ಬಂಟ್ವಾಳ: ಬಂಟ್ವಾಳ ತಾಲೂಕಿನ ಪುದುವಿನ ಮನೆಯೊ೦ದರಲ್ಲಿ ಕಪಾಟಿನ ಲಾಕರ್ ಮುರಿದು ನಗದು,ಚಿನ್ನ ಸೇರಿ 32 ಲಕ್ಷ ರೂ.ಮೌಲ್ಯದ ಸೊತ್ತು ಕಳವು ಮಾಡಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುದು ಗ್ರಾಮದ ನಿವಾಸಿ ಮೊಹಮ್ಮದ್ ಝಫರುಲ್ಲಾ ಎಂಬವರ ದೂರಿನಂತೆ, ಅವರು ಬಿಲ್ಡರ್ ವ್ಯವಹಾರ ಮಾಡಿಕೊಂಡಿದ್ದು ಅವರಲ್ಲಿ ಸುಮಾರು 7-8 ತಿಂಗಳಿಂದ ಕಟ್ಟಡ ಕಾಮಗಾರಿಯ ಸಹಾಯಕನಾಗಿ ಆಲಿ ಎಂಬಾತನು ಕೆಲಸ ಮಾಡಿಕೊಂಡಿದ್ದು ಅವರ ಜೊತೆ ವಿಶ್ವಾಸದಿಂದ ಇದ್ದ. ಅ.18ರಂದು ಮೊಹಮ್ಮದ್ ಝಫರುಲ್ಲಾ ಅವರ ತಂದೆ, ತಾಯಿ, ಅಕ್ಕ, ತಂಗಿ ತಮ್ಮನ ಮನೆಗೆ ಹೋಗುವರೆ ಮನೆಗೆ ಬೀಗ ಹಾಕಿ ಮನೆಯ ಕೀಯನ್ನು ಆಲಿಗೆ ನೀಡಿರುತ್ತಾರೆ. ಅ. 23ರಂದು ರಾತ್ರಿ ಮನೆಯವರು ಮನೆಗೆ ಹಿಂತಿರುಗಿ, ಮನೆಯ ಕೀಯನ್ನು ಪಡೆಯುವರೇ ಆಲಿಗೆ ಕರೆಮಾಡಿದಾಗ ಆತನ ಫೊನ್ ಸ್ವಿಚ್ ಆಫ್ ಆಗಿರುತ್ತದೆ. ಬಳಿಕ ಮನೆ ಹೊರಗಡೆಯಿಂದ ಕಿಟಕಿ ಮೂಲಕ ನೋಡಿದಾಗ ಬೆಡ್ ರೂಮಿನಲ್ಲಿರುವ ಕಪಾಟಿನ ಲಾಕರ್ ನ್ನು ಮುರಿದು ಅದರಲ್ಲಿ ಇದ್ದ ಸ್ವತ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದುಕೊಂಡಿರುವುದು ಕಂಡುಬಂದಿದ್ದು, ಮನೆಯನ್ನು ಪರಿಶೀಲಿಸಲಾಗಿ 27,50,000 ರೂಪಾಯಿ ನಗದು
ಅಂದಾಜು ರೂ 4,96,000/- ಮೌಲ್ಯದ ಚಿನ್ನಾಭರಣಗಳು ಕಳವಾಗಿರುವುದು ಕಂಡುಬಂದಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