ಮಂಗಳೂರು : ಮಹಾಯುದ್ಧಗಳಿಂದ ಜಗತ್ತು ಸಾಕಷ್ಟು ಸಾವು ನೋವುಗಳನ್ನು ಕಂಡಿದ್ದು, ಯುದ್ಧದಿಂದ ಶಾಂತಿ ಸ್ಥಾಪನೆ ಸಾಧ್ಯವಿಲ್ಲ ಎನ್ನುವ ಅರಿವು ಮೂಡಿದೆ. ಮಾನವೀಯ ಸೇವೆಯಿಂದ ಮಾತ್ರ ಜಾಗತಿಕ ಮಟ್ಟದಲ್ಲಿ ಶಾಂತಿಯ ಸಂದೇಶ ಪಸರಿಸಬಹುದು .ಇಂತಹ ಉದಾತ್ತ ಸೇವೆ ನೀಡುತ್ತಿರುವ ರೆಡ್‌ಕ್ರಾಸ್ ಸಂಸ್ಥೆ ಮನುಷ್ಯರ ಹೃದಯಗಳನ್ನು ಬೆಸೆಯುತ್ತಿದೆ ಎಂದು ಮಂಗಳೂರು ವಿ.ವಿ.ಯ ಕುಲಪತಿ ಪ್ರೊ.ಪಿ.ಎಲ್.ಧರ್ಮ ಹೇಳಿದರು.
ಯೂತ್ ರೆಡ್‌ಕ್ರಾಸ್ ಮಂಗಳೂರು ವಿ.ವಿ. ಇದರ ವತಿಯಿಂದ ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಸಹಯೋಗದಲ್ಲಿ ನಗರದ ವಿ.ವಿ.ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಮಂಗಳವಾರ ನಡೆದ ಯೂತ್ ರೆಡ್‌ಕ್ರಾಸ್ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಯೋಜನಾಧಿಕಾರಿಗಳಿಗೆ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತರಾಮ ಶೆಟ್ಟಿ ಮಾತನಾಡಿ ‘ ವಿದ್ಯಾರ್ಥಿಗಳು ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಯೂತ್ ರೆಡ್‌ಕ್ರಾಸ್ ಪ್ರೇರಣೆ ನೀಡುತ್ತದೆ. ಮಾದಕ ವಸ್ತುಗಳ ಪಿಡುಗು ಯುವ ಸಮುದಾಯಕ್ಕೆ ಮಾರಕವಾಗಿದ್ದು, ಇದರ ವಿರುದ್ಧ ಯೂತ್ ರೆಡ್‌ಕ್ರಾಸ್‌ನಿಂದ ಜಾಗೃತಿ ಮೂಡಿಸುವ ಕಾರ್ಯ ಹಮ್ಮಿಕೊಳ್ಳುವುದು ಅವಶ್ಯ ಎಂದರು.
ವಿ.ವಿ.ಕಾಲೇಜಿನ ಪ್ರಾಂಶುಪಾಲ ಗಣಪತಿ ಗೌಡ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿ.ವಿ.ಯ ನಾಮ ನಿರ್ದೇಶಿತ ಸದಸ್ಯ ಬಿ.ನಿತ್ಯಾನಂದ ಶೆಟ್ಟಿ, ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಕಾರ್ಯದರ್ಶಿ ಕಿಶೋರ್‌ಚಂದ್ರ ಹೆಗ್ಡೆ, ನಿರ್ದೇಶಕ ಪಿ.ಬಿ.ಹರೀಶ್ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಯೂತ್ ರೆಡ್‌ಕ್ರಾಸ್ ಘಟಕ ಹಾಗೂ ಯೋಜನಾಧಿಕಾರಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ರಾಮಕೃಷ್ಣ ಕಾಲೇಜಿನ ಯೂತ್ ರೆಡ್‌ಕ್ರಾಸ್ ಯೋಜನಾಧಿಕಾರಿ ನಟೇಶ್ ಆಳ್ವ ಪ್ರಶಸ್ತಿ ವಿಜೇತರ ವಿವರ ನೀಡಿದರು. ಮಂಗಳೂರು ವಿ.ವಿ.ಯೂತ್ ರೆಡ್‌ಕ್ರಾಸ್‌ನ ನೋಡಲ್ ಅಧಿಕಾರಿ ಡಾ.ಗಾಯತ್ರಿ.ಎನ್. ಸ್ವಾಗತಿಸಿ, ನಿರ್ದೇಶಕ ಸಚೇತ್ ಸುವರ್ಣ ವಂದಿಸಿದರು. ಪದವು ಕಾಲೇಜಿನ ಉಪ ಪ್ರಾಂಶುಪಾಲ ರೋಶನ್ ಸಾಂತುಮಯರ್ ಕಾರ್ಯಕ್ರಮ ನಿರೂಪಿಸಿದರು.
ಬೆಸೆಂಟ್ ಕಾಲೇಜಿಗೆ ಉತ್ತಮ ಘಟಕ ಪ್ರಶಸ್ತಿ
- ಉತ್ತಮ ಯೂತ್ ರೆಡ್‌ಕ್ರಾಸ್ ಘಟಕ
ಪ್ರಥಮ -ಬೆಸೆಂಟ್ ಮಹಿಳಾ ಕಾಲೇಜು , ದ್ವಿತೀಯ -ಸ್ಕೂಲ್ ಆಫ್ ಸೋಶಿಯಲ್ ವರ್ಕ್, ರೋಶನಿ ನಿಲಯ. - ಉತ್ತಮ ಯೂತ್ ರೆಡ್‌ಕ್ರಾಸ್ ಸಂಯೋಜನಾಧಿಕಾರಿ
ಪ್ರಥಮ : ದೀಕ್ಷಿತಾ.ಟಿ.ಎಸ್., ಬೆಸೆಂಟ್ ಮಹಿಳಾ ಕಾಲೇಜು , ದ್ವಿತೀಯ – ಅಶಿತಾ, ಸ್ಕೂಲ್ ಆಫ್ ಸೋಶಿಯಲ್ ವರ್ಕ್, ರೋಶನಿ ನಿಲಯ. - ಉತ್ತಮ ವಿದ್ಯಾರ್ಥಿ ಸ್ವಯಂ ಸೇವಕರು : ಪ್ರಜ್ಞಾ ಮತ್ತು ದೇವಿಶ್ರೀ.ಆರ್.ರೈ (ಬೆಸೆಂಟ್ ಮಹಿಳಾ ಕಾಲೇಜು ), ಖತಿಜಾ ಮೆಹ್ತಾ (ಸ್ಕೂಲ್ ಆಫ್ ಸೋಶಿಯಲ್ ವರ್ಕ್, ರೋಶನಿ ನಿಲಯ), ಶಿವಾನಂದ (ಶ್ರೀ ಗೋಕರ್ಣನಾಥೇಶ್ವರ ಕಾಲೇಜು), ಅಭಿಲಾಶ್.ಡಿ. (ವಿ.ವಿ.ಕಾಲೇಜು, ಹಂಪನಕಟ್ಟೆ), ಶಾನೆಲ್ ಡಿಸೋಜಾ (ತೃಷಾ ಕಾಲೇಜು)