ಮಂಗಳೂರು : ಕರ್ನಾಟಕ ರಾಜ್ಯದ ಮಹತ್ವಾಕಾಂಕ್ಷಿ ಯೋಜನೆಯಾದ “ಯುವನಿಧಿ” ಯೋಜನೆಯ ಸೌಲಭ್ಯವನ್ನು ಪಡೆಯಲು ಫಲಾನುಭವಿಗಳು ಈ ಮೊದಲು ಪ್ರತೀ ತಿಂಗಳು ಸ್ವಯಂ ಘೋಷಣೆ ಮಾಡಬೇಕಾಗಿತ್ತು. ಯುವನಿಧಿ ಯೋಜನೆಯಲ್ಲಿ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾಗಳನ್ನು 2023 ಅಥವಾ 2024ರ ವರ್ಷದಲ್ಲಿ ತೇರ್ಗಡೆ ಹೊಂದಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳು ಈಗಾಗಲೇ ಸೇವಾ ಸಿಂಧು ಪೋರ್ಟಲ್‍ನಲ್ಲಿ ನೋಂದಣಿಯಾಗಿದ್ದು ಹಾಗೂ ಫಲಿತಾಂಶದ ನಂತರ ನಿರುದ್ಯೋಗಿಗಳಾಗಿ 180 ದಿವಸಗಳು ಪೂರೈಸಿದ ಅಭ್ಯರ್ಥಿಗಳಿಗೆ ನೇರ ನಗದು ವರ್ಗಾವಣೆ ಮಾಡಲಾಗುತ್ತಿದೆ.
ಅಭ್ಯರ್ಥಿಗಳು, ಈ ಮೊದಲು ಯುವನಿಧಿ ಯೋಜನೆಯ ಪ್ರಯೋಜನವನ್ನು ಪಡೆಯಲು ಪ್ರತಿ ತಿಂಗಳು 25ನೇ ತಾರೀಖಿನೊಳಗೆ ತಾನು ನಿರುದ್ಯೋಗಿಯೆಂದು, ವ್ಯಾಸಂಗ ಮುಂದುವರೆಸುತ್ತಿಲ್ಲವೆಂದು ಹಾಗೂ ಸ್ವಯಂ ಉದ್ಯೋಗಿಯಲ್ಲವೆಂದು ಸ್ವಯಂ ಘೋಷಣೆಯನ್ನು ಮಾಡಬೇಕಾಗಿತ್ತು. ಪ್ರಸಕ್ತ ಸ್ವಯಂ ಘೋಷಣೆಯನ್ನು ಪ್ರತೀ ತಿಂಗಳು ಬದಲಾಗಿ ತ್ರೈಮಾಸಿಕವಾಗಿ ಸಲ್ಲಿಸಲು ಅವಕಾಶ ಕಲ್ಪಿಸಿದ್ದು, ತ್ರೈಮಾಸಿಕವಾಗಿ ದಾಖಲಿಸಲಾಗುವ ಸ್ವಯಂ ಘೋಷಣೆಯಲ್ಲಿ ಪ್ರತೀ ತಿಂಗಳ ನಿರುದ್ಯೋಗದ ವಿವರಗಳನ್ನು ಪ್ರತ್ಯೇಕವಾಗಿ ದಾಖಲಿಸಲು ಅವಕಾಶ ನೀಡಲಾಗಿರುತ್ತದೆ.
ಸ್ವಯಂ ಘೋಷಣೆಯನ್ನು ಪ್ರತೀ ತ್ರೈಮಾಸಿಕದ ಫೆಬ್ರವರಿ, ಮೇ, ಆಗಸ್ಟ್ ಹಾಗೂ ನವೆಂಬರ್ ತಿಂಗಳುಗಳಲ್ಲಿ ನೀಡಬೇಕಾಗಿರುತ್ತದೆ. ಈಗಾಗಲೇ ಫೆಬ್ರವರಿ-2025ರ ತಿಂಗಳಲ್ಲಿ ಸ್ವಯಂ ಘೋಷಣೆಯನ್ನು ನೀಡಿರುವ ಫಲಾನುಭವಿಗಳು ಮುಂದಿನ ಮಾರ್ಚ್-2025 ಏಪ್ರಿಲ್- 2025 ಹಾಗೂ ಮೇ-2025ರ ಸ್ವಯಂ ಘೋಷಣೆಯನ್ನು ಮೇ-2025ರ ತಿಂಗಳಿನಲ್ಲಿ ಒಂದೇ ಬಾರಿಗೆ ನೀಡಬೇಕು. ಅಭ್ಯರ್ಥಿಗಳು ಸ್ವಯಂ ಘೋಷಣೆ ಮಾಡಿಕೊಳ್ಳಲು https://sevasindhugs.karnataka.gov.in ವೆಬ್‍ಸೈಟ್ ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ಪ್ರಕಟಣೆ ತಿಳಿಸಿದೆ.
