23.7 C
Karnataka
Saturday, June 20, 2026

ಬಾಲ್ಯವಿವಾಹ ತಡೆಗೆ ಸರ್ಕಾರದ ಬದ್ಧ: ಹಲವಾರು ಕಟ್ಟುನಿಟ್ಟಿನ ಕ್ರಮಗಳು ಜಾರಿ

ಮಂಗಳೂರು: ಬಾಲ್ಯ ಎಂಬುದು ಆಟ, ಪಾಠ ಮತ್ತು ಮುಗ್ಧ ಕನಸುಗಳನ್ನು ಕಾಣುವ ಸುಂದರ ಕಾಲ. ಆದರೆ, ಅದೇ ಬಾಲ್ಯಕ್ಕೆ ಮದುವೆಯೆಂಬ ನೊಗವನ್ನು ಕಟ್ಟಿ, ಮಕ್ಕಳ ಭವಿಷ್ಯವನ್ನು ಚಿಗುರಿನಲ್ಲೇ ಕಮರಿಸುವ ‘ಬಾಲ್ಯ ವಿವಾಹ’ ಎಂಬ ಸಾಮಾಜಿಕ ಪಿಡುಗು ಇಂದಿಗೂ ನಮ್ಮ ಸಮಾಜಕ್ಕೆ ದೊಡ್ಡ ಸವಾಲಾಗಿದೆ.
ಹೆಣ್ಣುಮಕ್ಕಳ ಆರೋಗ್ಯ, ಶಿಕ್ಷಣ, ಸ್ವಾತಂತ್ರ್ಯ ಮತ್ತು ಮೂಲಭೂತ ಹಕ್ಕುಗಳನ್ನು ಕಸಿಯುವ ಈ ಪಿಡುಗನ್ನು ಬೇರುಸಹಿತ ಕಿತ್ತೊಗೆಯಲು ಕರ್ನಾಟಕ ಸರ್ಕಾರವು ಕಠಿಣ ಕಾನೂನು ತಿದ್ದುಪಡಿಗಳು, ಬಿಗಿಯಾದ ಆಡಳಿತಾತ್ಮಕ ಕ್ರಮಗಳು, ತಂತ್ರಜ್ಞಾನದ ಬಳಕೆ ಮತ್ತು ವ್ಯವಸ್ಥಿತ ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳ ಮೂಲಕ ಅತ್ಯಂತ ಗಂಭೀರ ಹಾಗೂ ಸುದೀರ್ಘ ಹೋರಾಟವನ್ನು ನಡೆಸುತ್ತಿದೆ.
ಕಾನೂನಿಗೆ ಐತಿಹಾಸಿಕ ಬಲ: ‘ನಿಶ್ಚಿತಾರ್ಥವೂ ಅಪರಾಧ’
ಬಾಲ್ಯ ವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಇಡೀ ದೇಶದಲ್ಲೇ ಅತ್ಯಂತ ಕಠಿಣ ಮತ್ತು ಪ್ರಗತಿಪರ ಕಾನೂನು ರೂಪಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೇಂದ್ರ ಸರ್ಕಾರದ ಬಾಲ್ಯ ವಿವಾಹ ನಿμÉೀಧ ಕಾಯ್ದೆ 2006ಕ್ಕೆ ರಾಜ್ಯ ಸರ್ಕಾರವು ಮಹತ್ವದ ತಿದ್ದುಪಡಿಗಳನ್ನು ತಂದಿದೆ. ಈ ಕಟ್ಟುನಿಟ್ಟಿನ ತಿದ್ದುಪಡಿಗಳ ಪ್ರಕಾರ, ಕೇವಲ ಬಾಲ್ಯ ವಿವಾಹ ಮಾಡುವುದು ಮಾತ್ರವಲ್ಲದೆ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ನಿಶ್ಚಿತಾರ್ಥ ಮಾಡುವುದು ಅಥವಾ ಅದಕ್ಕೆ ಸಿದ್ಧತೆ ನಡೆಸುವುದು ಕೂಡ ಶಿಕ್ಷಾರ್ಹ ಅಪರಾಧವಾಗಿದೆ. ಇಂತಹ ಯಾವುದೇ ನಿಶ್ಚಿತಾರ್ಥಗಳನ್ನು ಕಾನೂನುಬಾಹಿರ ಮತ್ತು ಶೂನ್ಯ ಎಂದು ಘೋಷಿಸಲಾಗಿದೆ.
