ಮಂಗಳೂರು ಗ್ರಾಮೀಣ ಸಮುದಾಯದಲ್ಲಿ ಸುರಕ್ಷಿತ, ನೈರ್ಮಲ್ಯ, ಶುಚಿತ್ವ ಕುರಿತು ಜಾಗೃತಿ ಮೂಡಿಸಿ ಶೌಚಾಲಯಗಳನ್ನು ನಿರಂತರವಾಗಿ ಬಳಸುವಂತೆ ಪ್ರೇರೇಪಿಸುವ ಉದ್ದೇಶದೊಂದಿಗೆ ನವೆಂಬರ್ 19ರಿಂದ ಡಿಸೆಂಬರ್ 10ರವರೆಗೆ ವಿಶ್ವ ಶೌಚಾಲಯ ದಿನದ ಅಂಗವಾಗಿ ವಿಶೇಷ ಆಂದೋಲನ ನಡೆಸಲಾಗುತ್ತಿದೆ.
ಬಯಲು ಬಹಿರ್ದೆಸೆ ಮುಕ್ತ ಸ್ಥಿತಿಯ ಸ್ಥಾನಮಾನವನ್ನು ಉಳಿಸಿಕೊಳ್ಳುವಲ್ಲಿ ಈ ಕಾರ್ಯಕ್ರಮ ಪ್ರಮುಖ ಪಾತ್ರ ವಹಿಸುತ್ತದೆ. ವಿಶ್ವ ಶೌಚಾಲಯ ದಿನಾಚರಣೆಯ ಪ್ರಯುಕ್ತ ತಾಲೂಕು ಮತ್ತು ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ಜಾಗೃತಿ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ
ಗ್ರಾಮ ಪಂಚಾಯಿತಿ ಹಂತದಲ್ಲಿ ಸ್ವಚ್ಛ, ಸುಂದರ ವೈಯಕ್ತಿಕ ಗೃಹ ಶೌಚಾಲಯ (ಉತ್ತಮ ಶೌಚಾಲಯ) ಸ್ಪರ್ಧೆಯನ್ನು ಆಯೋಜಿಸುವುದು. ತಾಲೂಕು ಮಟ್ಟದಲ್ಲಿ ಉತ್ತಮ ಸಮುದಾಯ ಶೌಚಾಲಯ ಸ್ಪರ್ಧೆಗಳನ್ನು ಆಯೋಜಿಸುವುದು. ಜಿಲ್ಲೆ ಮತ್ತು ತಾಲೂಕು ಹಂತದಲ್ಲಿ ವಿಜೇತರಿಗೆ ಪುರಸ್ಕಾರಗಳನ್ನು ನೀಡಿ ಗೌರವಿಸುವುದು. ನೈರ್ಮಲ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಸ್ವಚ್ಛತಾ ಕಾರ್ಮಿಕರು, ಸ್ವಚ್ಛತಾಗಾರರನ್ನು ಗುರುತಿಸಿ ಅವರಿಗೆ ಸೂಕ್ತ ಗೌರವಗಳನ್ನು ನೀಡಲು ಘನತೆ ಶಿಬಿರಗಳು ಹಾಗೂ ವಿವಿಧ ಯೋಜನೆಗಳ ಅಡಿ ದೊರೆಯುವ ಸೌಲಭ್ಯಗಳನ್ನು ಒದಗಿಸಲು ನೋಂದಾಯಿಸುವುದು ಹಾಗೂ ಮಂಜುನಾಥ ಆದೇಶಗಳನ್ನು ನೀಡಲು ಈ ಸಂದರ್ಭದಲ್ಲಿ ಕ್ರಮ ವಹಿಸಬೇಕು.
ಗ್ರಾಮ ಪಂಚಾಯಿತಿ ಮತ್ತು ಗ್ರಾಮ ಮಟ್ಟದಲ್ಲಿ ಶೌಚಾಲಯ ಬಳಕೆ ಮತ್ತು ಉತ್ತಮ ನೈರ್ಮಲ್ಯ ಅಭ್ಯಾಸಗಳನ್ನು ರೂಢಿಸುವ ನಿಟ್ಟಿನಲ್ಲಿ ಜನರ ನಡವಳಿಕೆ ಬದಲಾವಣೆ ಮಾಡಲು ವಿಶೇಷ ಆಂದೋಲನಗಳಿಗೆ ಚಾಲನೆ ನೀಡುವುದು. ಅತ್ಯುತ್ತಮ ವೈಯಕ್ತಿಕ ಗೃಹ ಶೌಚಾಲಯ ಸ್ಪರ್ಧೆ – ಅತ್ಯುತ್ತಮವಾಗಿ ನಿರ್ವಹಣೆ ಮಾಡಿ ನಿರಂತರವಾಗಿ ಉಪಯೋಗಿಸುತ್ತಿರುವ ಹಾಗೂ ಉತ್ತಮ ರೀತಿಯಲ್ಲಿ ಬಣ್ಣ ಬಳಿದಿರುವ ಶೌಚಾಲಯಗಳನ್ನು ಗುರುತಿಸಿ ಸಂಬಂಧಿಸಿದ ಫಲಾನುಭವಿಗಳಿಗೆ ಬಹುಮಾನ ನೀಡಿ ಗೌರವಿಸುವುದು. ಈ ಚಟುವಟಿಕೆಯು ಇತರರು ಶೌಚಾಲಯ ಬಳಸುವಂತೆ ಪ್ರೇರೇಪಿಸಲು ಸಹಕಾರಿಯಾಗುವ ನಿಟ್ಟಿನಲ್ಲಿ ಆಯೋಜಿಸಬೇಕು.
ಸಮುದಾಯ ಶೌಚಾಲಯಗಳ ಸೌಂದರೀಕರಣ ಸ್ಪರ್ಧೆ, ಸಮುದಾಯ ಶೌಚಾಲಯ ಬಳಕೆ ಮತ್ತು ಶುಚಿತ್ವ ಹಾಗೂ ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಲು ಸಮುದಾಯದಲ್ಲಿ ಉತ್ತೇಜನ ನೀಡಲು ಈ ಆಂದೋಲನವನ್ನು ಆಯೋಜಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.