ಮಂಗಳೂರು : ಭಾರತೀಯ ಸೇನೆ ಇಂದು ಸಶಕ್ತವಾಗಿದ್ದು ಯಾವುದೇ ಶತ್ರುರಾಷ್ಟ್ರವನ್ನು ಬಗ್ಗು ಬಡಿಯಲು ಸಮರ್ಥವಾಗಿದೆ. ಸೇನಾ ಸಾಧನಗಳ ತಯಾರಿಯ ಸಂಶೋಧನೆ , ಅಭಿವೃದ್ಧಿ ಹಾಗೂ ಉತ್ಪಾದನೆಯಲ್ಲಿ ದೇಶ ಶೇ.75ರಷ್ಟು ಸ್ವಾವಲಂಬಿಯಾಗಿದೆ ಎಂದು ಮೇಜರ್ ಜನರಲ್ ಸತೀಶ್ ಭಂಡಾರಿ ಹೇಳಿದರು.
ನಗರದ ಹೋಟೆಲ್ ಮೋತಿ ಮಹಲ್ ಸಭಾಂಗಣದಲ್ಲಿ ಶನಿವಾರ ನಡೆದ ವಿಶ್ವ ಬಂಟ ಪ್ರತಿಷ್ಠಾನ ಟ್ರಸ್ಟ್‌ನ 28ನೇ ವಾರ್ಷಿಕ ಮಹಾಸಭೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎಮಿನೆಂಟ್ ಬಂಟ್ ಪರ್ಸನಾಲಿಟಿ ಅವಾರ್ಡ್ ಸ್ವೀಕರಿಸಿ ಮಾತನಾಡಿದ ಅವರು ‘ಸೇನೆಯಲ್ಲಿ ಕರ್ತವ್ಯ ನಿರ್ವಹಿಸುವಾಗ ಸಹಜವಾಗಿಯೇ ಕಠಿಣ ಸವಾಲುಗಳನ್ನು ಎದುರಿಸಬೇಕಾಗುತ್ತಿದೆ. ಆದರೆ ದೇಶಕ್ಕಾಗಿ ಸೇವೆ ಸಲ್ಲಿಸಿದ ಅನುಭವ ಸದಾ ಸ್ಮರಣೀಯ ಎಂದರು.
ಮಂಗಳೂರು ವಿ.ವಿ.ಯಿಂದ ಗೌರವ ಡಾಕ್ಟರೇಟ್ ಪುರಸ್ಕೃತರಾದ ಉದ್ಯಮಿ ಡಾ.ಕೆ.ಪ್ರಕಾಶ್ ಶೆಟ್ಟಿ ಅವರನ್ನು ಪ್ರತಿಷ್ಠಾನದವತಿಯಿಂದ ಸನ್ಮಾನಿಸಲಾಯಿತು. ಬಂಟ ಸಮಾಜದ ಹಿರಿಯರ ಸಾಧನೆಯಿಂದ ಪ್ರೇರಿತನಾಗಿ ನಾನು ಕೂಡಾ ಜೀವನದಲ್ಲಿ ಏನಾದರೂ ಸಾಧಿಸಬೇಕೆಂದು ಬಯಸಿದ್ದೆ. ಹಾದಿ ಕಠಿಣವಾಗಿತ್ತು. ಆದರೆ ಇಂದು ಕನಸು ನನಸಾಗಿದೆ. ಕೇವಲ ಅದೃಷ್ಟವನ್ನು ನಂಬಿದರೆ ಸಾಲದು ಅದನ್ನು ಸಾಧನೆಯಾಗಿ ಪರಿವರ್ತಿಸಬೇಕು ಎಂದು ಸನ್ಮಾನ ಸ್ವೀಕರಿಸಿದ ಡಾ.ಕೆ.ಪ್ರಕಾಶ್ ಶೆಟ್ಟಿ ಹೇಳಿದರು.
ಯಕ್ಷಗಾನ ರಂಗದಲ್ಲಿ 55 ವರ್ಷ ಮಿಕ್ಕಿ ಸೇವೆ ಸಲ್ಲಿಸಿದ ಹಳ್ಳಾಡಿ ಜಯರಾಮ ಶೆಟ್ಟಿ ಅವರಿಗೆ ದಿ.ಡಿ.ಕೆ.ಚೌಟ ದತ್ತಿನಿಧಿಯಿಂದ 25 ಸಾವಿರ ರೂ.ನಗದು, ಫಲಕ ನೀಡಿ ಗೌರವಿಸಲಾಯಿತು. ಕೃಷಿ ಕ್ಷೇತ್ರದ ಸಾಧನೆಗಾಗಿ ಪುಷ್ಪ ಶೆಟ್ಟಿ ಅವರಿಗೆ ದಿ.ಎಣ್ಮಕಜೆ ಕಲಾವತಿ ಶೆಟ್ಟಿ ದತ್ತಿನಿಧಿ ಪ್ರಶಸ್ತಿ , ಸಿಎ ಮನೀಶ್ ಶೆಟ್ಟಿ ಅವರಿಗೆ ಸಿಎ ವೈ.ಆರ್.ಶೆಟ್ಟಿ ದತ್ತಿನಿಧಿ ಪ್ರಶಸ್ತಿ , ಸಿಎ ರೋಶನ್ ಶೆಟ್ಟಿ ಅವರಿಗೆ ಸಿಎ ಗೋಪಾಲ್.ಬಿ.ಶೆಟ್ಟಿ ದತ್ತಿನಿಧಿ ಪ್ರಶಸ್ತಿ ವಿತರಿಸಲಾಯಿತು.
ವಿಶ್ವ ಬಂಟ ಪ್ರತಿಷ್ಠಾನ ಟ್ರಸ್ಟ್ ಅಧ್ಯಕ್ಷ ಡಾ.ಎ.ಜೆ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಸಿಎ ಸುಧೀರ್ ಕುಮಾರ್ ಶೆಟ್ಟಿ , ಉಪಾಧ್ಯಕ್ಷರಾದ ಕುಶಲ್.ಎಸ್.ಹೆಗ್ಡೆ, ಕೆ.ಎಸ್.ಹೆಗ್ಡೆ, ಯೋಜನಾ ನಿರ್ದೇಶಕ ಡಾ.ಬಿ. ಸಂಜೀವ ರೈ, ಖಜಾಂಚಿ ಸಿಎ ಸುದೇಶ್ ಕುಮಾರ್ ರೈ , ಪ್ರೊ.ಜಿ.ಆರ್.ರೈ, ಪಳ್ಳಿ ಕಿಶನ್ ಹೆಗ್ಡೆ ಉಪಸ್ಥಿತರಿದ್ದರು. ಭಾಸ್ಕರ .ರೈ.ಕುಕ್ಕುವಳ್ಳಿ, ಜ್ಯೋತಿ ಪ್ರಸಾದ್ ಹೆಗ್ಡೆ, ಜೈರಾಜ್.ಬಿ.ರೈ ಮತ್ತು ಆರ್ತಿ ಶೆಟ್ಟಿ ಸನ್ಮಾನಿತರನ್ನು ಪರಿಚಯಿಸಿದರು. ಕಳ್ಳಿಗೆ ತಾರನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.