ಮ೦ಗಳೂರು: ಬಂಟ್ಸ್ ಓಮಾನ್ ಸಾಂಸ್ಕೃತಿಕ ಸಂಘದ (BOSS)ನೆರಳಲ್ಲಿ “ಸಾಂಸ್ಕೃತಿಕ ಸಮ್ಮಿಲನ ” ಕೆಸರು ಗದ್ದೆ ಗೋಲ್ಡ್ ಫೀಲ್ಡ್ (KGF) – ಗ್ರಾಮೀಣ ಕ್ರಿಡೋತ್ಸವವು ಕಳೆದ ಶುಕ್ರವಾರ ಮಸ್ಕತ್ ನ “ಬರ್ಕ ಗುತ್ತಿ ” ನ ಅಗೋಳಿ ಮಂಜಣ್ಣ ಅಂಗಣದಲ್ಲಿ ಜರಗಿತು.ತುಳುನಾಡಿನ ಬಂಟರ ಸಂಸ್ಕೃತಿ,ನಂಬಿಕೆ,ಆಚರಣೆಗಳ, ನಡವಳಿಕೆಗಳ ನೆನಪಿನ ಮೆಲುಕು ಹಾಕಲು “ತುಳುನಾಡಿನ ಪ್ರತಿಕೃತಿ ” ಸೃಷ್ಟಿ ಸಲಾಗಿತ್ತು.
ಮಸ್ಕತ್ ಹೊರವಲಯದಲ್ಲಿ ರುವ ಉದ್ಯಮಿ ಅಶ್ವಿನಿ ದರಂಸಿ ಭಾಯ್ ಅವರ ಫಾರ್ಮ್ ಹೌಸ್ ನಲ್ಲಿ ದಿವಾಕರ ಶೆಟ್ಟಿ ಮಲ್ಲಾರ್ ಅವರ ಪರಿಕಲ್ಪನೆ ಯಲ್ಲಿ “ಬರ್ಕ ಗುತ್ತು ಮನೆ ” , ಸಾವಿರ ಮಂದಿ ಕುಳಿತು ಕೊಳ್ಳ ಬಹುದಾದ “ಬಂಟರ ಭವನ” ನಿರ್ಮಿಸಲಾಗಿತ್ತು.
ಗುತ್ತಿನ ಪಡಸಾಲೆ, ರಾಟೆ ಅಳವಡಿಸಿದ ಭಾವಿ, ಸಿರಿ ತುಪ್ಪೆ -ಭತ್ತದ ಕಣಜ, ಪಡಿ ಮಂಚ, ಭತ್ತ ಕುಟ್ಟುವ “ಬಾರ ಕಲ” ದಲ್ಲಿರಿಸಿದ ಒನಕೆಗಳು, ಮಡಲು ತಟ್ಟಿಯ ಹಳ್ಳಿ ಯ ಬಚ್ಚಲು ಮನೆ,ಉತ್ತು ಹದಗೊಳಿಸಿದ ಸುಮಾರು 60 ಮೀಟರ್ ಉದ್ದ ದ ಕೆಸರು ನೀರು ತುಂಬಿದ ವಿಶಾಲವಾದ ಕಂಬಳ ಗದ್ದೆ, ಸೆಗಣಿ ಸಾರಿಸಿದ ವಿಸ್ತರವಾದ ಅಂಗಳ, ತೆಂಗಿನ ಸೋಗೆ ಹೆಣೆದು ಮಾಡಿದ ವಿಶಾಲವಾದ ಚಪ್ಪರ(ಶಾಮಿಯಾನ ದ ಬಳಕೆ ಮಾಡಲಿಲ್ಲ ), ಏಕ ಕಾಲದಲ್ಲಿ 200 ಮಂದಿ ಕುಳಿತು ಊಟ ಮಾಡುವ ವ್ಯವಸ್ಥೆಯ ಭೋಜನ ಶಾಲೆ, ಖರ್ಜೂರದ ಮರಕ್ಕೆ ಎಳನೀರು ಗೊಂಚಲುಗಳನ್ನು ಕಸಿಕಟ್ಟಿ ಅಳವಡಿಸಿದ ಶೇಂದಿ ಮೂರ್ತೆಯ ಮಡಿಕೆ, ಸಂತೆಯ ಗದ್ದೆ ಯಲ್ಲಿ ಎಲೆ ಮಡಲು ಕಟ್ಟಿ ನಿರ್ಮಿಸಿದ ಗೂಡಂಗಡಿಗಳು…. ಸಮ್ಮಿಲನ ಕ್ಕಾಗಿ ಅಣಿಗೊಳಿಸ ಲಾಗಿತ್ತು.
ಕೊಡೆತ್ತೂರಿನಿಂದ ತರಿಸಿದ್ದ ಭತ್ತ ದ ತೆನೆಗಳನ್ನು ಗುತ್ತಿನ ಯಜಮಾನ ಶಶಿಧರ ಶೆಟ್ಟಿ ಮಲ್ಲಾರ್ ಅವರು ತೊಳಸಿ ಕಟ್ಟೆ ಯ ಬಳಿಯಿಂದ ಹೊತ್ತುಕೊಂಡು ಪರಿವಾರದೊಂದಿಗೆ ಗುತ್ತಿನ ಚಾವಡಿ ಪ್ರವೇಶಿಸಿದರು. ದೀಪ ಬೆಳಗಿಸಿ,ಪ್ರಾರ್ಥನೆ ಮಾಡಿ ಕೊರಲ್ ಪರ್ಬ (ಕದಿರು ಹಬ್ಬ) ಆಚರಿಸಲಾಯಿತು.
ಬೆಳಗ್ಗಿನ ಉಪಹಾರ ಕ್ಕೆ ತುಳುನಾಡಿನ ಸಾಂಪ್ರದಾಯಿಕ ಪದೆಂಗಿ , ಸಜ್ಜಿಗೆ ಬಜಿಲ್, ಮೂಡೆ ಚಟ್ನಿ, ಶೀರ… ಮತ್ತು ಗೂಡoಗಡಿಗಳಲ್ಲಿ ನಿರಂತರ ವಾಗಿ ಎಳನೀರು, ಬಚ್ಚಗಾoಯಿ, ಕಬ್ಬಿನ ರಸ, ಮಜ್ಜಿಗೆ, ಪಾನಕ, ಚರುoಬುರಿ, ಬಾಳೆ ಹಣ್ಣು,ಐಸ್ ಕ್ಯಾಂಡಿ,ಸಬಿ ತಿಂಡಿ ಗಳ ವಿತರಣೆ ಮಾಡಲಾಗಿತ್ತು.ಸಂಜೆ ಮೊಟ್ಟೆ ಆಮ್ಲೆಟ್, ಪೋಡಿ, ಗೋಳಿಬಜೆ ಯ ವ್ಯವಸ್ಥೆ ಇತ್ತು.ಬಂಟ ಪರಿವಾರದವರೇ ಸಿದ್ದ ಪಡಿಸಿದ ಶುಚಿ ರುಚಿಯಾದ ತುಳುನಾಡಿನ ಕೋಳಿ ತಮ್ಮನ ದ ಊಟವನ್ನು ತುದಿ ಬಾಳೆಎಲೆ ಯಲ್ಲಿ ಬಡಿಸಲಾಯಿತು.
ಕದ್ರಿ ನವನೀತ ಶೆಟ್ಟಿ ಅವರು ವಿಶೇಷ ಅತಿಥಿಯಾಗಿ ಆಗಮಿಸಿ ನಿರಂತರ 16ಗಂಟೆಗಳ ಕಾಲ ಕಾರ್ಯಕ್ರಮ ನಿರ್ವಹಣೆ ಮಾಡಿದರು.ಸರೋಜ ಶಶಿಧರ ಶೆಟ್ಟಿ ಮಲ್ಲಾರ್, ಸುಧೀರಾ ದಿವಾಕರ್ ಶೆಟ್ಟಿ ಮಲ್ಲಾರ್,ಶೈನಾ ಗಣೇಶ್ ಶೆಟ್ಟಿ,ವಾಣಿಶ್ರೀ ನಾಗೇಶ್ ಶೆಟ್ಟಿ,ಶ್ರೇಯ ಮನೋಜ್ ಜಯರಾಮ್ ಶೆಟ್ಟಿ,ಅನುಷಾ ಶಿಶಿರ್ ರೈ,ಸುರಕ್ಷಾ ಹರ್ಷಿತ್ ರೈ ದಂಪತಿಗಳ ತಂಡವು ಸಾವಿರಾರು ಬಂಟರನ್ನು ಒಂದೇ ಸೂರಿನಡಿಯಲ್ಲಿ ಸೇರಿಸಿದ ಈ ಚಾರಿತ್ರಿಕ ಸಮ್ಮೇಳನವನ್ನು ಸಂಘಟಿಸಿತು.
ಮಸ್ಕತ್ ನ ಬರ್ಕಗುತ್ತು ಕಂಬಳ
ಶಿಬಿರಗಳಲ್ಲಿ ಕೋಣ ಗಳನ್ನು ಸಜ್ಜು ಗೊಳಿಸಿ ಕೊಂಬು, ಡೋಲು ವಾದ್ಯ, ಕೀಲು ಕುದುರೆ, ಗೊಂಬೆ ಕುಣಿತ ದೊಂದಿಗೆ ಬರ್ಕ ಗುತ್ತಿನ ಅಂಗಳಕ್ಕೆ ಉತ್ಸಾಹ ದಿಂದ ಆಗಮಿಸುವ ನೊಗ ಕಟ್ಟಿದ ಓಟದ ಕೋಣಗಳ ಅಬ್ಬರ,ಯಜಮಾನ ಪರಿವಾರ ವನ್ನು ಬರ್ಕ ಗುತ್ತಿನ ಏಳು ಪ್ರಮುಖರು ಜೋಡು ಬೊಂಡ ಕೊಟ್ಟು ಸ್ವಾಗತ ನೀಡಿ ಬರಮಾಡಿ ಕೊಳ್ಳುವ,ಕೋಣಗಳು ಸಾಲಾಗಿ ಗದ್ದೆಗೆ ಇಳಿಯುವ, ಗಂತಿನಲ್ಲಿ ಪುoಡಾಟ ಮಾಡುವ, ಕೋಣಗಳನ್ನು ಓಡಿಸುವ ದೃಶ್ಯ ಗಳು ರಂಜನೀಯವಾಗಿತ್ತು.
ಕೆಸರು ಗದ್ದೆಯಲ್ಲಿ ಜಾನಪದ ಕುಣಿತ, ಗುತ್ತಿನ ಅಂಗಳದಲ್ಲಿ ಕಂಗಿಲು ಕುಣಿತ, ನೃತ್ಯ ಭಜನೆ ನಡೆಯಿತು. ಗೂಡು ದೀಪ ಸ್ಪರ್ಧೆ ಯಲ್ಲಿ ಸಾಂಪ್ರದಾಯಕ ಹಾಗೂ ಆಧುನಿಕ ಗೂಡು ದೀಪ ಗಳು ಇದ್ದವು. ರಂಗೋಲಿ, ಮಡಲು ಹೆಣೆಯುವ, ಭತ್ತ ಕುಟ್ಟುವ ಸ್ಪರ್ಧೆಗಳಲ್ಲಿ ಯೂ ತುರುಸಿನ ಸ್ಪರ್ಧೆ ಇತ್ತು.