ವೇಣೂರು: ವೇಣೂರು ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭಿಷೇಕ ಮಹೋತ್ಸವ ಫೆ.22ರಿ೦ದ ಆರಂಭಗೊಂಡು ಮಾ.1ರ ವರೆಗೆ ಜರಗಲಿದೆ .
ಮಹಾಮಸ್ತಕಾಭಿಷೇಕದ ಈ 9 ದಿನಗಳಲ್ಲೂ ಸಂಜೆ ಧಾರ್ಮಿಕ ಸಭೆಗಳೊಂದಿಗೆ ಕಾರ್ಯಕ್ರಮ ಆರಂಭಗೊಂಡು ಸಭಾ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಮುಂದುವರಿಯುತ್ತವೆ. ಸಂಜೆ 5.30 ಕ್ಕೆ ಮಹಾಮಸ್ತಕಾಭಿಷೇಕ ಆರಂಭಗೊಳ್ಳುತ್ತದೆ. ಅಗೋದಕ ಮೆರವಣಿಗೆ, ಜಲ,ಕಷಾಯ,ಕಲ್ಕಚೂರ್ಣ, ಅರಶಿನ, ಶ್ರೀಗಂಧ, ಚಂದನ,ಅಷ್ಟಗಂಧ, ಹಾಲು,ಎಳನೀರು, ಕೇಸರಿ ದ್ರವ್ಯಗಳಿಂದ ಮಸ್ತಕಾಭಿಷೇಕ ನೆರವೇರಿ ಪುಪ್ಪವೃಷ್ಟಿ, ಮಹಾಮಂಗಳಾರತಿ, ಶಾಂತಿಮಂತ್ರದೊಂದಿಗೆ ಸಂಪನ್ನಗೊಳ್ಳಲಿದೆ. ಈ ಸಂದರ್ಭ ದಿಗಂಬರ ಯುಗಳ ಮುನಿಶ್ರೀಗಳಾದ 108 ಅಮೋಘಕೀರ್ತಿ ಮಹರಾಜ್ ಮತ್ತು 108 ಅಮರಕೀರ್ತಿ ಮಹರಾಜ್ ಭಾಗವಹಿಸಿ ಆಶೀರ್ವಚಿಸಲಿರುವರು. ಜೈನಪರಂಪರೆಯ ಎಲ್ಲಾ ಮಠಾಧೀಶರು ಹಾಗೂ ಜೈನ ಆರ್ಯಿಕೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು.ಈ ಸಂದರ್ಭದಲ್ಲಿ ಯಾತ್ರಿಕರ ಮನರಂಜನೆಗಾಗಿ ವಸ್ತುಪ್ರದರ್ಶನ ಮತ್ತು ಮನರಂಜನಾ ಕಾರ್ಯಕ್ರಮಗಳು ಇರಲಿವೆ ಎ೦ದು ಸ್ಥಾಪಕ ವಂಶೀಯ ಅರಸ ಹಾಗೂ ಮಹಾಮಸ್ತಕಾಭಿಷೇಕ ಮಹೋತ್ಸವ ಸಮಿತಿ ಕಾಯಾ೯ಧ್ಯಕ್ಷ ಡಾ|ಪದ್ಮಪ್ರಸಾದ ಅಜಿಲ ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಇಲ್ಲಿಯ ತೀರ್ಥಕ್ಷೇತ್ರ ಸಮಿತಿ ಆಶ್ರಯದಲ್ಲಿ ನಡೆಯುವ ಈ ಮಹಾಮಸ್ತಕಾಭಿಷೇಕ ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆ ಮತ್ತು ಮಾರ್ಗದರ್ಶನದಲ್ಲಿ ಮುನ್ನಡೆದಿದೆ. ಸ್ಥಾಪಕ ವಂಶೀಯ ಅರಸರಾದ ಡಾ|ಪದ್ಮಪ್ರಸಾದ ಅಜಿಲ, ಪ್ರಧಾನ ಕಾರ್ಯದರ್ಶಿಯಾಗಿ ವಿ.ಪ್ರವೀಣಕುಮಾರ ಇಂದ್ರ ಸಾರಥ್ಯ ನೀಡಿದ್ದು ಕಳೆದೆರಡು ಮಸ್ತಕಾಭಿಷೇಕಗಳಲ್ಲಿ ಸ್ವಯಂಸೇವೇಕರಾಗಿ ದುಡಿದು ಅನುಭವ ಗಳಿಸಿದ ನೂರಾರು ಜೈನ ಶ್ರಾವಕರು ಸಮಿತಿಯ ಈ ಮಹಾಕಾರ್ಯದಲ್ಲಿ ಕೈ ಜೋಡಿಸಿದ್ದು, ವಿವಿದ 30 ಕ್ಕೂ ಹೆಚ್ಚು ಉಪಸಮಿತಿಗಳಲ್ಲಿ ಸ್ವಯಂಸೇವಕರಾಗಿ ಶ್ರಮಿಸುತ್ತಿದ್ದಾರೆ.
ಮಹಾಮಸ್ತಕಾಭಿಷೇಕದ ಈ ಸಂದರ್ಭ ಬಹಳಷ್ಟು ಭಕ್ತಾದಿಗಳು, ವೀಕ್ಷಕರು ಆಗಮಿಸಲಿದ್ದು ಇಲ್ಲಿಯ ಮೂಲಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲಾಗಿದೆ .ಸರಕಾರದ ಅನುದಾನದ ನೆರವಿನಿಂದ ಕ್ಷೇತ್ರದ ಸುತ್ತಲಿನ ಸುತ್ತು ರಸ್ತೆಯನ್ನು ಡಾಮರೀಕರಣಗೊಳಿಸಲಾಗಿದೆ. ಶೌಚಾಲಯಗಳ ನಿರ್ಮಾಣವಾಗಿದೆ. ವಿಶೇಷ ಅನುದಾನದ ನೆರವಿನಿಂದ ಬೆಟ್ಟದ ಒಳಗಿನ ಅಂಗಣಕ್ಕೆ ಕಲ್ಲು ಹಾಸು ಮಾಡಲಾಗಿದೆ. ವಿದ್ಯುತ್ ವ್ಯವಸ್ಥೆಯನ್ನು ಉನ್ನತೀಕರಿಸಲಾಗಿದೆ. ಕುಡಿಯುವ ನೀರಿನ ಸರಬರಾಜು ಗಮನದಲ್ಲಿಟ್ಟು ಹೊಸ ಬೋರ್ ವೆಲ್ ಗಳನ್ನು ಕೊರೆಯಲಾಗಿದೆ. ತೀರ್ಥಕ್ಷೇತ್ರ ಸಮಿತಿ ತನ್ನ ಸ್ವಂತ ಸಂಪನ್ಮೂಲದಿಂದ ಬೆಟ್ಟದೊಳಗಿನ ಅಕ್ಕ,ಪಕ್ಕದ ಬಸದಿಗಳನ್ನು ಜೀರ್ಣೋದ್ಧಾರಗೊಳಿಸಿ ಪಂಚಕಲ್ಯಾಣ ವಿಧಿ ನೆರವೇರಿಸಿದೆ ಎ೦ದು ಡಾ|ಪದ್ಮಪ್ರಸಾದ ಅಜಿಲ ತಿಳಿಸಿದರು.
.