25.6 C
Karnataka
Monday, May 18, 2026

ಕುದುರೆಮುಖ ರಾ.ಉ. ಪುನರ್ವಸತಿಗೆ ಹೆಚ್ಚುವರಿಯಾಗಿ 20 ಕೋಟಿ ರೂ.

ಮಂಗಳೂರು: ಕುದುರೆಮುಖ ಸೇರಿದಂತೆ ರಾಜ್ಯದ ಅರಣ್ಯದೊಳಗಿರುವ ವಸತಿ ಪ್ರದೇಶಗಳ ಸ್ಥಳಾಂತರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ಮಂಗಳೂರಿನಲ್ಲಿಂದು ನಡೆದ ಗೇರುಮೇಳದಲ್ಲಿ, ಕೆಲವು ತಿಂಗಳ ಹಿಂದೆ ಆನೆ ದಾಳಿಗೆ ಇಬ್ಬರು ಮೃತಪಟ್ಟಿದ್ದ, ಕೆರೆಕಟ್ಟೆ ಪ್ರದೇಶ ಸೇರಿದಂತೆ ಕುದುರೆಮುಖ ಅರಣ್ಯದಿಂದ ಸ್ವಯಂ ಪ್ರೇರಿತರಾಗಿ ಹೊರಬರಲು ಅರ್ಜಿ ಸಲ್ಲಿಸಿದ್ದ 5 ಕುಟುಂಬಗಳಿಗೆ 2.38 ಕೋಟಿ ರೂ.ಚೆಕ್ ವಿತರಿಸಿ ಅವರು ಮಾತನಾಡಿದರು.
ಇಬ್ಬರ ಮೇಲೆ ಕಾಡಾನೆ ದಾಳಿ ಮಾಡಿದಾಗ, ಪುಂಡಾನೆಯನ್ನು ಸೆರೆ ಹಿಡಿಯಲು ಸೂಚನೆ ನೀಡಲಾಗಿತ್ತು. ಆನೆ ಸೆರೆ ಮಾತ್ರವೇ ಪರಿಹಾರ ಆಗುವುದಿಲ್ಲ. ಹೀಗಾಗಿ ಅರಣ್ಯದೊಳಗಿನ ಜನರ ಸ್ಥಳಾಂತರದ ಮೂಲಕ ಅರಣ್ಯ ಪ್ರದೇಶ ವಿಸ್ತರಣೆ, ಸಂರಕ್ಷಣೆ ಮಾಡಲು ಸರ್ಕಾರ ಕ್ರಮ ವಹಿಸಿದೆ ಎಂದರು
ಕುದುರೆಮುಖ ಅರಣ್ಯದೊಳಗೆ 1300 ಪರಿವಾರಗಳಿದ್ದವು, 350 ಕುಟುಂಬಗಳಿಗೆ ಪರಿಹಾರ ನೀಡಿದೆ ಸ್ಥಳಾಂತರಿಸಲಾಗಿದೆ. ಇನ್ನೂ 300 ಕುಟುಂಬಗಳು ಸ್ವಯಂ ಇಚ್ಛೆಯಿಂದ ಸ್ಥಳಾಂತರಗೊಳ್ಳಲು ಅರ್ಜಿ ಸಲ್ಲಿಸಿದ್ದು, ಹಂತ ಹಂತವಾಗಿ ಪುನರ್ವಸತಿ ಯೋಜನೆ ಜಾರಿಗೆ ತರಲಾಗುವುದು ಎಂದರು.
ಆನೆ ದಾಳಿಯಿಂದ ಮೃತಪಟ್ಟ ಕುಟುಂಬಕ್ಕೆ ಹೊರಗುತ್ತಿಗೆ ಕೆಲಸ:
ಪ್ರತಿಯೊಂದು ಜೀವವೂ ಅಮೂಲ್ಯ. ಹೋದ ಜೀವ ಮರಳಿ ತರಲು ಸಾಧ್ಯವಿಲ್ಲ. ಆದರೆ ಅವರನ್ನು ಆಶ್ರಯಿಸಿದ್ದ ಕುಟುಂಬಗಳಿಗೆ ಆಸರೆಯಾಗಲು ಸರ್ಕಾರ ವನ್ಯಜೀವಿ ದಾಳಿಯಿಂದ ಮೃತಪಟ್ಟ ಕುಟುಂಬಗಳಿಗೆ 20 ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ ಎಂದು ತಿಳಿಸಿದರು.
