ಮಂಗಳೂರು: ಫೀನಿಕ್ಸ್ ಫಿಲ್ಮ್ಸ್ ಲಾಂಛನದಡಿಯಲ್ಲಿ ನಿರ್ಮಾಣವಾಗಿರುವ ಮಹೇಂದ್ರ ಕುಮಾರ್ ನಿರ್ಮಾಣದ ಹಾಗೂ ಗೌರಿ ಶ್ರೀನಿವಾಸರವರ ನಿರ್ದೇಶನದ “ದಿ ಜರ್ನಿ ಆಫ್ ಬೆಳ್ಳಿ’ ಮಕ್ಕಳ ಚಲನಚಿತ್ರ ಶುಕ್ರವಾರ ಬೆಳಗ್ಗೆ ನಗರದ ಭಾರತ್ ಮಾಲ್ ನಲ್ಲಿರುವ ಬಿಗ್ ಸಿನೆಮಾಸ್ ನಲ್ಲಿ ಬಿಡುಗಡೆಗೊಂಡಿತು.
ಕಾರ್ಯಕ್ರಮವನ್ನುಸ್ಪೀಕರ್ ಯು.ಟಿ. ಖಾದರ್ ಅವರು, ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಸಂಸದ ಕ್ಯಾಪ್ಟನ್ ಬೃಜೇಶ್ ಚೌಟ , ಶಾಸಕ ಡಿ.ವೇದವ್ಯಾಸ ಕಾಮತ್, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ,ಮಾಜಿ ಮೇಯರ್ ಶಶಿಧರ್ ಹೆಗ್ಡೆ ಜಿಲ್ಲಾ ಬಿಜೆಪಿ ವಕ್ತಾರ ರಾಜ್ ಗೋಪಾಲ್ ರೈ, ಕಬಡ್ಡಿ ಅಸೋಷಿಯೇಷನ್ ಅಧ್ಯಕ್ಷ ಅಮರ್ ನಾಥ್ ರೈ, ಇಸ್ಮಾಯಿಲ್ ಮೂಡುಶೆಡ್ಡೆ, ನವೀನ್ ಬೋಂದೆಲ್, ಸಚಿನ್ ರೈ, ಧನುಷ್ ರೈ, ಭಾರತ್ ಸಿನಿಮಾಸ್ ನಿರ್ದೇಶಕ ಬಾಲಕೃಷ್ಣ ಶೆಟ್ಟಿ ಮತ್ತಿತರರು ಅತಿಥಿಗಳಾಗಿದ್ದರು.
ಸಿನಿಮಾ ಕುರಿತು:
ಈ ಹಿಂದೆ “ಕಾರ್ನಿಕೊದ ಕಲ್ಲುರ್ಟಿ’ ಎಂಬ ಚಾರಿತ್ರಿಕ ತುಳು ಸಿನೆಮಾವನ್ನು ಮಹೇಂದ್ರ ಕುಮಾರ್ ನಿರ್ಮಾಣ ಮಾಡಿ ಯಶಸ್ವಿಯಾಗಿದ್ದು, ಇದು ಅವರ ಎರಡನೇ ಚಿತ್ರವಾಗಿದೆ.
9 ವರ್ಷದ ಹುಡುಗಿ ಬೆಳ್ಳಿ, ಭಾರತೀಯ ಸೇನೆಯಲ್ಲಿ ಗಡಿಪ್ರದೇಶದಲ್ಲಿ ಕರ್ತವ್ಯನಿರತನಾಗಿರುವ ತನ್ನ ತಂದೆಯ ಬರವಿಗಾಗಿ ಕಾಯುತ್ತಿರುವ ಕಥೆ, ಕ್ರಮೇಣ ಬೆಳ್ಳಿಯ ಬದುಕಿನಲ್ಲಿ ನಡೆದ ಘಟನೆಗಳಿಂದಾಗಿ ಅವಳ ಸ್ವಭಾವ ಕೋಪ ಮತ್ತು ದ್ವೇಷಕ್ಕೆ ತಿರುಗುತ್ತದೆ. ತಂದೆ ಹತ್ತಿರವಿಲ್ಲದ ಕಾರಣಕ್ಕಾಗಿ ಅವಳ ಬದುಕಿನಲ್ಲಿ ಹಲವು ಘಟನೆ, ಹೋರಾಟಗಳು ಸಂಭವಿಸುತ್ತವೆ. ಮುಂದೆ ಒಂದು ಸಂದರ್ಭದಲ್ಲಿ ಅವಳ ತಂದೆ ಮನೆಯವರನ್ನು ನೋಡಲು ಬಂದರೂ ಬೆಳ್ಳಿ ಕೋಪ ಹಾಗೂ ನಿರ್ಲಕ್ಷ್ಯ ತೋರಿಸುತ್ತಾಳೆ. ಮುಂದೆ ಈ ಕಥೆಗೆ ಬಂದ ಒಂದು ತಿರುವು ಮತ್ತು ಕೂಡಿಬಂದ ಕೆಲವು ಸಂದರ್ಭಗಳು ಹೊಸ ಕನಸೊಂದರ ಆವಿಷ್ಕಾರಕ್ಕೆ ನಾಂದಿಯಾಗುತ್ತದೆ.