ಮಂಗಳೂರು: ಸರ್ಕಾರ ಎಲ್ಲರನ್ನೂ ಸಮಾನ ದೃಷ್ಟಿಯಿಂದ ನೋಡುತ್ತದೆ. ಸರಕಾರದ ಯೋಜನೆಗಳ ಲಾಭವನ್ನು ಅಲ್ಪಸಂಖ್ಯಾತರು ಪಡೆಯಬೇಕು ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ಹೇಳಿದರು.
ಅವರು ಸೋಮವಾರ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ನಡೆದ ಅಲ್ಪಸಂಖ್ಯಾತರ ಕುಂದು-ಕೊರತೆ ಸಭೆಯಲ್ಲಿ ಉದ್ದೇಶಿಸಿ ಮಾತನಾಡಿದರು.
ಅಲ್ಪಸಂಖ್ಯಾತರಿಗೆ ಕೇಂದ್ರ ಸರ್ಕಾರದಿಂದ ಮತ್ತು ರಾಜ್ಯ ಸರ್ಕಾರದಿಂದ ಹಲವು ಯೋಜನೆಗಳಿವೆ. ಪ್ರಧಾನಮಂತ್ರಿಗಳ 15 ಅಂಶ ಯೋಜನೆಗಳನ್ನು ಜನರಿಗೆ ಮುಟ್ಟಿಸುವ ಕಾರ್ಯ ನಡೆಸಬೇಕು ಎಂದು ಅವರು ಸೂಚಿಸಿದರು.
ಸರ್ಕಾರದ ಮೇಲೆ ಮತ್ತು ದೇಶದ ಕಾನೂನಿನ ಮೇಲೆ ನಂಬಿಕೆ ಇಡಬೇಕು. ಮುಂದೆ ಬರುವ ಬಜೆಟ್‍ನಲ್ಲಿ ಅಲ್ಪಸಂಖ್ಯಾತರಿಗೆ ಹತ್ತು ಸಾವಿರ ಕೋಟಿ ಅನುದಾನ ನೀಡಲು ಕೇಂದ್ರಕ್ಕೆ ಪತ್ರ ಬರೆಯಲಾಗಿದೆ ಎಂದು ಅವರು ತಿಳಿಸಿದರು. ಇದೇ ಸಂದರ್ಭದಲ್ಲಿ ಅವರು ಅಲ್ಪಸಂಖ್ಯಾತರ ಮುಖಂಡರು, ಸಂಘ ಸಂಸ್ಥೆಗಳಿಂದ ಅಹವಾಲು ಸ್ವೀಕರಿಸಿದರು.
1ರಿಂದ 10ನೇ ತರಗತಿ ಮಕ್ಕಳಿಗೆ ಸಿಗುತ್ತಿದ್ದ ವಿದ್ಯಾರ್ಥಿ ವೇತನವನ್ನು ರದ್ದುಗೊಳಿಸಲಾಗಿದೆ, ಅದನ್ನು ಮತ್ತೆ ಪ್ರಾರಂಭಿಸಬೇಕು ಎಂದು ಅಲ್ಪಸಂಖ್ಯಾತರ ಸಮುದಾಯದ ಮುಖಂಡರು ಮನವಿ ನೀಡಿದರು.
ಸಭೆಯಲ್ಲಿ ವಿವಿಧ ಅಲ್ಪಸಂಖ್ಯಾತರ ಸಮುದಾಯದ ಮುಖಂಡರು, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಜಿನೇಂದ್ರ, ವಕ್ಫ್ ಅಧಿಕಾರಿ ಅಬೂಬಕ್ಕರ್ ಮತ್ತಿತರರು ಉಪಸ್ಥಿತರಿದ್ದರು.