ಮಂಗಳೂರು: ಅಸಂಘಟಿತ ಕಾರ್ಮಿಕರಿಗೆ ಯುನಿವರ್ಸಲ್ ಕಾರ್ಡ್ ತರುವ ಚಿಂತನೆ ನಡೆಸಲಾಗಿದ್ದು, ಈ ಬಗ್ಗೆ ಹೊಸ ಕಾಯ್ದೆ ಜಾರಿಗೊಳಿಸುವ ನಿರ್ಧಾರ ಸರಕಾರದ ಮುಂದಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.
ಕಾರ್ಮಿಕ ಸಚಿವರಾಗಿ ಮೊದಲ ಬಾರಿಗೆ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನಕ್ಕೆ ಸೋಮವಾರ ಭೇಟಿ ನೀಡಿ ಕಾರ್ಯಕರ್ತರ ಜೊತೆ ಅವರು ಮಾತನಾಡಿದರು.
ಸ್ವಿಗ್ಗಿ, ಅಮೆಜಾನ್, ಫಿಪ್ ಕಾರ್ಟ್ ಸೇರಿದಂತೆ ಆನ್ ಲೈನ್ ವ್ಯವಸ್ಥೆಯಲ್ಲಿ ದುಡಿಯುತ್ತಿರುವ ರಾಜ್ಯದ 4 ಲಕ್ಷ ಕಾರ್ಮಿಕರಿಗೆ ವಿಶೇಷ ಕಾರ್ಯಕ್ರಮ ರೂಪಿಸಲು ರಾಹುಲ್ ಗಾಂಧಿ ಅವರು ಭಾರತ್ ಜೋಡೊ ಸಂದರ್ಭ ಸೂಚಿಸಿದ್ದು, ಅದರಂತೆ ಮುಖ್ಯಮಂತ್ರಿಯವರು ಹಣ ಬಿಡುಗಡೆ ಮಾಡಿದ್ದಾರೆ. ಇವರಿಗೆ ಎರಡು ತಿಂಗಳುಗಳಲ್ಲಿ ಕಾರ್ಡ್ ವಿತರಿಸಿ ಶೀಘ್ರದಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳನ್ನು ಪ್ರಾರಂಭಿಸುತ್ತೇವೆ. ವಾಣಿಜ್ಯ ಸಾರಿಗೆ ಇಲಾಖೆಯಲ್ಲಿ ಪರವಾನಗಿ ಹೊಂದಿವವರಿಗೆ, ಚಾಲಕರು, ಕ್ಲೀನರ್, ಮೆಕ್ಯಾನಿಕಲ್ ಕೆಲಸಗಾರರು ಸೇರಿದಂತೆ ಸುಮಾರು 50 ಲಕ್ಷ ಮಂದಿಗೆ ಸಾಮಾಜಿಕ ಭದ್ರತಾ ಯೋಜನೆಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಜನವರಿ-ಫೆಬ್ರವರಿ ಒಳಗಾಗಿ ಟ್ರಾನ್ಸ್ ಪೋರ್ಟ್ ಬೋರ್ಡ್ ರಚಿಸುತ್ತೇವೆ. ಹೆಚ್ಚು ಸೆಸ್ ಸಂಗ್ರಹವಾದರೆ ಟೈಲರ್, ನೇಕಾರರು, ಕೂಲಿ ಕಾರ್ಮಿಕರು ಸೇರಿದಂತೆ ಅಸಂಘಟಿತ ಕಾರ್ಮಿಕರಿಗೆ ಅನುಕೂಲಕರವಾಗಲಿದ್ದು, ಈ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ಸಂದರ್ಭ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಇಬ್ರಾಹೀಂ ಕೋಡಿಜಾಲ್, ಮಮತಾ ಗಟ್ಟಿ, ಲುಕ್ಮಾನ್ ಬಂಟ್ವಾಳ, ಲಾರೆನ್ಸ್ ಡಿಸೋಜ, ಬಿ.ಎಂ.ಅಬ್ಬಾಸ್ ಅಲಿ, ಮನೋರಾಜ್ ರಾಜೀವ, ಮೆರಿಲ್ ರೇಗೋ ಮತ್ತಿತರರು ಉಪಸ್ಥಿತರಿದ್ದರು.