ಬೆಂಗಳೂರು: ವಿವಿಧ ಮೂಲಗಳಿಂದ ವಿದ್ಯುತ್ ಉತ್ಪಾದನೆಗೆ ಹೇರಳ ಅವಕಾಶವಿದ್ದರೂ ಖಾಸಗಿ ಕಂಪನಿಗಳಿಂದ ವಿದ್ಯುತ್ ಖರೀದಿಸಲು ರಾಜ್ಯದಲ್ಲಿ ಕೃತಕ ವಿದ್ಯುತ್ ಅಭಾವ ಸೃಷ್ಟಿಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನೂತನ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು.
ಪಂಚರಾಜ್ಯಗಳ ಚುನಾವಣೆ ಹಾಗೂ ಲೋಕಸಭೆ ಚುನಾವಣೆಯ ವೇಳೆ ದೊಡ್ಡ ಪ್ರಮಾಣದಲ್ಲಿ ಹಣ ಹಂಚುವ ಉದ್ದೇಶದಿಂದ ಖಾಸಗಿ ಕಂಪನಿಗಳಿಂದ ವಿದ್ಯುತ್ ಖರೀದಿ ಮಾಡಿ ಕಮೀಷನ್ ಸಂಗ್ರಹ ಮಾಡಲು ರಾಜ್ಯ ಸರಕಾರ ಹುನ್ನಾರ ನಡೆಸಿದೆ, ಖಾಸಗಿ ಕಂಪನಿಗಳಿಂದ ಖರೀದಿ ಮಾಡಿದರೆ ತಾನೇ ಇವರ ಜೇಬು ತುಂಬುವುದು ಎಂದು ಅವರು ದೂರಿದರು.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಅವರಿಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಮಳೆಯ ಅಭಾವದಿಂದ ಜಲ ವಿದ್ಯುತ್ ಉತ್ಪಾದನೆ ಕಡಿಮೆ ಆಗಿದೆ, ನಿಜ. ಆದರೆ, ಇತರೆ ಮೂಲಗಳಿಂದ ಸಾಕಷ್ಟು ವಿದ್ಯುತ್ ಉತ್ಪಾದನೆ ಮಾಡಬಹುದು. ಅಧಿಕಾರ ಬಂದಾಗಿನಿಂದಲೇ ಸರಕಾರ ಮುನ್ನೆಚ್ಚರಿಕೆ ವಹಿಸಿದ್ದಿದ್ದರೆ ಅಗತ್ಯವಾದಷ್ಟು ಕಲ್ಲಿದ್ದಲನ್ನು ದಾಸ್ತಾನು ಮಾಡಿಕೊಳ್ಳಬಹುದಿತ್ತು. ಖರೀದಿ ವ್ಯವಹಾರ ನಡೆಸಿ ಕ