ಉಡುಪಿ: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ವಿಶ್ವ ಬಂಟರ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ತೆರೆದ ಮೈದಾನದಲ್ಲಿನ ಕನ್ಯಾನ ಸದಾಶಿವ ಶೆಟ್ಟಿ ವೇದಿಕೆಯಲ್ಲಿ ಆರಂಭಗೊಂಡಿತು.
ಕಾರ್ಯಕ್ರಮಕ್ಕೆ ಭೇಟಿ ಕೊಟ್ಟು ಮಾತಾಡಿದ ಉಡುಪಿ ಸಂಸದೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು, “ಉಡುಪಿಯ ಜನರಿಗೆ ಸಾಂಸ್ಕೃತಿಕ ವೈಭವವನ್ನು ಕಣ್ತುಂಬಿಕೊಳ್ಳುವ ಅವಕಾಶವನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟ ಒದಗಿಸಿಕೊಟ್ಟಿದೆ. ಯಾವುದೇ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯುತ್ತದೆ ಅಂತಂದ್ರೆ ಅದು ಬಂಟರ ಸಮುದಾಯದ ನೇತೃತ್ವದಲ್ಲಿ ನಡೆಯುತ್ತದೆ ಎಂದರ್ಥ. ಬಂಟ ಸಮುದಾಯದ ಅನೇಕ ಕಲಾವಿದರು ಇಂದು ಸಿನಿಮಾ ರಂಗದಲ್ಲಿದ್ದಾರೆ. ಆರ್.ಎನ್. ಶೆಟ್ಟಿ, ಮೋಹನ್ ಆಳ್ವ ಅವರಂತಹ ಶಿಕ್ಷಣ ತಜ್ಞರು ಬಂಟ ಸಮುದಾಯದವರು. ದೇವಿಪ್ರಸಾದ್ ಶೆಟ್ಟಿ ಅವರಂತಹ ವೈದ್ಯರು ನಾರಾಯಣ ಹೃದಯಾಲಯದಲ್ಲಿದ್ದಾರೆ. ಮುಂಬೈ, ಪುಣೆಯಲ್ಲಿ ಅಸಂಖ್ಯ ಹೋಟೆಲ್ ಉದ್ಯಮಿಗಳಿದ್ದಾರೆ. ಇಲ್ಲಿನ ಸತ್ಕಾರವನ್ನು ಕಂಡು ಖುಷಿಯಾಗಿದೆ. ಸುಶಿಕ್ಷಿತ, ಸುಸಂಸ್ಕೃತ ಸಮಾಜ ಬಂಟ ಸಮುದಾಯವಾಗಿದೆ. ಬಂಟ ಸಮುದಾಯದವರು ಎಲ್ಲೇ ಹೋದರೂ ಕನ್ನಡ ಮಾತಾಡದೆ ಇರಬಹುದು ಆದರೆ ತುಳು ಭಾಷೆ ಮಾತಾಡದೆ ಇರಲಿಕ್ಕಿಲ್ಲ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅವರನ್ನು ವೇದಿಕೆಯಲ್ಲಿ ಅಭಿನಂದಿಸಲಾಯಿತು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಜೊತೆ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ, ಕೋಶಾಧಿಕಾರಿ ಉಳ್ತೂರು ಮೋಹನ್ ದಾಸ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿತೇಶ್ ಶೆಟ್ಟಿ ಎಕ್ಕಾರ್ ಕಾರ್ಯಕ್ರಮ ನಿರ್ವಹಿಸಿದರು. ಸಾಂಸ್ಕತಿಕ ಕಲಾ ಬೈಭವದ ತೀರ್ಪುಗಾರರಾಗಿ ಕಾಂತಾರ ಖ್ಯಾತಿಯ ನಟಿ ಮಾನಸಿ ಸುಧೀರ್, ನೃತ್ಯ ಕಲಾವಿದೆ ಪ್ರಥಮ ಪ್ರಸಾದ್ ರಾವ್, ಧಾರವಾಹಿ ನಟ ದಿಲೀಪ್ ಶೆಟ್ಟಿ ಹಾಜರಿದ್ದರು.