ಮಂಗಳೂರು: ಪುರಾಣ ಪ್ರಸಿದ್ಧ ದೇವಸ್ಥಾನ ಉರ್ವ ಶ್ರೀ ಮಾರಿಯಮ್ಮ ಕ್ಷೇತ್ರದಲ್ಲಿ ಫೆ.11ರಿಂದ 15ರವರೆಗೆ ಬ್ರಹ್ಮಕಲಶೋತ್ಸವ ನಡೆಯಲಿದೆ ಎ೦ದು ಬ್ರಹ್ಮಕಲಶೋತ್ಸವ ಸಮಿತಿ ಗೌರವ ಅಧ್ಯಕ್ಷ ನಾಡೋಜ ಜಿ. ಶಂಕರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
“ಪುರಾಣ ಪ್ರಸಿದ್ಧ ದೇವಸ್ಥಾನಗಳಲ್ಲಿ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನ ಕೂಡಾ ಪ್ರಾಮುಖ್ಯತೆ ಪಡೆದಿರುತ್ತದೆ. ದ.ಕ. ಜಿಲ್ಲೆ ಮಾತ್ರವಲ್ಲದೇ ನಾಡಿನ ಸಮಸ್ತ ವರ್ಗದ ಭಕ್ತಾಭಿಮಾನಿಗಳು ಉರ್ವ ಶ್ರೀ ಮಾರಿಯಮ್ಮ ದೇವಿಯ ಕ್ಷೇತ್ರದ ಬಗ್ಗೆ ಅಪಾರ ಭಕ್ತಿ ಮತ್ತು ನಂಬಿಕೆಯನ್ನಿಟ್ಟು, ಶ್ರದ್ಧೆಯಿಂದ ಆರಾಧಿಸಿಕೊಂಡು ಬಂದಿದ್ದಾರೆ. ಕ್ಷೇತ್ರದಲ್ಲಿ ಫೆ.11ರಿಂದ 15ರವರೆಗೆ ಬ್ರಹ್ಮಕಲಶೋತ್ಸವವು ನಡೆಯಲಿದ್ದು ಈ ಸಂದರ್ಭ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಾದ್ಯಂತ ಪ್ರಚಾರ ರಥದ ಸಂಚಾರ, ಹೊರೆಕಾಣಿಕೆ ಮೆರವಣಿಗೆ, ಬೃಹತ್ ನೂತನ ಸಭಾಂಗಣ ಉದ್ಘಾಟನೆ ನಡೆಯಲಿದೆ” ಎಂದವರು ವಿವರಿಸಿದರು..
“ಫೆ.26ರಿಂದ ಕ್ಷೇತ್ರದಲ್ಲಿ ವರ್ಷಾವಧಿ ಮಹಾಪೂಜೆ, ಮಾರ್ಚ್ 2ರಂದು ಶ್ರೀ ಮಲರಾಯ ಪರಿವಾರ ದೈವಗಳ ನೇಮೋತ್ಸವ, ಧಾರ್ಮಿಕಸಭಾ ಕಲಾಪ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಾಮೂಹಿಕ ಅನ್ನಸಂತರ್ಪಣೆ ಕೂಡಾ ನೆರವೇರಲಿದೆ. ಈಗಾಗಲೇ ಪ್ರಚಾರ ರಥವು ಸಂಚಾರ ಆರಂಭಿಸಿದೆ ಎಂದರು.
