ಮಂಗಳೂರು: ಮಂಗಳೂರು ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಕೆಲವರು ಮಂಗಳಮುಖಿಯರ ವೇಷ ಧರಿಸಿ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಬಗ್ಗೆ ದೂರಿನ ಹಿನ್ನೆಲೆಯಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚಿಸಿದ್ದಾರೆ.
ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ(ಟ್ರಾನ್ಸ್‍ಜೆಂಡರ್) ಜಿಲ್ಲಾಮಟ್ಟದ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಭೆಯಲ್ಲಿ ಉಪಸ್ಥಿತರಿದ್ದ ಮಂಗಳಮುಖಿಯರ ಸಂಘಟನೆಗಳ ಪ್ರತಿನಿಧಿಗಳು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಲ್ಲಿ ಕುಟುಂಬ ಸಮೇತ ನೆಲೆಸಿರುವ ಕೆಲವು ವ್ಯಕ್ತಿಗಳು ಮಂಗಳೂರು ನಗರಕ್ಕೆ ಬಂದು ಮಂಗಳಮುಖಿಯರ ವೇಷ ಧರಿಸಿ, ಹಣಕ್ಕಾಗಿ ಸಾರ್ವಜನಿಕರನ್ನು ಪೀಡಿಸುವುದು ಸೇರಿದಂತೆ ಕೆಲವು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾರೆ. ಬೆಳಿಗ್ಗೆ ಹುಡುಗರ ಹಾಗೂ ರಾತ್ರಿ ಹುಡುಗಿಯರ ವೇಷ ಧರಿಸುತ್ತಾರೆ. ಇದರಿಂದ ನೈಜ ಮಂಗಳಮುಖಿಯರಿಗೆ ಸಮಸ್ಯೆಯಾಗುತ್ತಿದೆ. ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಈಗಾಗಲೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಮಂಗಳಮುಖಿಯರ ಸಂಘಟನೆಗಳ ಗುರುತಿನ ಚೀಟಿ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಮುಂದಿನ 2 ತಿಂಗಳೊಳಗೆ ಇದನ್ನು ಮಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇದರಿಂದ ನೈಜ ಮಂಗಳಮುಖಿಯರನ್ನು ಗುರುತಿಸಲು ಅನುಕೂಲವಾಗಲಿದೆ ಎಂದರು. ಇವರ ಬಗ್ಗೆ ಸಂವೇದನೆಯಿಂದ ಇರುವಂತೆ ಪೊಲೀಸರಿಗೆ ತಿಳಿಸಲಾಗುವುದು ಎಂದರು. ಮಂಗಳಮುಖಿಯರ ಆರೋಗ್ಯ ತಪಾಸಣೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ಅವರಿಗೆ ಮನೆ ನಿರ್ಮಾಣಕ್ಕೆ ಮಹಾನಗರಪಾಲಿಕೆಯ ಯೋಜನೆ ಮೂಲಕ ನೆರವು ನೀಡಲು ಹಾಗೂ ಪಡಿತರ ಚೀಟಿ ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಮಂಗಳಮುಖಿಯರಿಗೆ ಗುರುತಿನ ಚೀಟಿ ಕಾರ್ಡನ್ನು ವಿತರಿಸಿದರು.
ಕೌಟುಂಬಿಕ ದೌರ್ಜನ್ಯ ಕಾಯಿದೆ:
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಸಮಿತಿಗಳ ಪ್ರಗತಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು, ದಾಂಪತ್ಯ ಸಮಸ್ಯೆಗಳ ಸಂಬಂಧ ಕೌಟುಂಬಿಕ ದೌರ್ಜನ್ಯ ಕಾಯಿದೆಯಡಿ ದಾಖಲಾಗುವ ಪ್ರಕರಣಗಳನ್ನು ಕಾಲಮಿತಿಯಲ್ಲಿ ಇತ್ಯರ್ಥಗೊಳಿಸುವಂತೆ ಸೂಚಿಸಿದರು. ಆಯಾ ಸಿಡಿಪಿಓಗಳು, ಈ ಬಗ್ಗೆ ನಿರಂತರವಾಗಿ ದಂಪತಿಗಳೊಂದಿಗೆ ಸಮಾಲೋಚನೆ ನಡೆಸಿ, ಪರಿಹಾರವಾಗದಿದ್ದರೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಉಸ್ಮಾನ್ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2020ರಿಂದ 2023ರವರೆಗೆ 778 ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ಇಲಾಖೆಯಲ್ಲಿ ವರದಿಯಾಗಿದೆ ಎಂದರು. ಬಾಲ್ಯವಿವಾಹಕ್ಕೆ ಸಂಬಂಧಿಸಿದ 5 ಪ್ರಕರಣಗಳನ್ನು ಕಳೆದ ಒಂದು ವರ್ಷದಲ್ಲಿ ಪತ್ತೆ ಹಚ್ಚಿ ವಿವಾಹ ನಡೆಯುವ ಮುನ್ನವೇ ತಡೆಯಲಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶೆ ಶೋಭಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ ಮತ್ತಿತರರು ಇದ್ದರು.