24 C
Karnataka
Friday, November 15, 2024

ಸುಸಜ್ಜಿತ ಸಮುದಾಯ ವಾಚನಾಲಯ ನಿರ್ಮಿಸಲು ಮಾಸ್ಟರ್ ಪ್ಲಾನ್: ಸ್ಪೀಕರ್ ಯು.ಟಿ.ಖಾದರ್

ಮಂಗಳೂರು : ವೆನ್ಲಾಕ್ ಜಿಲ್ಲಾಸ್ಪತ್ರೆ ಆವರಣದಲ್ಲಿ ಸುಸಜ್ಜಿತ ಸಮುದಾಯ ವಾಚನಾಲಯ ನಿರ್ಮಿಸುವ ನಿಟ್ಟಿನಲ್ಲಿ ಮಾಸ್ಟರ್ ಪ್ಲಾನ್ ಸಿದ್ದಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ವಿಧಾನ ಸಭೆಯ ಸ್ಪೀಕರ್ ಯು.ಟಿ.ಖಾದರ್ ತಿಳಿಸಿದರು.
ನಗರದ ವೆನ್ಲಾಕ್ ಜಿಲ್ಲಾಸ್ಪತ್ರೆಯ ಸಮುದಾಯ ವಾಚನಾಲಯದ ಎರಡನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ‘ ವೆನ್ಲಾಕ್ ಆಸ್ಪತ್ರೆಯಲ್ಲಿ ರೆಡ್‌ಕ್ರಾಸ್ ಸಂಸ್ಥೆ, ಜಿಲ್ಲಾ ಪತ್ರಕರ್ತರ ಸಂಘ ಸಹಿತ ವಿವಿಧ ಸಂಘ ಸಂಸ್ಥೆಗಳು ಮುತುವರ್ಜಿ ವಹಿಸಿ ಸಮುದಾಯ ವಾಚನಾಲಯ ಸೇವೆ ಒದಗಿಸಿರುವುದು ರಾಜ್ಯಕ್ಕೆ ಮಾದರಿಯಾಗಿದೆ ಎಂದರು.
ಆರೋಗ್ಯ ಸಚಿವನಾಗಿದ್ದ ಸಂದರ್ಭದಲ್ಲಿ ವೆನ್ಲಾಕ್ ಆಸ್ಪತ್ರೆಯ ಕೊರತೆ ನಿವಾರಣೆಗೆ ಸಾಕಷ್ಟು ಶ್ರಮಿಸಿದ್ದೇನೆ. ಖಾಸಗಿ ಮೆಡಿಕಲ್ ಕಾಲೇಜ್ ಆಸ್ಪತ್ರೆಗಳಿಗೆ ಸಮನಾದ ಸೇವೆಯನ್ನು ಇಂದು ವೆನ್ಲಾಕ್ ಆಸ್ಪತ್ರೆ ನೀಡುತ್ತಿದೆ. ನೆರೆಯ 7-8 ಜಿಲ್ಲೆಗಳ ರೋಗಿಗಳು ರೋಗಿಗಳು ಚಿಕಿತ್ಸೆಗೆ ವೆನ್ಲಾಕ್ ಆಸ್ಪತ್ರೆಗೆ ಬರುತ್ತಿದ್ದಾರೆ. ರೋಗಿಗಳು ಮತ್ತು ಅವರ ಸಹಾಯಕರಿಗೆ ವಾಚನಾಲಯ ಆರಂಭಿಸಿರುವುದು ಶ್ಲಾಘನೀಯ. ಈ ಕೇಂದ್ರವನ್ನು
ಇನ್ನಷ್ಟು ಸುವ್ಯವಸ್ಥಿತಗೊಳಿಸಲು ಮಾಸ್ಟರ್ ಪ್ಲಾನ್ ಸಿದ್ದ ಪಡಿಸುವ ಅಗತ್ಯ ಇದೆ ಎಂದು ಯು.ಟಿ.ಖಾದರ್ ಹೇಳಿದರು.
ವೆನ್ಲಾಕ್ ಲಯನ್ಸ್ ಲಿಂಬ್ ಸೆಂಟರ್‌ನ ಸಂಚಾಲಕ ಡಾ.ಕೆ.ಆರ್.ಕಾಮತ್ ಮಾತನಾಡಿ ‘ವಿವಿಧ ಕಾಲೇಜುಗಳ ಯುವ ರೆಡ್‌ಕ್ರಾಸ್ ವಿದ್ಯಾರ್ಥಿ ಗಳಿಗೆ ವೆನ್ಲಾಕ್‌ನ ಸಮುದಾಯ ಸೇವಾ ಕೇಂದ್ರದ ಮೂಲಕ ಪ್ರತಿ ವಾರ ತರಬೇತಿ ನೀಡಲಾಗುತ್ತಿದೆ. ಪ್ರತಿ ತಿಂಗಳು ಸುಮಾರು 6ಸಾವಿರ ಮಂದಿ ವಾಚನಾಲಯ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ವೆನ್ಲಾಕ್ ಜಿಲ್ಲಾಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ. ಜೆಸಿಂತಾ ಡಿಸೋಜ,ಆರ್‌ಎಂಒ ಡಾ.ಸುಧಾಕರ್, ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಅಧ್ಯಕ್ಷ ಸಿಎ ಶಾಂತಾರಾಮ ಶೆಟ್ಟಿ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ್ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಖಾದರ್ ಷಾ,ವೆನ್ಲಾಕ್ ಲಯನ್ಸ್ ಲಿಂಬ್ ಸೆಂಟರ್‌ನ ವ್ಯವಸ್ಥಾಪಕ ಸುರೇಶ್ ಶೆಟ್ಟಿ, ರೆಡ್‌ಕ್ರಾಸ್ ಸೊಸೈಟಿಯ ಕಾರ್ಯದರ್ಶಿ ಕಿಶೋರ್‌ಚಂದ್ರ ಹೆಗ್ಡೆ, ಸಲಹೆಗಾರರಾದ ಪ್ರಭಾಕರ ಶರ್ಮ, ರವೀಂದ್ರನಾಥ ಉಚ್ಚಿಲ್, ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಮಹಮ್ಮದ್ ಆರಿಫ್ ಪಡುಬಿದ್ರೆ,ರಾಜೇಶ್ ದಡ್ಡಂಗಡಿ ಉಪಸ್ಥಿತರಿದ್ದರು. ಇದೇ ಸಂದರ್ಭ ಯು.ಟಿ.ಖಾದರ್ ಅವರು ವಾಚನಾಲಯಕ್ಕೆ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿ, ಕೋಶಾಧಿಕಾರಿ ಪುಷ್ಪರಾಜ್.ಬಿ.ಎನ್. ವಂದಿಸಿದರು. ಉಪಾಧ್ಯಕ್ಷ ಭಾಸ್ಕರ್ ರೈ ಕಟ್ಟ ಕಾರ್ಯಕ್ರಮ ನಿರೂಪಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles