ಮ೦ಗಳೂರು: ಇತಿಹಾಸ ಪ್ರಸಿದ್ದ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೆಯು ಜ.14ರಿ೦ದ ಆರಂಭಗೊಳ್ಳಲಿದೆ.
ಜನವರಿ 24ರ ವರೆಗೆ ನಡೆಯಲಿರುವ ವಾರ್ಷಿಕ ಮಹೋತ್ಸವವು ತಾ.13ರಂದು ರಾತ್ರಿ ಮಹಾಪೂಜೆಯ ಬಳಿಕ ಮುಹೂರ್ತ ಬಲಿ, ದೇವರ ಪ್ರಾರ್ಥನೆಯೊಂದಿಗೆ ತಂತ್ರಿಗಳ ಯಾಗಶಾಲಾ ಪ್ರವೇಶದೊಂದಿಗೆ ಪ್ರಾರಂಭವಾಗುವುದು.
ಮಂಗಳವಾರ ಮುಂಜಾನೆ ತೀರ್ಥ ಸ್ನಾನ ಆರಂಭಗೊಂಡು, ಕದ್ರಿ ಶ್ರೀ ಯೋಗೀಶ್ವರ ಮಠಾಧಿಪತಿ ಶ್ರೀ ರಾಜಾ ನಿರ್ಮಲ್ ನಾಥಜೀಯವರಿಂದ ತೀರ್ಥ ಸ್ನಾನ ನೆರವೇರುವುದು. ಸಂಜೆ ಗಂಟೆ 6ಕ್ಕೆ ಏಳುಪಟ್ಟಣ ಮೊಗವೀರ ಮಹಾ ಸಭಾದವರಿಂದ ಧ್ವಜಸ್ತಂಭದ ಆರೋಹಣ, ಮಹಾಪೂಜೆ ಬಳಿಕ ಶ್ರೀ ಮಲರಾಯ ದೈವದ ಭಂಡಾರದ ಆಗಮನವಾಗುವುದು. ರಾತ್ರಿ 10ಕ್ಕೆ ಧ್ವಜಬಲಿ, ಕದ್ರಿ ಹತ್ತು ಸಮಸ್ತರಿಂದ ಗರುಡಾರೋಹಣ, ಉತ್ಸವಬಲಿ,ಭೂತಬಲಿ, ಕದ್ರಿ ಕೆಳಗಿನ ಮನೆಯವರಿಂದ ಕಂಚುದೀಪ ಬೆಳಗುವುದು, ದೀಪದಬಲಿ ಉತ್ಸವ , ಸಣ್ಣ ರಥೋತ್ಸವ, ತಪ್ಪಂಗಾಯಿ ನಡೆಯುವುದು.15, ಬುಧವಾರ ರಾತ್ರಿ ಉತ್ಸವಬಲಿ,ದೀಪದಬಲಿ ಉತ್ಸವ,ಸಣ್ಣ ರಥೋತ್ಸವ ಜರಗಲಿರುವುದು.
ತಾ.16,ಗುರುವಾರ ಸಂಜೆ ಬಿಕರ್ನಕಟ್ಟೆ ಸವಾರಿ ಬಲಿ, ತಾ.17,ಶುಕ್ರವಾರ ಮಲ್ಲಿಕಟ್ಟೆ ಸವಾರಿ ಬಲಿ, ತಾ.18,ಶನಿವಾರ ಮುಂಡಾಣಕಟ್ಟೆ ಸವಾರಿ ಬಲಿ, ತಾ.19,ರವಿವಾರ ಕೊಂಚಾಡಿ ಸವಾರಿ ಬಲಿ, ಅಲ್ಲದೆ ತಾ.20,ಸೋಮವಾರ ಏಳನೇ ದೀಪೋತ್ಸವ, ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದ್ದು , ತಾ.21, ಮಂಗಳವಾರ ದಂದು ಸಂಜೆ ” ಶ್ರೀ ಮನ್ಮಹಾರಥೋತ್ಸವ, ಬೆಳ್ಳಿರಥೋತ್ಸವ, ಚಂದ್ರಮಂಡಲ ಉತ್ಸವದ ಬಳಿಕ ಮಹಾಪೂಜೆ, ಭೂತಬಲಿ ಹಾಗೂ ಕವಾಟ ಬಂಧನ ನೆರವೇರುವುದು. ತಾ.22,ಬುಧವಾರ ಕವಾಟೋದ್ಘಾಟನೆ, ತುಲಾಭಾರ ಸೇವೆಗಳು ನಡೆಯಲಿದ್ದು, ರಾತ್ರಿ ಚಂದ್ರಮಂಡಲ ಉತ್ಸವ ಬಳಿಕ ಕದ್ರಿ ಹತ್ತು ಸಮಸ್ತರಿಂದ ಧ್ವಜಾವರೋಹಣಗೊಳ್ಳುವುದು.
ತಾ.24,ಶುಕ್ರವಾರ ಶ್ರೀ ಮಲರಾಯ ಹಾಗೂ ಪರಿವಾರ ದೈವಗಳ ನೇಮದೊಂದಿಗೆ ವರ್ಷಾವಧಿ ಜಾತ್ರೆ ಸಂಪನ್ನಗೊಳ್ಳಲಿದೆ.