ಮಂಗಳೂರು: 30ನೇ ಕೊಡಿಯಾಲ್ ಬೈಲ್ ವಾರ್ಡ್ ನ ವಿವೇಕ ನಗರ ಬಳಿ ಮಾಜಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರು ಗಣೇಶ್ ಹಾಗೂ ರೋಹಿಣಿ ದಂಪತಿಗೆ ತಮ್ಮ ವೈಯಕ್ತಿಕ ನೆಲೆಯಲ್ಲಿ ನಿರ್ಮಿಸಿಕೊಟ್ಟ ‘ಕೇಶವ ಸದನ’ ಇದರ ಗೃಹ ಪ್ರವೇಶ ಕಾರ್ಯಕ್ರಮ ಆದಿತ್ಯವಾರ ಜರುಗಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಬಳಿಕ ಮಾತಾಡಿದ ಸುಧೀರ್ ಶೆಟ್ಟಿ ಕಣ್ಣೂರು ಅವರು, “ನನ್ನ ಹುಟ್ಟುಹಬ್ಬದ ಸಂದರ್ಭದಲ್ಲಿ ಇಂತಹ ಸಮಾಜಮುಖಿ ಕೆಲಸದಲ್ಲಿ ತೊಡಗಿಕೊಂಡಿರುವುದು ಖುಷಿ ಎನಿಸುತ್ತದೆ. ನಮ್ಮ ಜೀವನದಲ್ಲಿ ಇತರರ ನೋವಿಗೆ ನೆರವಾಗುವುದನ್ನು ದೇವರು ಕೂಡಾ ಮೆಚ್ಚುತ್ತಾರೆ. ಬಡ ಕುಟುಂಬದ ಮನೆ ಕುಸಿದ ಸಂದರ್ಭದಲ್ಲಿ ಅವರ ಬಳಿ ಸೂಕ್ತ ದಾಖಲೆಗಳಿರಲಿಲ್ಲ. ಹೀಗಾಗಿ ನಾನು ಮೇಯರ್ ಆಗಿದ್ದಾಗ ಉಚಿತವಾಗಿ ಮನೆ ನಿರ್ಮಿಸಿಕೊಡುವ ಭರವಸೆ ನೀಡಿದ್ದೆ. ಅದನ್ನು ಇಂದು ನೆರವೇರಿಸಿದ್ದೇನೆ. ಮುಂದಿನ ದಿನಗಳಲ್ಲಿ ಆಸರೆ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಿ ಆ ಮೂಲಕ ಇನ್ನಷ್ಟು ಮಂದಿ ಬಡವರಿಗೆ ಮನೆ ನಿರ್ಮಿಸುವ ಯೋಜನೆಗೆ ಚಾಲನೆ ನೀಡಲಿದ್ದೇನೆ“ ಎಂದರು.
ಮಾಜಿ ಸಚಿವ ಕೃಷ್ಣ ಜೆ. ಪಾಲೇಮಾರ್ ಮಾತಾಡಿ, ”ಮಾಜಿ ಮೇಯರ್ ಅವರು ಬಡಕುಟುಂಬಕ್ಕೆ ನೆರವಾಗುವ ಮೂಲಕ ತಮ್ಮ ಸಾಮಾಜಿಕ ಬದ್ಧತೆ ಮತ್ತು ಜವಾಬ್ದಾರಿಯನ್ನು ಮೆರೆದಿದ್ದಾರೆ. ಇದೊಂದು ಮಾದರಿ ಕಾರ್ಯ. ಇಂತಹ ಕಾರ್ಯಗಳಲ್ಲಿ ಜನಪ್ರತಿನಿಧಿಗಳು ತೊಡಗಿಕೊಳ್ಳಬೇಕು. ಹುಟ್ಟುಹಬ್ಬದ ಸಂದರ್ಭದಲ್ಲಿ ನೊಂದವರ ಮುಖದಲ್ಲಿ ನಗು ಅರಳಿಸುವುದು ಶ್ಲಾಘಿಸತಕ್ಕ ವಿಚಾರ“ ಎಂದರು.
ವೇದಿಕೆಯಲ್ಲಿ ಅರೆಸ್ಸೆಸ್ ಕ್ಷೇತ್ರೀಯ ಸಂಘ ಸರಚಾಲಕ ಡಾ.ವಾಮನ್ ಶೆಣೈ, ಮಂಗಳೂರು ದಕ್ಷಿಣ ಕ್ಷೇತ್ರ ಶಾಸಕ ವೇದವ್ಯಾಸ ಕಾಮತ್, ಮಂಗಳೂರು ಮೇಯರ್ ಮನೋಜ್ ಕುಮಾರ್, ಮೋನಪ್ಪ ಭಂಡಾರಿ, ದಕ್ಷಿಣ ಮಂಡಲದ ಅಧ್ಯಕ್ಷ ರಮೇಶ್ ಕಂಡೆಟ್ಟು, ಸುದರ್ಶನ್ ಮೂಡಬಿದ್ರಿ, ಪೂರ್ಣಿಮಾ, ಮಂಜುಳಾ ರಾವ್, ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ, ಕಸ್ತೂರಿ ಪಂಜ, ಮನಪಾ ಸದಸ್ಯರು, ಸ್ಥಳೀಯ ಬಿಜೆಪಿ ನಾಯಕರು ಉಪಸ್ಥಿತರಿದ್ದರು.
ವಿವೇಕ್ ಅತಿಥಿಗಳನ್ನು ಸ್ವಾಗತಿಸಿದರು.
12 ಲಕ್ಷ ರೂ. ವೆಚ್ಚದಲ್ಲಿ ಸುಂದರ ಮನೆ ನಿರ್ಮಾಣ!
ಕಳೆದ ಮಳೆಗಾಲದಲ್ಲಿ ಗಣೇಶ್ ರೋಹಿಣಿ ಮತ್ತು ಮಕ್ಕಳು ವಾಸ್ತವ್ಯವಿದ್ದ ಹಳೆಯ ಹೆಂಚಿನ ಮನೆ ಭಾರೀ ಮಳೆಯಿಂದಾಗಿ ಕುಸಿದು ಬಿದ್ದಿತ್ತು. ಈ ವೇಳೆ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದರು. ಈ ವೇಳೆ ಮನಪಾ ಮೇಯರ್ ಆಗಿದ್ದ ಸುಧೀರ್ ಶೆಟ್ಟಿ ಕಣ್ಣೂರು ಅವರು ಬಡಕುಟುಂಬದ ನೋವಿಗೆ ಸ್ಪಂದಿಸಿ ತಮ್ಮ ವೈಯಕ್ತಿಕ ನೆಲೆಯಲ್ಲಿ ಮನೆ ನಿರ್ಮಿಸುವುದಾಗಿ ಹೇಳಿದ್ದರು.
ತಾವು ನುಡಿದಂತೆ 12 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಎರಡು ಬೆಡ್ ರೂಮ್ ಹೊಂದಿರುವ 600 ಚದರ ಅಡಿಯ ಮನೆಯನ್ನು ಕೇವಲ 4 ತಿಂಗಳಲ್ಲಿ ನಿರ್ಮಿಸಲಾಗಿದೆ. ಈ ಹಿಂದೆಯೂ ಇವರು ನಾಲ್ಕು ಮನೆಗಳನ್ನು ತಮ್ಮ ವೈಯಕ್ತಿಕ ನೆಲೆಯಲ್ಲಿ ನಿರ್ಮಿಸಿ ಗಣ್ಯರ ಸಮ್ಮುಖದಲ್ಲಿ ಹಸ್ತಾಂತರ ಮಾಡಿರುವುದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದಾಗಿದೆ. ಮಾಜಿ ಮೇಯರ್ ಸಾಮಾಜಿಕ ಕಳಕಳಿಗೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.