ಮ೦ಗಳೂರು: ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಸಂಬಂಧ ಎಂಟು ಮಂದಿಯನ್ನು ಬಂಧಿಸಲಾಗಿದೆ .ಅಬ್ದುಲ್ ಸಫ್ವಾನ್(29) ನಿಯಾಜ್(28), ಮೊಹಮ್ಮದ್ ಮುಝುಮಿಲ್(32), ಕಲಂದರ್ ಶಾಫಿ(31), ಮೊಹಮ್ಮದ್ ರಿಜ್ವಾನ್(28) ಆದಿಲ್ ಮೆಹರೂಫ್ , ಕಳಸದ ರಂಜಿತ್(19) ನಾಗರಾಜ್(2೦) ಬಂಧಿತ ಆರೋಪಿಗಳು .
ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಶನಿವಾರ ಮಂಗಳೂರಿಗೆ ಭೇಟಿ ನೀಡಿ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಶುಕ್ರವಾರ ಆರೋಪಿಗಳನ್ನು ಬ೦ಧಿಸಲಾಗಿದ್ದು ತನಿಖೆ ಮು೦ದುವರಿದಿದೆ ಎ೦ದು ವಿವರಿಸಿದರು.
ಆ್ಯಂಟಿ ಕಮ್ಯೂನಲ್ ಟಾಸ್ಕ್ ಫೋರ್ಸ್
ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿಯಲ್ಲಿ ಶಾಂತಿ ಕಾಪಾಡಲು ಹಾಗೂ ಅಹಿತಕರ ಘಟನೆಗಳು ಮರುಕಳಿಸದಂತೆ ತಡೆಯಲು ಉಭಯ ಜಿಲ್ಲೆಗಳಿಗೆ ಸೀಮಿತವಾಗಿ ಪ್ರತ್ಯೇಕವಾಗಿ ಆ್ಯಂಟಿ ಕಮ್ಯೂನಲ್ ಟಾಸ್ಕ್ ಫೋರ್ಸ್ ಆರಂಭಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಈ ಪಡೆಯು ನಕ್ಸಲ್ ನಿಗ್ರಹ ದಳದ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ. ಕರಾವಳಿ ಜಿಲ್ಲೆಗಳಲ್ಲಿ ಕೋಮುಗಲಭೆ ನಡೆಯುವ ನಿಟ್ಟಿನಲ್ಲಿ ಐಜಿ ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ಆ್ಯಂಟಿ ಕಮ್ಯೂನಲ್ ಟಾಸ್ಕ್ ಫೋರ್ಸ್ ಒಂದು ವಾರದೊಳಗೆ ಸ್ಥಾಪನೆಯಾಗಲಿದೆ ಎಂದರು.