ಈ ಘಟನೆ ನಡೆದ ಬಳಿಕ ಬಹಳ ವರ್ಷದಿಂದ ಅರ್ಜಿ ಹಾಕಿ ಕಾಯುತ್ತಿದ್ದ ಅರಣ್ಯದೊಳಗಿನ ವಸತಿ ಪ್ರದೇಶಗಳ ಸ್ಥಳಾಂತರ ಯೋಜನೆಯನ್ನು ಆರ್ಥಿಕ ಲಭ್ಯತೆಯ ಇತಿಮಿತಿಯಲ್ಲಿ ಪುನಾರಂಭಿಸಲು ನಿರ್ಧರಿಸಲಾಗಿದ್ದು. ಈ ಬಗ್ಗೆ ನಾನು ಅಧಿಕಾರಿಗಳಿಗೆ ಸೂಚನೆ ನೀಡಿ ಕೂಡಲೇ ಸ್ವಯಂ ಇಚ್ಛೆಯಿಂದ ಕಾಡಿನಿಂದ ಹೊರಗೆ ಬರಲು ಅರ್ಜಿ ಸಲ್ಲಿಸಿರುವ ಕುಟುಂಬಗಳನ್ನು ಗುರುತಿಸಿ ಸ್ಥಳಾಂತರಿಸಲು ಸೂಚಿಸಿದ್ದೆ, ಇಂದು 5 ಕುಟುಂಬಕ್ಕೆ ಚೆಕ್ ನೀಡಲಾಗಿದೆ. ಜೊತೆಗೆ 20 ಕೋಟಿ ರೂಪಾಯಿಗಳನ್ನು ಪುನರ್ವಸತಿ ಯೋಜನೆಗೆ ಹೆಚ್ಚುವರಿಯಾಗಿ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.
ಕೆರೆಕಟ್ಟೆಯ ಮುಡಬಿಯಲ್ಲಿ ನಡೆದ ದುರ್ಘಟನೆಯಲ್ಲಿ ಮೃತಪಟ್ಟವರ ಕುಟುಂಬದ ಸ್ಥಿತಿಯನ್ನು ಪರಿಗಣಿಸಿ. ಮಾನವೀಯ ನೆಲೆಗಟ್ಟಿನಲ್ಲಿ ಆ ಕುಟುಂಬದ ಇಬ್ಬರಿಗೆ ಹೊರಗುತ್ತಿಗೆ ಆಧಾರದಲ್ಲಿ ಅರಣ್ಯ ಇಲಾಖೆಯಲ್ಲಿ ಉದ್ಯೋಗವನ್ನೂ ನೀಡಲಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.
ವನ ಪ್ರದೇಶ ಇರುವ ಜಿಲ್ಲೆಗಳಲ್ಲಿ ಮಾನವ-ಆನೆ ಸಂಘರ್ಷ ಹೆಚ್ಚಾಗಿದೆ. ಮಂಗಳೂರು ಭಾಗದಲ್ಲೂ ಈ ಸಮಸ್ಯೆ ಇದೆ. ತಾವು ಸಚಿವರಾದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಗೆ ಸಮರ್ಪಿತ ಆನೆ ಕಾರ್ಯಪಡೆ ಮಂಜೂರು ಮಾಡಲಾಗಿದ್ದು, 25 ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ರೈಲ್ವೆ ಬ್ಯಾರಿಕೇಡ್ ಅಳವಡಿಸುತ್ತಿದ್ದೇವೆ. ಕಾಡಿನಲ್ಲಿ ವನ್ಯಜೀವಿಗಳಿಗೆ ನೀರು, ಆಹಾರದ ಕೊರತೆ ಆಗದಂತೆ ನೋಡಿಕೊಳ್ಳುತ್ತಿದ್ದೇವೆ. ಸಿಬ್ಬಂದಿ ನೇಮಕಾತಿ ಮಾಡುತ್ತಿದ್ದೇವೆ. ಕಮಾಂಡ್ ಸೆಂಟರ್ ಆರಂಭಿಸಿದ್ದೇವೆ ಎಂದರು.
