ಮಂಗಳೂರು: “ವಿಶ್ವದಲ್ಲಿ ನಾವು ಮೊದಲಿಗರಾಗಬೇಕಾದರೆ ವಿಜ್ಞಾನದಲ್ಲಿ ಪ್ರತಿದಿನವೂ ಅನ್ವೇಷಣೆಯನ್ನು ಮಾಡಬೇಕು. ಇದಕ್ಕೋಸ್ಕರ ಸರ್ಕಾರ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯನ್ನು ರಾಜ್ಯ ಮಟ್ಟದಲ್ಲಿ ಆಯೋಜಿಸುತ್ತಿದೆ ಎಂದು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ಕೆ. ವಿ ರಾವ್ ಹೇಳಿದರು.
ಅವರು ಶಿಕ್ಷಣ ಇಲಾಖೆ ವತಿಯಿಂದ, ಶಕ್ತಿನಗರದ ಶಕ್ತಿ ವಿದ್ಯಾ ಸಂಸ್ಥೆ ಇದರ ಸಹಯೋಗದಲ್ಲಿ ನಡೆದ 2024-25ನೇ ಸಾಲಿನ ಪ್ರೌಢ ಶಾಲಾ ವಿಭಾಗದ ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜಗತ್ತು ಆನ್‍ಲೈನ್ ಯುಗದಲ್ಲಿದೆ. ನಾವು ಅನ್ವೇಷಣೆ ಮಾಡುತ್ತಿದ್ದ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಎಲ್ಲವೂ ಕಂಪ್ಯೂಟರ್‍ನ ಚಿಪ್‍ನ ಮೂಲಕ ನಿಯಂತ್ರಿಸಲ್ಪಟ್ಟಿರುವ ಕಾಲಘಟ್ಟವಾಗಿದೆ. ನಾವು ಎಲ್ಲಾ ಅನ್ವೇಷಣೆಯನ್ನು ಮಾಡುವ ಸಂದರ್ಭದಲ್ಲಿ ಕಂಪ್ಯೂಟರಿನ ಭಾಷೆಯನ್ನು ಅರ್ಥಮಾಡಿಕೊಂಡು ಅಳವಡಿಸಿಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು.
ಶಾಲಾ ಶಿಕ್ಷಣ ಇಲಾಖೆ, ಉಪನಿರ್ದೇಶಕ ವೆಂಕಟೇಶ್.ಎಸ್ ಪಟೇಗಾರ್ ಮಾತನಾಡಿ, ವಿಜ್ಞಾನ ಎμÉ್ಟೀ ಮುಂದುವರಿದರೂ ನಮ್ಮ ಸುತ್ತಮುತ್ತಲಿನ ಪರಿಸರ ಮಾಲಿನ್ಯ ಇನ್ನೂ ಕಡಿಮೆಯಾಗಿಲ್ಲ, ಈ ನಿಟ್ಟಿನಲ್ಲಿ ಮುಂದಿನ ಪೀಳಿಗೆ ಯೋಚನೆ ಮಾಡಲೇಬೇಕಾಗಿದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಕ್ತಿ ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ಡಾ. ಕೆ.ಸಿ ನಾೈಕ್ ವಹಿಸಿದ್ದರು.
ರಾಜ್ಯದ 35 ಶೈಕ್ಷಣಿಕ ಜಿಲ್ಲೆಯಿಂದ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವ ಪ್ರತಿ ಜಿಲ್ಲೆಯಿಂದ 6 ಮಂದಿಯಂತೆ ಒಟ್ಟು 210 ಸ್ಪರ್ಧಿಗಳು ಭಾಗವಹಿಸಿದರು. ವಿಶ್ವೇಶ್ವರಯ್ಯ ಮ್ಯೂಸಿಯಂ ಬೆಂಗಳೂರು, ಶಿಕ್ಷಣ ಸಹಾಯಕ ಹೇಮರಾಜ್ ಸ್ಪರ್ಧಾಳುಗಳಿಗೆ ವಿಜ್ಞಾನದ ಮಾದರಿಯ ತಯಾರಿಯ ಉಪಯುಕ್ತತೆಯ ಬಗ್ಗೆ ಮಾಹಿತಿ ನೀಡಿದರು.
ಮಂಗಳೂರು ದಕ್ಷಿಣ ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರ್ ಹೆಚ್ ಆರ್, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಮಂಗಳೂರು, ಉಪನ್ಯಾಸಕ ಶ್ರೀನಿವಾಸ್ ಅಡಿಗ, ಶಕ್ತಿ ವಿದ್ಯಾ ಸಂಸ್ಥೆ, ಪ್ರಧಾನ ಸಲಹೆಗಾರ ರಮೇಶ್ ಕೆ, ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ್ ಮೂರ್ತಿ ಉಪಸ್ಥಿತರಿದ್ದರು.
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಪನಿರ್ದೇಶಕಿ(ಅಭಿವೃದ್ಧಿ), ಪ್ರಾಂಶುಪಾಲ ರಾಜಲಕ್ಷ್ಮಿ .ಕೆ ಸ್ವಾಗತಿಸಿದರು. ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲ ಬಬಿತಾ ಸೂರಜ್ ವಂದಿಸಿದರು. ಶಿಕ್ಷಕಿ ಪ್ರೇಮಲತಾ ನಿರೂಪಿಸಿದರು.