ಬ್ರಹ್ಮಕಲಶೋತ್ಸವ ಸಲುವಾಗಿ ಹೊರೆಕಾಣಿಕೆ ಮೆರವಣಿಗೆಯು ಫೆ.9ರಂದು ಅಪರಾಹ್ನ ಗಂಟೆ 3ಕ್ಕೆ ನಗರದ ಕೇಂದ್ರ ಮೈದಾನ ಹಾಗೂ ಕೂಳೂರು ಸಮೀಪದ ಗೋಲ್ಡ್ ಪಿಂಚ್ ಮೈದಾನದಿಂದ ಏಕಕಾಲದಲ್ಲಿ ಹೊರಡಲಿದ್ದು ಎರಡೂ ಕಡೆಯ ಹೊರೆಕಾಣಿಕೆ ಮೆರವಣಿಗೆಯು ಲೇಡಿಹಿಲ್ ಬ್ರಹ್ಮಶ್ರೀ ನಾರಾಯಣಗುರು ವೃತ್ತದಲ್ಲಿ ಒಟ್ಟು ಸೇರಿ ಕ್ಷೇತ್ರಕ್ಕೆ ಆಗಮಿಸಲಿದೆ. ಫೆ.11ರಿಂದ ಬ್ರಹ್ಮಕಲಶೋತ್ಸವದ ವೈದಿಕ ವಿಧಿ-ವಿಧಾನಗಳು ಆರಂಭವಾಗಲಿದ್ದು, ಫೆ.13ರಂದು ದೇವರ ಪುನರ್ ಪ್ರತಿಷ್ಠೆ ನೆರವೇರುತ್ತದೆ. ಫೆ.15ರಂದು ಬ್ರಹ್ಮಕಲಶೋತ್ಸವವು ಸಂಪನ್ನವಾಗಲಿದೆ. ಫೆ.16ರಂದು ವರ್ಷಾವಧಿ ಮಹಾಪೂಜೆಗೆ ಪ್ರಸಾದ ಹಾರಿಸುವಿಕೆ, ಫೆ.23ರಂದು ಚಂಡಿಕಾಯಾಗ, ಫೆ.26 ಹಾಗೂ 27ರಂದು ವರ್ಷಾವಧಿ ಮಹಾಪೂಜೆ ನಡೆಯುತ್ತದೆ. ಮಾ.2ರಂದು ಕ್ಷೇತ್ರದ ಶ್ರೀ ಮಲರಾಯ ಪರಿವಾರ ದೈವಗಳ ನೇಮೋತ್ಸವ ನಡೆಯುವುದರೊಂದಿಗೆ ವರ್ಷಾವಧಿ ಉತ್ಸವ ಮುಕ್ತಾಯವಾಗಲಿದೆ. ಕ್ಷೇತ್ರದ ಮುಂಭಾಗದಲ್ಲಿ 6 ಕೋಟಿ ರೂ. ವೆಚ್ಚದಲ್ಲಿ ನೂತನ ಬೃಹತ್ ಸಭಾಂಗಣದ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದ್ದು ಫೆ.3ರಂದು ಬೆಳಿಗ್ಗೆ ಗಂಟೆ 10ಕ್ಕೆ ಲೋಕಾರ್ಪಣೆಗೊಳ್ಳಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್ ಕರ್ಕೇರ ಮಾಹಿತಿ ನೀಡಿದರು.
ಇದೇ ಸ೦ದಭ೯ದಲ್ಲಿ ಬ್ರಹ್ಮಕಲಶೋತ್ಸವ ಹಾಗೂ ವರ್ಷಾವಧಿ ಮಹಾಪೂಜೆಯ ಆಮ೦ತ್ರಣ ಪತ್ರಿಕೆಯನ್ನು ನಾಡೋಜ ಜಿ. ಶಂಕರ್ ಬಿಡುಗಡೆಗೊಳಿಸಿದರು.
ವೇದಿಕೆಯಲ್ಲಿ ಶಾಸಕ ಡಿ. ವೇದವ್ಯಾಸ ಕಾಮತ್, ಗೌರವ ಸಲಹೆಗಾರ ಜಯ ಸಿ. ಕೋಟ್ಯಾನ್, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಸಂಚಾಲಕ ಗೌತಮ್ ಸಾಲ್ಯಾನ್ ಕೋಡಿಕಲ್, ಪ್ರಧಾನ ಕಾರ್ಯದರ್ಶಿ ಜಗದೀಶ್ ಬಂಗೇರ ಬೋಳೂರು, ಉಪಾಧ್ಯಕ್ಷ ಕುಮಾರ್ ಮೆಂಡನ್ ಬೈಕಂಪಾಡಿ, ಕೋಶಾಧಿಕಾರಿ ವಸಂತ ಅಮೀನ್ ಬೈಕಂಪಾಡಿ, ಏಳು ಪಟ್ಣ ಮೊಗವೀರ ಸಂಯುಕ್ತ ಸಭಾ ಅಧ್ಯಕ್ಷ ಲೋಕೇಶ್ ಸುವರ್ಣ, ಆಡಳಿತ ಮೊಕ್ತೇಸರ ಲಕ್ಷ್ಮಣ ಅಮೀನ್ ಕೋಡಿಕಲ್, ಪ್ರಚಾರ ಸಮಿತಿಯ ಯಶವಂತ ಬೋಳೂರು, ಕ್ಷೇತ್ರದ ತ೦ತ್ರಿ ಸುಬ್ರಹ್ಮಣ್ಯ ತ೦ತ್ರಿ, ಪ್ರಧಾನ ಅರ್ಚಕ ಶಿವಾನಂದ ಕನ್ನಡ,ಮೊಗವೀರ ಮಹಿಳಾ ಸ೦ಘದ ಅಧ್ಯಕ್ಷೆ ಉಷಾರಾಣಿ ಮತ್ತಿತರರು ಉಪಸ್ಥಿತರಿದ್ದರು.