ಚಾರಣ ಎಸ್.ಓ.ಪಿ. ಕಟ್ಟುನಿಟ್ಟಿನ ಜಾರಿಗೆ – ಈಶ್ವರ ಖಂಡ್ರೆ ಸೂಚನೆ:
ತಮ್ಮ ಸೂಚನೆಯಂತೆ ಇತ್ತೀಚೆಗೆ ಇಲಾಖೆ ಸಿದ್ಧಪಡಿಸಿರುವ ಚಾರಣಿಗರ ಸುರಕ್ಷತೆಯ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್.ಓ.ಪಿ.)ಯ ಕಟ್ಟುನಿಟ್ಟಿನ ಪಾಲನೆಗೆ ಸೂಚನೆ ನೀಡಿದ ಸಚಿವರು, ಇದೇ ಸಂದರ್ಭದಲ್ಲಿ ಟ್ರೆಕ್ ಪಾಸ್ ಪೋರ್ಟ್ ಮತ್ತು ಟ್ರೆಕ್ ಗೈಡ್ ಕೈಪಿಡಿ ಹಾಗೂ ಚಾರಣದಲ್ಲಿ ಭಾಗಿಯಾಗುವ ಪ್ರಕೃತಿ ಮಾರ್ಗದರ್ಶಕರಿಗೆ ಪ್ರಥಮ ಚಿಕಿತ್ಸೆಯ ಕಿಟ್ ಅನ್ನು ವಿತರಿಸಿದರು.
ಕುದುರೆಮುಖ ವನ್ಯಜೀವಿ ವಲಯದ ವ್ಯಾಪ್ತಿಯಲ್ಲಿನ ಶೋಲಾ ಸಫಾರಿಗಾಗಿ ಕ್ಯಾಂಪರ್ ವಾಹನಕ್ಕೂ ಚಾಲನೆ ನೀಡಿದರು. ಚಾರಣಿಗರ ಅನುಕೂಲಕ್ಕಾಗಿ ಕೈಪಿಡಿಯನ್ನೂ ಬಿಡುಗಡೆ ಮಾಡಿದರು.
ರಾಜ್ಯದಲ್ಲಿ ಕಳೆದ 3 ವರ್ಷದಲ್ಲಿ 11 ಕೋಟಿ ಸಸಿಗಳನ್ನು ನೆಟ್ಟು ಬೆಳೆಸಲಾಗಿದೆ. ಅರಣ್ಯ ಒತ್ತುವರಿಯನ್ನು ತೆರವು ಮಾಡಲು ಆದ್ಯತೆ ನೀಡಲಾಗಿದ್ದು ಸಾವಿರಾರು ಕೋಟಿ ರೂ. ಬೆಲೆ ಬಾಳುವ ಅರಣ್ಯ ಒತ್ತುವರಿಯನ್ನು ಹಂತ ಹಂತವಾಗಿ ತೆರವು ಮಾಡಿಸಲಾಗುತ್ತಿದೆ ಎಂದರು.
ಮಾಲಿನ್ಯ ತಡೆಗೆ ಕ್ರಮ
ಕುಡಿಯುವ ನೀರು ಪೂರೈಸುವ ಮೂಲಗಳಿಗೆ ತ್ಯಾಜ್ಯಜಲ ಸೇರದಂತೆ ಕ್ರಮ ವಹಿಸಲು ಸೂಚಿಸಲಾಗಿದೆ ಎಂದು ತಿಳಿಸಿದ ಸಚಿವರು, ಜಲ ಕಾಯಿದೆಯ ನಿಯಮಗಳ ಅಡಿ ಸಂಸ್ಕರಿಸದೆ ತ್ಯಾಜ್ಯವನ್ನು ಜಲಮೂಲಗಳಿಗೆ ಹರಿಸುವವರಿಗೆ ನೋಟಿಸ್ ನೀಡಲು ಆದೇಶಿಸಲಾಗಿದೆ ಎಂದರು.
ಬಡ ರೈತರ ಶೋಷಣೆ ಆಗದ ರೀತಿಯಲ್ಲಿ ಸೆಕ್ಷನ್ 4 ಮತ್ತು ಡೀಮ್ಡ್ ಅರಣ್ಯದ ಬಗ್ಗೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದರು.
ಶಾಸಕ ವೇದವ್ಯಾಸ ಕಾಮತ್ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಶಾಸಕರುಗಳಾದ ರಾಜೇಗೌಡ, ಅಶೋಕ್ ಕುಮಾರ್ ರೈ, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಮತಾ ಡಿ.ಎಸ್. ಗಟ್ಟಿ, ಮಾಜಿ ಸಚಿವ ರಮಾನಾಥ ರೈ ಮತ್ತಿತರರು ಪಾಲ್ಗೊಂಡಿದ್ದರು

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles