ಬೆಳ್ತ೦ಗಡಿ:ತೆಕ್ಕಾರು: ಭಗವಂತ ನಮ್ಮ ಅಂತರಾಳದಲ್ಲಿದ್ದಾರೆ ಎಂದು ವೇದ, ಉಪನಿಷತ್ತುಗಳು, ಗ್ರಂಥಗಳು ಹೇಳುತ್ತವೆ. ಇದನ್ನು ತಿಳಿಯುವುದು ಕಷ್ಟ ಇದನ್ನು ಇಂದು ತಿಳಿಯಪಡಿಸುವ ಕಾರ್ಯವನ್ನು ಶ್ರದ್ಧಾಕೇಂದ್ರಗಳು ಮಾಡುತ್ತಿವೆ. ಇದಕ್ಕಾಗಿ ಶ್ರದ್ಧಾಕೇಂದ್ರಗಳ ಅಭಿವೃದ್ಧಿಯನ್ನು ನಾವು ಮಾಡಬೇಕು ಎಂದು ನಮ್ಮ ಹಿರಿಯರು ನಮಗೆ ಹೇಳಿ ಕೊಟ್ಟಿದ್ದಾರೆ ಎ೦ದು ಕನ್ಯಾಡಿ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜೆ ಹೇಳಿದ್ದಾರೆ.
ತೆಕ್ಕಾರು ದೇವರಗುಡ್ಡೆ ಶ್ರೀ ಗೋಪಾಲಕೃಷ್ಣ ದೇವಳದ ಜೀರ್ಣೋದ್ಧಾರಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಆಶ್ರೀವಚನ ನೀಡಿದರು. ಭಗವಂತ ನಮ್ಮ ಹೃದಯದಲ್ಲಿ ಚೈತನ್ಯ ಸ್ವರೂಪಿಯಾಗಿ ಆತ್ಮ ಸ್ವರೂಪಿಯಾಗಿ ಇದ್ದಾನೆ. ಇದನ್ನು ತಿಳಿಯಲು ಜ್ಞಾನಯೋಗ, ತಪಸ್ಸು, ಅನುಷ್ಠಾನಗಳನ್ನು ಮಾಡಬೇಕು, ಅದು ತುಂಬಾ ಕಷ್ಟ, ಅದಕ್ಕಾಗಿ ಭಗವಂತನ ಹತ್ತಿರಕ್ಕೆ ಹೋಗುವ ಪ್ರಯತ್ನಗಳನ್ನು ಮಾಡಬೇಕು, ಇದಕ್ಕಾಗಿ ಇಂತಹ ದೇವಾಲಯಗಳ ನಿರ್ಮಾಣ ಅಗತ್ಯ, ಇದಕ್ಕೆ ಊರವರೆಲ್ಲ ಸಂಪೂರ್ಣ ಸಹಕಾರ ನೀಡಬೇಕು, ಸುಂದರ ದೇವಸ್ಥಾನ ನಿರ್ಮಾಣದ ಮೂಲಕ ಊರಿನ ಪ್ರಗತಿಗೂ ಭಕ್ತರ ಸಹಕಾರ ಅಗತ್ಯವಾಗಿದೆ ಎಂದವರು ಹೇಳಿದರು.
ಮಂಗಳೂರು ಕರಾವಳಿ ಕಾಲೇಜು ಸಮೂಹ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಹಾಗೂ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಗಣೇಶ್ ರಾವ್ ಅವರು ಶಿಲಾನ್ಯಾಸ ನೆರವೇರಿಸಿ ಅಂದಾಜು ರೂ.೨ ಕೋಟಿ ವೆಚ್ಚದಲ್ಲಿ ದೇವಸ್ಥಾನ ನಿರ್ಮಾಣವಾಗಲಿದೆ. ಈ ಗ್ರಾಮದಲ್ಲಿ ಹುಟ್ಟಿದ ಋಣ ಮತ್ತು ತಂದೆ ತಾಯಿಯ ಆಶೀರ್ವಾದದಿಂದ ಈ ದೇವಸ್ಥಾನದ ಅಭಿವೃದ್ಧಿ ಗೆ ಸಹಕಾರ ನೀಡುವುದಾಗಿ ತಿಳಿಸಿದರು.ಎಲ್ಲರೂ ತನು ಮನ ಧನದಿಂದ ಸಹಕರಿಸಿದರೆ. ಒಂದು ವರ್ಷದ ಒಳಗೆ ಈ ದೇವಸ್ಥಾನ ನಿರ್ಮಾಣವಾಗಲಿದೆ. ಈ ಎಲ್ಲ ಜೀರ್ಣೋದ್ದಾರ ಕಾರ್ಯಗಳು ಯಶಸ್ವಿಯಾಗಿ ನಡೆಯಲಿ ಎ೦ದರು.
.ಈ ಸಂದರ್ಭದಲ್ಲಿ ಟ್ರಸ್ಟ್ ಸಂಚಾಲಕ ಉದ್ಯಮಿ ಲಕ್ಷ್ಮಣ ಭಟ್ರಬೈಲು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ತುಕರಾಮ್ ನಾಯಕ್ ನಾಗರಕೋಡಿ, ಬೆಳ್ತಂಗಡಿ ರಾವ್ ಅಸೋಸಿಯೇಟ್ಸ್ನ ಧನಂಜಯ ರಾವ್ ಉಪಸ್ಥಿತರಿದ್ದರು.
ದೇವಿಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ವಿಶ್ವ ಹಿಂದೂ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್ ನೆರಿಯ ಸ್ವಾಗತಿಸಿದರು. ಬಾರ್ಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಪ್ರವೀಣ್ ರೈ ವಂದಿಸಿದರು.