ಮಂಗಳೂರು,: ಭಾರತ ಚುನಾವಣಾ ಆಯೋಗವು ರಾಷ್ಟ್ರೀಯ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2024 ಕರಡು ಮತದಾರರ ಪಟ್ಟಿಯನ್ನು ಎಲ್ಲಾ ಮತಗಟ್ಟಿಗಳಲ್ಲಿ, ಮತದಾರರ ನೋಂದಾಣಾಧಿಕಾರಿ ಹಾಗೂ ಸಹಾಯಕ ಮತದಾರರ ನೋಂದಾಣಾಧಿಕಾರಿ ಕಚೇರಿಯಲ್ಲಿ ಅ.27ರಂದು ಪ್ರಕಟಿಸಿದೆ.
ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದೆ ಇದ್ದಲ್ಲಿ ಸೇರಿಸಲು ಅಥವಾ ಮೃತದಾರರನ್ನು ಮತದಾರರ ಪಟ್ಟಿಯಿಂದ ತೆಗೆಯಲು ಅವರ ಕುಟುಂಬದವರು ನಮೂನೆ 7ರ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ವೇಳಾಪಟ್ಟಿ ವಿವರ ಇಂತಿದೆ:
ಕರಡು ಮತದಾರರ ಪಟ್ಟಿಯ ಪ್ರಕಟಣೆ ದಿನಾಂಕ ಅಕ್ಟೋಬರ್ 27ರಂದು, ಹಕ್ಕು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸುವ ಅವಧಿ, ಅಕ್ಟೋಬರ್ 27ರಿಂದ ಡಿಸೆಂಬರ್ 9ರವರೆಗೆ, ವಿಶೇಷ ನೊಂದಣಿ ಅಭಿಯಾನ, ನವೆಂಬರ್ 18 ಮತ್ತು 19 ಹಾಗೂ ಡಿಸೆಂಬರ್ 2 ಮತ್ತು 3ರಂದು, ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ, ಡಿಸೆಂಬರ್ 26ರಂದು, ಡೇಟಾಬೇಸ್ ಮತ್ತು ಪೂರಕ ಮುದ್ರಣವನ್ನು ನವೀಕರಿಸುವುದು, 2024ರ ಜನವರಿ 1ರಂದು ಹಾಗೂ ಅಂತಿಮ ಮತದಾರರ ಪಟ್ಟಿಯ ಪ್ರಕಟಣೆ ದಿನಾಂಕ 2024 ಜನವರಿ 5 ಆಗಿರುತ್ತದೆ.
ಮತದಾರರ ಪಟ್ಟಿ ಸೇರ್ಪಡೆಗೆ ಅಗತ್ಯವಿರುವ ದಾಖಲೆಗಳು:
ವಯಸ್ಸಿನ ಬಗ್ಗೆ ದಾಖಲೆಗಳು: ಶಾಲಾ ಪ್ರಮಾಣ ಪತ್ರ, ಜನನ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಪಾಸ್ಪೋರ್ಟ್, ಎಸ್‍ಎಸ್‍ಎಲ್‍ಸಿ, ಪಿಯುಸಿ ಅಂಕಪಟ್ಟಿಗಳು, ಪಾನ್ ಕಾರ್ಡ್ ಹಾಗೂ ವೈದ್ಯಕೀಯ ಪ್ರಮಾಣ ಪತ್ರ.
ವಾಸ ಸ್ಥಳದ ಬಗ್ಗೆ ದಾಖಲೆಗಳು: ಪಡಿತರ ಚೀಟಿ, ಗ್ಯಾಸ್ ಸಿಲಿಂಡರ್ ಸ್ವೀಕೃತಿ ರಸೀದಿ, ವಿದ್ಯುತ್ ಬಿಲ್ ಪಾವತಿ, ಬ್ಯಾಂಕ್ ಪಾಸ್ ಬುಕ್ ಪ್ರತಿ, ಪಾಸ್ಪೋರ್ಟ್, ವಾಹನ ಚಾಲನಾ ಪರವಾನಿಗೆ ಪ್ರತಿ, ಬಾಡಿಗೆ ಕರಾರು ಪತ್ರ ಹಾಗೂ ಇನ್ನಿತರ ದಾಖಲೆಗಳು, ಒಂದು ಪಾಸ್ ಪೋರ್ಟ್ ಅಳತೆಯ ಭಾವಚಿತ್ರ.
ನಮೂನೆ-6ರಲ್ಲಿ 18 ವರ್ಷ ಪೂರೈಸಿದ ಹೊಸ ಮತದಾರರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಬಹುದು. ನಮೂನೆ-6ರಲ್ಲಿ ಅನಿವಾಸಿ ಭಾರತೀಯರು ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರ್ಪಡೆ ಮಾಡಬಹುದು. ನಮೂನೆ-7ರಲ್ಲಿ ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆದು ಹಾಕಬಹುದು. ನಮೂನೆ 8ರಲ್ಲಿ ಹೆಸರು, ತಂದೆ ಹೆಸರು, ಮನೆ ವಿಳಾಸ, ವಯಸ್ಸಿಗೆ ಹಾಗೂ ಭಾವಚಿತ್ರಕ್ಕೆ ಸಂಬಂಧಿಸಿದ ದೋಷಗಳಿದ್ದಲ್ಲಿ ಸರಿಪಡಿಸಿಕೊಳ್ಳಬಹುದು.
ಸಾರ್ವಜನಿಕರು ತಮ್ಮ ವ್ಯಾಪ್ತಿಯಲ್ಲಿರುವ ಕೇಂದ್ರಗಳಿಗೆ ಭೇಟಿ ನೀಡಿ ಮತದಾರರ ಪಟ್ಟಿಗಳಲ್ಲಿ ಹೆಸರು ನೋಂದಾಯಿಸುವ ಬಗ್ಗೆ ಮತ್ತು ತಿದ್ದುಪಡಿ ಬಗ್ಗೆ ಪರಿಶೀಲಿಸಿಕೊಳ್ಳಬಹುದು. ಮತದಾರರ ನೋಂದಾಣಾಧಿಕಾರಿ ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಬಹುದು ಅಥವಾ ತಮ್ಮ ವ್ಯಾಪ್ತಿಯ ಮತಗಟ್ಟೆ ಅಧಿಕಾರಿಗಳಲ್ಲಿ ಪರಿಶೀಲಿಸಬಹುದು
ಹೆಚ್ಚಿನ ಮಾಹಿತಿಗೆ ವೆಬ್ ಪೋರ್ಟಲ್ www.ceokarnataka.kar.nic.in ಅಥವಾ www.https://voters.eci.gov.in, www.VotersHelplineAppಸಂಪರ್ಕಿಸುವಂತೆ ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.