ಮಂಗಳೂರು: ಡಿಸೆಂಬರ್ ತಿಂಗಳಲ್ಲಿ ಮಂಡ್ಯದಲ್ಲಿ ಜರಗಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಸಾಹಿತ್ಯಾಸಕ್ತರು, ಕನ್ನಡ ಪರ ಸಂಘಟನೆಗಳು ಭಾಗವಹಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷÀ ಡಾ.ಎಂ. ಪಿ. ಶ್ರೀನಾಥ್ ಕರೆ ನೀಡಿದ್ದಾರೆ.
ಅವರು ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯದಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಖಿಲ ಭಾರತ ಮಟ್ಟದ ಸಮ್ಮೇಳನಕ್ಕೆ ಜಿಲ್ಲೆಯಿಂದ ಭಾಗವಹಿಸುವವರು 600 ರೂಪಾಯಿ ಆನ್‍ಲೈನ್ ನಲ್ಲಿ ಪಾವತಿಸುವ ಮುಖಾಂತರ ಸಮ್ಮೇಳನಕ್ಕೆ ಹಾಜರಾಗಬಹುದು ಎಂದು ಅವರು ಹೇಳಿದರು.
ಈ ಬೃಹತ್ ಸಮ್ಮೇಳನಕ್ಕೆ ಸನ್ಮಾನಕ್ಕೆ ಅರ್ಹರಾದ ಸಾಧಕರನ್ನು ಮತ್ತು ಕವಿಗೋಷ್ಠಿಗೆ ಕವಿಗಳನ್ನು ಆಯ್ಕೆ ಮಾಡಲಾಗಿದೆ. ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಗೋರೂರು ಚೆನ್ನಬಸಪ್ಪ ಅವರಿಗೆ ಅಭಿನಂದನೆ ಕೋರಲಾಯಿತು.
ಜಿಲ್ಲೆಯಲ್ಲಿ ಸಾಹಿತ್ಯ ಚಟುವಟಿಕೆಗಳಿಗೆ ಸಹಕಾರಿ ಸಂಘದ ಸಭಾಭವನ ನೀಡಲು ಸಹಕಾರ ಸಂಘದ ಅಧ್ಯಕ್ಷರನ್ನು ವಿನಂತಿಸಲಾಯಿತು. ಉಜಿರೆಯಲ್ಲಿ ಜರಗಿದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆಯನ್ನು ಶೀಘ್ರದಲ್ಲಿ ಬಿಡುಗಡೆ ಮಾಡಲಾಗುವುದು. ದತ್ತಿನಿಧಿ ಕಾರ್ಯಕ್ರಮಗಳು ನಿರಂತರವಾಗಿ ನಡೆಸುವಂತೆ ಅವರು ಸಲಹೆಯಿತ್ತರು.
ಸಭೆಯಲ್ಲಿ ರಾಜ್ಯ ಸಮಿತಿ ಸದಸ್ಯರಾದ ಡಾ.ಎಂ.ಕೆ. ಮಾಧವ, ಸಹಕಾರ ಸಂಘದ ಅಧ್ಯಕ್ಷರಾದ ಗಣೇಶ್ ರಾವ್, ಕಸಾಪ. ಸಹ ಸಂಘಟನಾ ಕಾರ್ಯದರ್ಶಿ ಕಿರಣ್ ರೈ, ಕೋಶಾಧ್ಯಕ್ಷ ಬಿ ಐತಪ್ಪ ನಾಯ್ಕ್, ವಿವಿಧ ತಾಲೂಕು ಕಸಾಪ ಅಧ್ಯಕ್ಷರುಗಳಾದ ಪುತ್ತೂರು ಉಮೇಶ್ ನಾಯಕ್, ವೇಣುಗೋಪಾಲ ಶೆಟ್ಟಿ, ಧನಂಜಯ ಕುಂಬ್ಳೆ, ಚಂದ್ರಶೇಖರ ಪೇರಾಲು, ಯದುಪತಿ ಗೌಡ, ಪದಾಧಿಕಾರಿಗಳಾದ ರಾಮಚಂದ್ರ ಪಲ್ಲತಡ್ಕ, ಪೂವಪ್ಪ ನೇರಳಕಟ್ಟೆ, ಕೆ ಸುಂದರ ನಾಯ್ಕ್,ಸನತ್ ಕುಮಾರ್ ಜೈನ್, ಅರುಣಾ ನಾಗರಾಜ್ ಉಪಸ್ಥಿತರಿದ್ದರು. ಜಿಲ್ಲಾ ಕಸಾಪ ಸಂಘಟನಾ ಕಾರ್ಯದರ್ಶಿ ಯು. ಎಚ್. ಖಾಲಿದ್ ಉಜಿರೆ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ರಾಜೇಶ್ವರಿ ವಂದಿಸಿದರು.