ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಹಮ್ಮಿಕೊಂಡಿರುವ ‘ಬಲೆ ತುಳು ಸಾಹಿತ್ಯ ಓದುಗ’ ಅಭಿಯಾನದಲ್ಲಿ ಕೂಳೂರಿನ ಯೆನೆಪೋಯ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದರು .
ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ತುಳು ಸಾಹಿತಿ, ನಾಟಕಗಾರ ಪರಮಾನಂದ ಸಾಲ್ಯಾನ್ ಅವರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ತುಳು ಸಾಹಿತ್ಯದ ಬಗ್ಗೆ ಅಭಿರುಚಿ ಮೂಡಿಸಲು ‘ಅಕಾಡೆಮಿಡ್ ಒಂಜಿ ದಿನ’ ಅಭಿಯಾನ ಸೂಕ್ತವೆಂದು ಬಣ್ಣಿಸಿದರು. ತುಳು ಬದುಕಿನ ನಂಬಿಕೆಯ ಜೊತೆಗೆ ಜಿಜ್ಞಾಸೆಯನ್ನು ಸಮಚಿತ್ತದಿಂದ ಕಾಣುವ ಪ್ರಜ್ಞಾವಂತಿಕೆ ಓದಿನ ಮೂಲಕ ಮೂಡಲಿದೆ ಎಂದು ಪರಮಾನಂದ ಸಾಲ್ಯಾನ್ ಅವರು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಅಕಾಡೆಮಿಯ ತ್ರೈಮಾಸಿಕ ಪತ್ರಿಕೆ ‘ಮದಿಪು’ ಸಂಚಿಕೆಯನ್ನು ಹಿರಿಯ ಪತ್ರಕರ್ತ ಹಾಗೂ ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅವರು ಬಿಡುಗಡೆಗೊಳಿಸಿದರು. ಪ್ರತಿ ಸಂದರ್ಭದಲ್ಲಿಯೂ ಅಕಾಡೆಮಿಗಳು ಸರಕಾರದತ್ತ ನಿರೀಕ್ಷೆ ಮಾಡುವುದಕ್ಕಿಂತ ಸ್ವಯಂ ಸಂಪನ್ಮೂಲ ಕ್ರೂಢೀಕರಿಸಿ ಜನಸಹಭಾಗಿತ್ವದಲ್ಲಿ ಕಾರ್ಯಕ್ರಮ ರೂಪಿಸುವ ನಿಟ್ಟಿನ ದೃಷ್ಠೀಕೋನ ಅಗತ್ಯ ಎಂದು ಹರೀಶ್ ರೈ ಅಭಿಪ್ರಾಯಪಟ್ಟರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ನಾಗೇಶ್ ಕುಮಾರ್ ಉದ್ಯಾವರ, ರವಿರಾಜ್ ಸುವರ್ಣ ಮುಂಬಯಿ, ಬೂಬ ಪೂಜಾರಿ, ಯೆನೆಪೋಯ ಕಾಲೇಜಿನ ಶಿಕ್ಷಕರಾದ ನಿಯಾಝ್.ಪಿ , ಡಾ.ದಿನಕರ ಪಚ್ಚನಾಡಿ, ವಿದ್ಯಾರ್ಥಿನಿ ಶ್ರದ್ಧಾ ಶೆಟ್ಟಿ ಭಾಗವಹಿಸಿದ್ದರು .
ಅಕಾಡೆಮಿ ರಿಜಿಸ್ರ್ಟಾರ್ ಪೂರ್ಣಿಮಾ ಸ್ವಾಗತಿಸಿದರು. ಸದಸ್ಯೆ ಅಕ್ಷಯ ಆರ್.ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಸದಸ್ಯ ಬಾಬು ಕೊರಗ ಪಾಂಗಾಳ ವಂದಿಸಿದರು.
ಅಕಾಡೆಮಿಡ್ ಒಂಜಿ ದಿನ : ಬಲೆ ತುಳು ಓದುಗ ಕಾರ್ಯಕ್ರಮದಲ್ಲಿ 50 ವಿದ್ಯಾರ್ಥಿಗಳು ದಿನಪೂರ್ತಿ ಭಾಗವಹಿಸಿ ಸಂಜೆ ವೇಳೆಗೆ ತಾವು ಓದಿದ ಪುಸ್ತಕದ ಬಗ್ಗೆ ಅಭಿಪ್ರಾಯ ಹಂಚಿಕೊಂಡು ಅತಿಥಿಗಳೊಂದಿಗೆ ಸಂವಾದ ನಡೆಸಿದರು.