ಬಾಲ್ಯ ವಿವಾಹವನ್ನು ಪೆÇ್ರೀತ್ಸಾಹಿಸುವ, ಅದಕ್ಕೆ ಸಿದ್ಧತೆ ನಡೆಸುವ ಅಥವಾ ನೆರವೇರಿಸುವ ಪೆÇೀಷಕರು, ಸಂಬಂಧಿಕರು, ಮದುವೆಗೆ ಸಾಕ್ಷಿಯಾಗುವವರು ಸೇರಿದಂತೆ ಯಾವುದೇ ವ್ಯಕ್ತಿಗಳಿಗೆ ಕನಿಷ್ಠ 2 ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ ಮತ್ತು 1 ಲಕ್ಷ ರೂಪಾಯಿಗಳವರೆಗೆ ದಂಡ ವಿಧಿಸಲು ಕಾನೂನಿನಲ್ಲಿ ಕಡ್ಡಾಯ ಅವಕಾಶ ಕಲ್ಪಿಸಲಾಗಿದೆ. ಈ ಅಪರಾಧಗಳನ್ನು ಜಾಮೀನು ರಹಿತ ಮತ್ತು ರಾಜಿ ಮಾಡಿಕೊಳ್ಳಲಾಗದ ಅಪರಾಧಗಳಾಗಿ ಪರಿಗಣಿಸಲಾಗಿದೆ.
ಅಧಿಕಾರಿಗಳ ವಿಕೇಂದ್ರೀಕರಣ ಮತ್ತು ಸಾಮೂಹಿಕ ಹೊಣೆಗಾರಿಕೆ :
ಗ್ರಾಮ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಬಾಲ್ಯ ವಿವಾಹಗಳನ್ನು ಮುಂಚಿತವಾಗಿಯೇ ಪತ್ತೆ ಹಚ್ಚಿ ತಡೆಯಲು ಸರ್ಕಾರವು ವ್ಯಾಪಕ ಜಾಲವನ್ನು ಹೊಂದಿರುವ ‘ಬಾಲ್ಯ ವಿವಾಹ ನಿμÉೀಧಾಧಿಕಾರಿಗಳನ್ನು ನೇಮಿಸಿದೆ. ಗ್ರಾಮೀಣ ಭಾಗದಲ್ಲಿ ಕೇವಲ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯμÉ್ಟೀ ಅಲ್ಲದೆ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಆಡಳಿತ ಅಧಿಕಾರಿಗಳು, ಶಾಲಾ ಮುಖ್ಯ ಶಿಕ್ಷಕರು ಮತ್ತು ಅಂಗನವಾಡಿ ಕಾರ್ಯಕರ್ತೆಯರನ್ನು ನಿμÉೀಧಾಧಿಕಾರಿಗಳನ್ನಾಗಿ ಮಾಡಿ ಕಾನೂನುಬದ್ಧ ಜವಾಬ್ದಾರಿ ಹಂಚಲಾಗಿದೆ. ಶಾಲೆಯಲ್ಲಿ ಯಾವುದೇ ಮಗು ಸತತವಾಗಿ 3 ದಿನಗಳಿಗಿಂತ ಹೆಚ್ಚು ಕಾಲ ಗೈರುಹಾಜರಾದರೆ, ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರು ಕಡ್ಡಾಯವಾಗಿ ಅವರ ಮನೆಗೆ ಭೇಟಿ ನೀಡಿ ಮಗುವಿನ ಸ್ಥಿತಿಗತಿಯ ಮಾಹಿತಿ ಪಡೆಯುವ ನಿಯಮವನ್ನು ಕಡ್ಡಾಯಗೊಳಿಸಲಾಗಿದೆ.
ಇದಲ್ಲದೆ, ಕಲ್ಯಾಣ ಮಂಟಪಗಳು, ದೇವಸ್ಥಾನಗಳು, ಚರ್ಚ್, ಮಸೀದಿಗಳು ಅಥವಾ ಸಾಮೂಹಿಕ ವಿವಾಹ ಆಯೋಜಿಸುವ ಯಾವುದೇ ಸಂಘ-ಸಂಸ್ಥೆಗಳು ವಧು-ವರರ ವಯಸ್ಸಿನ ಅಧಿಕೃತ ದೃಢೀಕರಣ ಪತ್ರಗಳನ್ನು (ಎಸ್.ಎಸ್.ಎಲ್.ಸಿ ಅಂಕಪಟ್ಟಿ / ಜನನ ಪ್ರಮಾಣಪತ್ರ) ಪರಿಶೀಲಿಸುವುದು ಕಡ್ಡಾಯವಾಗಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿ ಬಾಲ್ಯ ವಿವಾಹಕ್ಕೆ ಆಸ್ಪದ ನೀಡಿದರೆ, ಕಲ್ಯಾಣ ಮಂಟಪಗಳ ಮಾಲೀಕರು, ವ್ಯವಸ್ಥಾಪಕರು, ಮುದ್ರಣಾಲಯದವರು (ಮದುವೆ ಪತ್ರಿಕೆ ಮುದ್ರಿಸಿದವರು) ಮತ್ತು ವಿವಾಹ ನೆರವೇರಿಸುವ ಪುರೋಹಿತರು, ಖಾಜಿಗಳು ಅಥವಾ ಧಾರ್ಮಿಕ ಮುಖಂಡರ ವಿರುದ್ಧವೂ ನೇರವಾಗಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಪರವಾನಗಿ ರದ್ದುಪಡಿಸುವ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ.
