟಿಟಿಐ ನಿರ್ದೇಶಕ ಗಿರಿಧರ್ ಸಾಲ್ಯಾನ್, ಜಿಟಿಟಿಸಿ ಪ್ರಾಂಶುಪಾಲ ಲಕ್ಷ್ಮೀನಾರಾಯಣ ಸಿ.ಆರ್.  ಮತ್ತಿತರರು ಇದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles