ಮಂಗಳೂರು: ದಕ್ಷಿಣ ಕನ್ನಡ ಪ್ರವಾಸದಲ್ಲಿರುವ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ
ಹರ್ದೀಪ್ ಸಿಂಗ್ ಪುರಿ ಅವರು ಮಂಗಳೂರಿನಲ್ಲಿ ಇಂಧನ ಭದ್ರತಾ ಸಮ್ಮಿಟ್ ಆಯೋಜಿಸುವಂತೆ ದಕ್ಷಿಣ ಕನ್ನಡ ಸಂಸದ
ಕ್ಯಾ. ಬ್ರಿಜೇಶ್ ಚೌಟ ಅವರಿಗೆ ಸಲಹೆ ನೀಡಿದ್ದು, ಇದಕ್ಕೆ ತಮ್ಮ ಕಡೆಯಿಂದ ಸಂಪೂರ್ಣ ಬೆಂಬಲ ನೀಡುವುದಾಗಿ
ಹೇಳಿದ್ದಾರೆ.
ಮಂಗಳೂರಿನಲ್ಲಿ ನಡೆಯುತ್ತಿರುವ ಲಿಟ್ ಫೆಸ್ಟ್ ಕಾರ್ಯಕ್ರಮದಲ್ಲಿ ಶನಿವಾರ ಭಾಗವಹಿಸಿದ್ದ ಅವರಿಗೆ, ಎರಡು ಹಾಗೂ
ಮೂರನೇ ಹಂತದ ನಗರಗಳಲ್ಲಿನ ಸಾಮರ್ಥ್ಯವನ್ನು ಬಳಸಿಕೊಳ್ಳಲು ದೊಡ್ಡ ನಗರಗಳನ್ನು ಮೀರಿ ಇಂಧನ ಭದ್ರತಾ
ಶೃಂಗಸಭೆಗಳಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಸಾಧ್ಯತೆಯ ಬಗ್ಗೆ ಲೇಖಕಿ ಹರ್ಷ ಭಟ್ ಕೇಳಿದ ಪ್ರಶ್ನೆಗೆ
ಉತ್ತರಿಸಿರುವ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಈ ಭರವಸೆ ನೀಡಿದ್ದಾರೆ.
ಮಂಗಳೂರಿನಂತಹ ನಗರದಲ್ಲಿ ಖಂಡಿತವಾಗಿಯೂ ಇಂಧನ ಭದ್ರತಾ ಸಮಿಟ್ ಮಾಡಬಹುದು. ನನ್ನ ಸ್ನೇಹಿತ
ಮತ್ತು ಸಂಸದರಾದ ಕ್ಯಾ. ಚೌಟ ಅವರು ನಿನ್ನೆ ಈ ಭಾಗದ ಎಲ್ಲಾ ತೈಲ ಮಾರಾಟ ಕಂಪನಿಗಳ ಪ್ರಮುಖರನ್ನು ಭೇಟಿ
ಮಾಡಿದ್ದಾರೆ. ಒಂದು ವೇಳೆ ನೀವು ಇಲ್ಲಿಇಂಧನ ಭದ್ರತಾ ಕಾರ್ಯಕ್ರಮವನ್ನು ಆಯೋಜಿಸಲು ಬಯಸಿದರೆ, ಈ ತೈಲ
ಕಂಪನಿಗಳೊಂದಿಗೆ ಮಾತನಾಡಬಹುದು. ಇದಕ್ಕೆ ನನ್ನ ಸಂಪೂರ್ಣ ಬೆಂಬಲವಿರುತ್ತದೆ. ಭಾರತ ಇಂಧನ ಸಪ್ತಾಹದ
ಜತೆಗೆ ಇಂಥ ಇಂಧನ ಭದ್ರತಾ ಸಮ್ಮೇಳನಗಳನ್ನು ಆಯೋಜಿಸುವುದರಿಂದ ಹೆಚ್ಚಿನ ತೈಲೋದ್ಯಮ ಕ್ಷೇತ್ರಕ್ಕೆ ಹೆಚ್ಚಿನ
ಉತ್ತೇಜನ, ಅನುಕೂಲತೆ ದೊರೆಯಲಿದೆಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.