ತಂತ್ರಜ್ಞಾನದ ಬಳಕೆ, ತಡೆಯಾಜ್ಞೆ ಮತ್ತು ಪುನರ್ವಸತಿ
ಬಾಲ್ಯ ವಿವಾಹದ ಮಾಹಿತಿ ಸಿಕ್ಕ ತಕ್ಷಣ ಸಾರ್ವಜನಿಕರು ದೂರು ನೀಡಲು ಮತ್ತು ಮಕ್ಕಳನ್ನು ತಕ್ಷಣವೇ ರಕ್ಷಿಸಲು ಸರ್ಕಾರ ಆಧುನಿಕ ತಂತ್ರಜ್ಞಾನ ಹಾಗೂ ಸಹಾಯವಾಣಿಗಳನ್ನು ಸಕ್ರಿಯಗೊಳಿಸಿದೆ. 24 ಗಂಟೆಯೂ ಉಚಿತವಾಗಿ ಕಾರ್ಯನಿರ್ವಹಿಸುವ 1098 ಸಹಾಯವಾಣಿ ಮತ್ತು ಮಹಿಳಾ ಸಹಾಯವಾಣಿ 181 ಮೂಲಕ ದೂರುಗಳನ್ನು ಸ್ವೀಕರಿಸಲಾಗುತ್ತದೆ. ಇಲ್ಲಿ ಮಾಹಿತಿ ನೀಡುವ ಸಾರ್ವಜನಿಕರ ಅಥವಾ ನೆರೆಹೊರೆಯವರ ವಿವರಗಳನ್ನು ಕಾನೂನುಬದ್ಧವಾಗಿ ಸಂಪೂರ್ಣ ಗೌಪ್ಯವಾಗಿಡಲಾಗುತ್ತದೆ.
ಒಂದು ವೇಳೆ ಮದುವೆಯ ಮಾಹಿತಿ ಮುಂಚಿತವಾಗಿ ತಿಳಿದರೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪೆÇೀಷಕರಿಂದ ಮುಚ್ಚಳಿಕೆ ಪತ್ರವನ್ನು ಬರೆಸಿಕೊಳ್ಳುತ್ತಾರೆ. ಒಂದು ವೇಳೆ ಪೆÇೀಷಕರು ಕಾನೂನಿಗೆ ಮಣಿಯದಿದ್ದರೆ. ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಿಂದ ತುರ್ತು ತಡೆಯಾಜ್ಞೆ ತಂದು ಮದುವೆಯನ್ನು ಸ್ಥಳದಲ್ಲೇ ನಿಲ್ಲಿಸುವ ಸಂಪೂರ್ಣ ಅಧಿಕಾರವನ್ನು ಅಧಿಕಾರಿಗಳಿಗೆ ನೀಡಲಾಗಿದೆ. ಕೇವಲ ಮದುವೆ ತಡೆಯುವುದμÉ್ಟೀ ಅಲ್ಲದೆ, ಪಾರು ಮಾಡಲ್ಪಟ್ಟ ಬಾಲಕ-ಬಾಲಕಿಯರ ಮುಂದಿನ ಜವಾಬ್ದಾರಿಯನ್ನೂ ಸರ್ಕಾರವೇ ವಹಿಸಿಕೊಳ್ಳುತ್ತದೆ.
ಸರ್ಕಾರಿ ಬಾಲ ಮಂದಿರಗಳು ಮತ್ತು ‘ಸಖಿ’ ಒನ್ ಸ್ಟಾಪ್ ಸೆಂಟರ್‍ಗಳ ಮೂಲಕ ಅವರಿಗೆ ಉಚಿತ ಸುರಕ್ಷಿತ ವಸತಿ, ಶಿಕ್ಷಣದ ಮುಂದುವರಿಕೆ, ರಕ್ಷಣೆ ಮತ್ತು ಮಾನಸಿಕ ಆಘಾತದಿಂದ ಹೊರಬರಲು ನುರಿತ ತಜ್ಞರಿಂದ ಕೌನ್ಸಿಲಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ.
ಹೆಣ್ಣು ಮಕ್ಕಳ ಸಬಲೀಕರಣ ಮತ್ತು ಸಾಮಾಜಿಕ ಬದಲಾವಣೆ
ಕೇವಲ ಶಿಕ್ಷೆಯ ಭಯದಿಂದ ಮಾತ್ರ ಸಾಮಾಜಿಕ ಪಿಡುಗುಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ ಎಂಬುದನ್ನು ಮನಗಂಡಿರುವ ಕರ್ನಾಟಕ ಸರ್ಕಾರ, ಹೆಣ್ಣು ಮಕ್ಕಳ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಬಡತನದ ಕಾರಣಕ್ಕಾಗಿ ಪೆÇೀಷಕರು ಹೆಣ್ಣು ಮಕ್ಕಳನ್ನು ಅರ್ಧಕ್ಕೆ ಶಾಲೆಯಿಂದ ಬಿಡಿಸುವುದನ್ನು ತಡೆಯಲು ಉಚಿತ ಬಸ್ ಪಾಸ್, ಉಚಿತ ಸೈಕಲ್ ವಿತರಣೆ, ವಸತಿ ನಿಲಯಗಳ ಸೌಲಭ್ಯ ಮತ್ತು ಪೆÇ್ರೀತ್ಸಾಹದಾಯಕ ವಿದ್ಯಾರ್ಥಿವೇತನ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಬಡ ಕುಟುಂಬಗಳಲ್ಲಿ ಹೆಣ್ಣು ಮಕ್ಕಳ ಜನನವನ್ನು ಪೆÇ್ರೀತ್ಸಾಹಿಸಲು ಮತ್ತು ಅವರ ಆರ್ಥಿಕ ಭದ್ರತೆಗಾಗಿ ಜಾರಿಯಲ್ಲಿರುವ ‘ಭಾಗ್ಯಲಕ್ಷ್ಮಿ’ಯಂತಹ ಯೋಜನೆಗಳು ಹೆಣ್ಣುಮಕ್ಕಳು 18 ವರ್ಷ ತುಂಬುವವರೆಗೆ ಮದುವೆ ಮಾಡದಂತೆ ಪೆÇೀಷಕರನ್ನು ಪರೋಕ್ಷವಾಗಿ ನಿಯಂತ್ರಿಸುವಲ್ಲಿ ಯಶಸ್ವಿಯಾಗಿವೆ.
ಇದರೊಂದಿಗೆ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಪೆÇಲೀಸ್ ಇಲಾಖೆ ಮತ್ತು ವಿವಿಧ ಸ್ವಯಂಸೇವಾ ಸಂಸ್ಥೆಗಳ ಜಂಟಿ ಸಹಯೋಗದಲ್ಲಿ ಗ್ರಾಮೀಣ ಹಾಗೂ ಹಿಂದುಳಿದ ತಾಲೂಕುಗಳಲ್ಲಿ ನಿರಂತರವಾಗಿ ‘ಬಾಲ್ಯ ವಿವಾಹ ಮುಕ್ತ ಹಳ್ಳಿ’ ಅಭಿಯಾನಗಳು, ಬೀದಿ ನಾಟಕಗಳು ಮತ್ತು ಜಾಗೃತಿ ಜಾಥಾಗಳನ್ನು ನಡೆಸಲಾಗುತ್ತಿದೆ. ಸ್ವಸಹಾಯ ಸಂಘಗಳ ಮಹಿಳೆಯರು ಮತ್ತು ಆಶಾ ಕಾರ್ಯಕರ್ತೆಯರಿಗೆ ವಿಶೇಷ ತರಬೇತಿ ನೀಡಿ, ಗ್ರಾಮೀಣ ಭಾಗದಲ್ಲಿ ಬಾಲ್ಯ ವಿವಾಹದ ವಿರುದ್ಧದ ಕಣ್ಣುಗಳಾಗಿ ಕಾರ್ಯನಿರ್ವಹಿಸುವಂತೆ ಮಾಡಲಾಗಿದೆ.
ಬಾಲ್ಯ ವಿವಾಹ ತಡೆಗೆ ಕಠಿಣ ಕ್ರಮಗಳನ್ನು ಕೈಗೊಂಡಿರುವ ರಾಜ್ಯ ಸರ್ಕಾರ ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯದ ರಿಟ್ ಅರ್ಜಿ ಸಂಖ್ಯೆ: 1234/2017 ರ ಆದೇಶದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಮತ್ತು ರಾಜ್ಯದಲ್ಲಿ ಬಾಲ್ಯ ವಿವಾಹಗಳನ್ನು ಸಂಪೂರ್ಣವಾಗಿ ನಿಯಂತ್ರಿಸಲು ಕರ್ನಾಟಕ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ “ರಾಜ್ಯ ಮಟ್ಟದ ಸಮನ್ವಯ ಮತ್ತು ಪರಿಶೀಲನಾ ಸಮಿತಿ”ಯನ್ನು ರಚಿಸಿದೆ.
ಈ ಸಮಿತಿಯು ಇತ್ತೀಚೆಗೆ ಮಹತ್ವದ ಸಭೆ ನಡೆಸಿ ನಿರ್ಣಾಯಕ ತೀರ್ಮಾನಗಳನ್ನು ಕೈಗೊಂಡಿದೆ. ಕಳೆದ 5 ವರ್ಷಗಳ ಆತಂಕಕಾರಿ ಅಂಕಿ-ಅಂಶಗಳ ವಿಶ್ಲೇಷಣೆ ಮಾಡಿರುವ ಸಮಿತಿಯು, ಇತ್ತೀಚಿನ ವರದಿಗಳ ಪ್ರಕಾರ, ರಾಜ್ಯದಲ್ಲಿ ಬಾಲ್ಯ ವಿವಾಹದ ದೂರುಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿರುವುದು ಆತಂಕ ಮೂಡಿಸಿದೆ ಎಂದು ಕಳವಳ ವ್ಯಕ್ತಪಡಿಸಿದೆ.
2020ನೇ ಸಾಲಿನಲ್ಲಿ 2,290 ರಷ್ಟಿದ್ದ ಬಾಲ್ಯ ವಿವಾಹದ ಪ್ರಕರಣಗಳ ಸಂಖ್ಯೆಯು, 2024ನೇ ಸಾಲಿನ ವೇಳೆಗೆ 3,127 ಕ್ಕೆ ಏರಿಕೆಯಾಗಿದೆ. 2023ರಲ್ಲಿ ಸ್ವಲ್ಪ ಇಳಿಕೆಯಾಗಿದ್ದನ್ನು ಹೊರತುಪಡಿಸಿದರೆ, ಒಟ್ಟಾರೆ ಪ್ರಕರಣಗಳ ಗ್ರಾಫ್ ಮೇಲ್ಮುಖವಾಗಿದೆ. ವಿಶೇಷವಾಗಿ ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ತಲಾ 200 ಕ್ಕೂ ಹೆಚ್ಚು ದೂರುಗಳು ದಾಖಲಾಗಿದ್ದರೆ, ಇನ್ನುಳಿದ 11 ಜಿಲ್ಲೆಗಳಲ್ಲಿ 100 ಕ್ಕೂ ಅಧಿಕ ದೂರುಗಳು ದಾಖಲಾಗಿವೆ. ಈ ಹಠಾತ್ ಏರಿಕೆಗೆ ಕಾರಣವಾದ ಅಂಶಗಳನ್ನು ಮತ್ತು ಕೋವಿಡ್-ಪೂರ್ವ (2018 ಮತ್ತು 2019ರ) ದಾಖಲೆಗಳನ್ನು ಆಳವಾಗಿ ಅಧ್ಯಯನ ಮಾಡಲು ಸರ್ಕಾರ ಮುಂದಾಗಿದೆ.
ವಾಸ್ತವ ಮತ್ತು ತಡೆಗಟ್ಟುವಿಕೆಯ ನಡುವಿನ ಅಂತರ: ತನಿಖೆಗೆ ಆದೇಶ
ದಾಖಲಾಗುವ ದೂರುಗಳು ಮತ್ತು ವಾಸ್ತವವಾಗಿ ತಡೆಗಟ್ಟಲಾಗುತ್ತಿರುವ ವಿವಾಹಗಳ ನಡುವೆ ದೊಡ್ಡ ಕಂದಕವಿರುವುದನ್ನು ಸಮಿತಿ ಗುರುತಿಸಿದೆ. ಉದಾಹರಣೆಗೆ, 2024ರಲ್ಲಿ ಸ್ವೀಕರಿಸಿದ 3,127 ದೂರುಗಳ ಪೈಕಿ 2,323 ಬಾಲ್ಯ ವಿವಾಹಗಳನ್ನು ಯಶಸ್ವಿಯಾಗಿ ತಡೆಗಟ್ಟಲಾಗಿದೆಯಾದರೂ, ಅಧಿಕಾರಿಗಳ ಕಣ್ಣು ತಪ್ಪಿಸಿ 804 ಬಾಲ್ಯ ವಿವಾಹಗಳು ನಡೆದುಹೋಗಿವೆ. ಈ ಅಂತರಕ್ಕೆ ಕಾರಣವೇನು ಮತ್ತು ವ್ಯವಸ್ಥೆಯಲ್ಲಿನ ಲೋಪದೋಷಗಳೇನು ಎಂಬುದನ್ನು ಪತ್ತೆಹಚ್ಚಲು ಸಮಿತಿ ಸೂಚಿಸಿದೆ.
ಇನ್ನೊಂದು ಆಘಾತಕಾರಿ ವಿಷಯವೆಂದರೆ, ಎಫ್.ಐ.ಆರ್.ಗಳು ದಾಖಲಾಗುತ್ತಿದ್ದರೂ ಅಪರಾಧಿಗಳಿಗೆ ಶಿಕ್ಷೆಯಾಗುತ್ತಿರುವ ಪ್ರಮಾಣ ಅತ್ಯಂತ ಕನಿಷ್ಠ ಮಟ್ಟದಲ್ಲಿದೆ. 2020ರಲ್ಲಿ ಕೇವಲ 3, 2024ರಲ್ಲಿ ಕೇವಲ 1 ಮತ್ತು 2021ರಲ್ಲಿ ಕೇವಲ 10 ಅಪರಾಧಗಳು ಮಾತ್ರ ಶಿಕ್ಷೆಗೆ ಒಳಪಟ್ಟಿವೆ. ಈ ಹಿನ್ನೆಲೆಯಲ್ಲಿ ತನಿಖೆ ಮತ್ತು ಕಾನೂನು ಪ್ರಕ್ರಿಯೆಯನ್ನು ಇನ್ನಷ್ಟು ಬಿಗಿಗೊಳಿಸಲು ಗೃಹ ಇಲಾಖೆ ಹಾಗೂ ಕಾನೂನು ಇಲಾಖೆಯ ಸಮನ್ವಯದೊಂದಿಗೆ ವಿಶೇಷ ಕ್ರಮ ಕೈಗೊಳ್ಳಲಾಗುತ್ತಿದೆ.
ಕ್ಷೇತ್ರ ಮಟ್ಟದ ಅಧಿಕಾರಿಗಳಿಗೆ ತರಬೇತಿ ಮತ್ತು ಹೊಣೆಗಾರಿಕೆ:
ಮಕ್ಕಳ ಸಹಾಯವಾಣಿ 1098 ಕ್ಕೆ ಬಂದ ಕರೆಗಳ ಸ್ವರೂಪ ಮತ್ತು ಅವುಗಳಿಗೆ ಸ್ಪಂದಿಸಲು ಅಧಿಕಾರಿಗಳು ತೆಗೆದುಕೊಳ್ಳುವ ಸಮಯದ ಕುರಿತು ನಿರಂತರ ವಿಮರ್ಶೆ ನಡೆಸಲಾಗುತ್ತಿದೆ. ಬಾಲ್ಯ ವಿವಾಹ ನಿμÉೀಧ ಕಾಯ್ದೆಯ ಕರ್ನಾಟಕ ತಿದ್ದುಪಡಿಗಳ ಅಡಿಯಲ್ಲಿ ತಳಮಟ್ಟದ ಅಧಿಕಾರಿಗಳ ಸಾಮಥ್ರ್ಯ ವೃದ್ಧಿಗಾಗಿ ವಿಶೇಷ ತರಬೇತಿ ಮಾಡ್ಯೂಲ್ ಸಿದ್ಧಪಡಿಸಲಾಗುತ್ತಿದೆ.
ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರು, ಪ್ರೌಢಶಾಲಾ ಶಿಕ್ಷಕರು, ಅಂಗನವಾಡಿ ಮೇಲ್ವಿಚಾರಕರು ಹಾಗೂ ಕಾರ್ಯಕರ್ತೆಯರು, ಸಮುದಾಯ ಆರೋಗ್ಯ ಅಧಿಕಾರಿಗಳು, ದಾದಿಯರು ಮತ್ತು ಆಶಾ ಕಾರ್ಯಕರ್ತೆಯರಿಗೆ ಅಪಾಯದಲ್ಲಿರುವ ಮಕ್ಕಳನ್ನು ಗುರುತಿಸುವುದು, ತುರ್ತು ಹಸ್ತಕ್ಷೇಪದ ಕಾರ್ಯವಿಧಾನಗಳು ಮತ್ತು ಬಾಲ್ಯ ವಿವಾಹದ ಸಾಮಾಜಿಕ-ಆರ್ಥಿಕ ದುಷ್ಪರಿಣಾಮಗಳ ಕುರಿತು ವಿಶೇಷ ತರಬೇತಿ ನೀಡಲು ಸೂಚಿಸಲಾಗಿದೆ. ಶಾಲೆಗಳಲ್ಲಿ ನಿರಂತರ ಗೈರುಹಾಜರಾಗುವ ಹೆಣ್ಣುಮಕ್ಕಳನ್ನು ಪತ್ತೆ ಹಚ್ಚುವ ಜವಾಬ್ದಾರಿಯನ್ನು ಶಿಕ್ಷಣ ಇಲಾಖೆಗೆ ನೀಡಲಾಗಿದೆ.
ರಕ್ಷಣೆ, ಪುನರ್ವಸತಿ ಮತ್ತು ಶಿಕ್ಷಣದ ಮುಂದುವರಿಕೆ:
ಬಾಲ್ಯ ವಿವಾಹದ ಅಪಾಯದಲ್ಲಿರುವ ದುರ್ಬಲ ಮಕ್ಕಳನ್ನು ಪತ್ತೆ ಹಚ್ಚಲು 5 ಪ್ರಮುಖ ಮಾನದಂಡಗಳನ್ನು ಸರ್ಕಾರ ಗುರುತಿಸಿದೆ. ಮದುವೆಯಿಂದ ರಕ್ಷಿಸಲ್ಪಟ್ಟ ಎಲ್ಲಾ ಮಕ್ಕಳಿಗೆ ತಕ್ಷಣದ ಸೂಕ್ತ ರಕ್ಷಣೆ ಮತ್ತು ದೀರ್ಘಕಾಲೀನ ಪುನರ್ವಸತಿ ಕಲ್ಪಿಸಲಾಗುತ್ತದೆ. ರಕ್ಷಿಸಲ್ಪಟ್ಟ ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ದೃಷ್ಟಿಯಿಂದ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಶಾಲಾ ಶಿಕ್ಷಣ ಇಲಾಖೆಯು ಜಂಟಿ ಸುತ್ತೋಲೆ ಹೊರಡಿಸಿ, ‘ಗ್ರಾಮ ಪಂಚಾಯತ್ ಶಿಕ್ಷಣ ಕಾರ್ಯಪಡೆ’ಗಳ ಮೂಲಕ ಸ್ಥಳೀಯವಾಗಿ ಆ ಮಕ್ಕಳಿಗೆ ಶಿಕ್ಷಣದ ಮುಂದುವರಿಕೆಯನ್ನು ಖಚಿತಪಡಿಸಲಿವೆ.
ಮೇಲ್ವಿಚಾರಣೆ, ಸಾಮಾಜಿಕ ಜಾಗೃತಿ ಮತ್ತು ಬುಡಕಟ್ಟು ಸಮುದಾಯಗಳ ಮೇಲೆ ವಿಶೇಷ ಗಮನ : ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ನಿಯಮಿತವಾಗಿ ವರ್ಚುವಲ್ ಸಭೆಗಳ ಮೂಲಕ ತಳಮಟ್ಟದ ಪ್ರಗತಿಯನ್ನು ಪರಿಶೀಲಿಸಲಿದ್ದಾರೆ. ಸಾಮೂಹಿಕ ವಿವಾಹ ಕಾರ್ಯಕ್ರಮಗಳು ನಡೆಯುವಾಗ ವಧು-ವರರ ವಯಸ್ಸಿನ ದೃಢೀಕರಣದ ಮೇಲೆ ಕಟ್ಟುನಿಟ್ಟಿನ ನಿಗಾ ಇರಿಸಲಾಗುತ್ತದೆ. ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿ ಬಾಲ್ಯ ವಿವಾಹ ಮುಕ್ತವಾಗುವ ಗ್ರಾಮ ಪಂಚಾಯತಿಗಳಿಗೆ “ಬಾಲ್ಯವಿವಾಹ ಮುಕ್ತ ಗ್ರಾಮ ಪಂಚಾಯತ್” ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ಇದಲ್ಲದೆ, ಮಕ್ಕಳ ಸಹಾಯವಾಣಿ ಸಂಖ್ಯೆ 1098 ಮತ್ತು ಮಹಿಳಾ ಸಹಾಯವಾಣಿ ಸಂಖ್ಯೆ 181 ಕುರಿತು ಶಾಲಾ-ಕಾಲೇಜುಗಳು, ಗ್ರಾಮ ಪಂಚಾಯತಿಗಳಲ್ಲಿ ಭಿತ್ತಿಪತ್ರಗಳ ಮೂಲಕ ಜಾಗೃತಿ ಮೂಡಿಸಲಾಗುವುದು ಹಾಗೂ ಹದಿಹರೆಯದವರಿಗೆ ಸಂತಾನೋತ್ಪತ್ತಿ ಆರೋಗ್ಯದ ಕುರಿತು ವಿಶೇಷ ಶಿಕ್ಷಣ ನೀಡಲಾಗುತ್ತದೆ. ವಿಶೇಷವಾಗಿ, ಬುಡಕಟ್ಟು ಸಮುದಾಯಗಳು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ಬಾಲ್ಯ ವಿವಾಹದ ಸಮಸ್ಯೆಗಳನ್ನು ಪರಿಹರಿಸಲು ಬುಡಕಟ್ಟು ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಕಾನೂನು ಬಲವರ್ಧನೆ:
‘ಬಾಲ್ಯ ವಿವಾಹ (ಕರ್ನಾಟಕ) ನಿಷೇಧ ನಿಯಮಗಳು, 2022’ ರ ಕರಡನ್ನು ಸಂಸದೀಯ ವ್ಯವಹಾರಗಳು ಮತ್ತು ಕಾನೂನು ರಚನೆ ಇಲಾಖೆಯು ಪರೀಕ್ಷಿಸುತ್ತಿದ್ದು, ಅಗತ್ಯ ಪರಿಷ್ಕರಣೆಗಳೊಂದಿಗೆ ಶೀಘ್ರದಲ್ಲೇ ಅಂತಿಮ ಅನುಮೋದನೆ ಪಡೆದು ಜಾರಿಗೆ ತರಲಾಗುವುದು.
ಬಾಲ್ಯ ವಿವಾಹ ಮುಕ್ತ ರಾಜ್ಯವನ್ನಾಗಿ ಮಾಡುವುದು ಕೇವಲ ಒಂದು ಇಲಾಖೆ ಅಥವಾ ಸರ್ಕಾರದ ಜವಾಬ್ದಾರಿಯಲ್ಲ. ಅದು ನಮ್ಮ ಸಮಾಜದ ಪ್ರತಿಯೊಬ್ಬ ಜವಾಬ್ದಾರಿಯುತ ನಾಗರಿಕನ ಪರಮ ಕರ್ತವ್ಯವಾಗಿದೆ. ಅಪ್ರಾಪ್ತ ವಯಸ್ಸಿನಲ್ಲಿ ತಾಯ್ತನದ ಭಾರ ಹೊರುವ ಹೆಣ್ಣುಮಕ್ಕಳು ತೀವ್ರ ಅಪೌಷ್ಟಿಕತೆ ಮತ್ತು ರಕ್ತಹೀನತೆಗೆ ಒಳಗಾಗುತ್ತಾರೆ, ಇದು ಇಡೀ ಮುಂದಿನ ಪೀಳಿಗೆಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೆಣ್ಣುಮಕ್ಕಳಿಗೆ ಮದುವೆಯ ನೊಗ ಕಟ್ಟುವ ಬದಲು ಅವರ ಕೈಗೆ ಪುಸ್ತಕ ಮತ್ತು ಉದ್ಯೋಗದ ಶಕ್ತಿ ತುಂಬುವುದು ಇಂದಿನ ತುರ್ತು ಅಗತ್ಯವಾಗಿದೆ. ನಮ್ಮ ಸುತ್ತಮುತ್ತ ಇಂತಹ ಘಟನೆಗಳು ಅಥವಾ ಪ್ರಯತ್ನಗಳು ಕಂಡುಬಂದರೆ ತಕ್ಷಣ ಧ್ವನಿ ಎತ್ತುವ ಮೂಲಕ ಮತ್ತು ಸಹಾಯವಾಣಿಗೆ ಕರೆ ಮಾಡುವ ಮೂಲಕ ಮುಗ್ಧ ಮಕ್ಕಳ ಭವಿಷ್ಯವನ್ನು ಕತ್ತಲಿಗೆ ತಳ್ಳುವುದನ್ನು ತಪ್ಪಿಸಲು ಸಾರ್ವಜನಿಕರು ಕೈಜೋಡಿಸಬೇಕಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles