28.8 C
Karnataka
Friday, June 19, 2026

ನೀಟ್ ಪರೀಕ್ಷೆ: ದ.ಕ. ಜಿಲ್ಲೆಯಲ್ಲಿ 5570 ಅಭ್ಯರ್ಥಿಗಳು*

ಮಂಗಳೂರು: ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ ಜೂನ್ 21 ರಂದು ರಾಷ್ಟ್ರಾದ್ಯಂತ ನಡೆಯಲಿರುವ ನೀಟ್ ಪರೀಕ್ಷೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 5570 ಅಭ್ಯರ್ಥಿಗಳು ನೋಂದಾಯಿಸಿದ್ದಾರೆ.ಜಿಲ್ಲೆಯ 12 ಕೇಂದ್ರಗಳಲ್ಲಿ ನೀಟ್ ಪರೀಕ್ಷೆ ನಡೆಯಲಿದ್ದು, ಎಲ್ಲಾ ಕೇಂದ್ರಗಳು ಮಂಗಳೂರು ಮಹಾನಗರ ವ್ಯಾಪ್ತಿಯಲ್ಲಿದೆ.

ಈ ಸಂಬಂಧ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿ ರಾಜು ಕೆ. ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.ಸಭೆಯಲ್ಲಿ ಮಾತನಾಡಿದ ಅವರು, ನೀಟ್ ಮರುಪರೀಕ್ಷೆಯನ್ನು ನಕಲು ಮುಕ್ತ, ಪಾರದರ್ಶಕ ಹಾಗೂ ವ್ಯವಸ್ಥಿತವಾಗಿ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ನಿಯಮಗಳಂತೆ ಯಾವುದೇ ಲೋಪವಾಗದಂತೆ ಪರೀಕ್ಷೆ ನಡೆಸಬೇಕು. ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ವಿದ್ಯಾರ್ಥಿಗಳಿಗೆ ಆಸನಗಳ ವ್ಯವಸ್ಥೆ ಸಮರ್ಪಕವಾಗಿ ಇರುವಂತೆ ನೋಡಿಕೊಳ್ಳಬೇಕು. ಪ್ರತಿ ಪರೀಕ್ಷಾ ಕೊಠಡಿಯಲ್ಲಿ ವಿದ್ಯಾರ್ಥಿಗಳಿಗೆ ಇಬ್ಬರು ಮೇಲ್ವಿಚಾರಕರು ಇರಲಿದ್ದಾರೆ. ಅಭ್ಯರ್ಥಿಗಳ ತಪಾಸಣೆಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್‍ಟಿಎ) ದಿಂದ ತಪಾಸಣಾ ಸಾಮಗ್ರಿ ಹಾಗೂ ಅಗತ್ಯ ಸಿಬ್ಬಂದಿಗಳನ್ನು ಒದಗಿಸಿದೆ ಎಂದರು.

ಬಿಗುಭದ್ರತೆಯಲ್ಲಿ ಪರೀಕ್ಷೆ

ಈ ಬಾರಿ ನೀಟ್ ಪರೀಕ್ಷೆ ಬಿಗು ಭದ್ರತೆಯಿಂದ ನಡೆಸಲಾಗುತ್ತಿದ್ದು, ಸ್ಥಳೀಯ ಪೊಲೀಸರೊಂದಿಗೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯನ್ನು (ಸಿಎಪಿಎಫ್) ನಿಯೋಜಿಸಲಾಗಿದೆ. ಇದಕ್ಕಾಗಿ 30 ಸದಸ್ಯ ಬಲದ ಸಿಎಪಿಎಫ್ ತಂಡ ಮಂಗಳೂರಿಗೆ ಆಗಮಿಸಲಿದೆ. ಪ್ರತೀ ಪರೀಕ್ಷಾ ಕೇಂದ್ರಕ್ಕೆ ಸ್ಥಳೀಯ ಪೊಲೀಸರನ್ನು ಸಶಸ್ತ್ರವಾಗಿ ನಿಯೋಜಿಸಲಾಗುವುದು ಎಂದರು. ಪರೀಕ್ಷಾ ಕಾರ್ಯಗಳ ಮೇಲ್ವಿಚಾರಣೆಗೆ ಎನ್ ಟಿ ಎ ಜಿಲ್ಲೆಗೆ ಇಬ್ಬರು ನೋಡಲ್ ಅಧಿಕಾರಿಗಳನ್ನು ನೇಮಿಸಿದೆ. ತೀವ್ರ ಕಣ್ಗಾವಲಿನಲ್ಲಿ ಈ ಪರೀಕ್ಷೆ ನಡೆಯುತ್ತಿದ್ದು, ಯಾವುದೇ ಲೋಪಗಳಿಗೆ ಅವಕಾಶ ನೀಡದಂತೆ ಅಪರ ಜಿಲ್ಲಾಧಿಕಾರಿಗಳು ಸೂಚಿಸಿದರು.
ಪರೀಕ್ಷೆಗೆ ಆಗಮಿಸುವ ಅಭ್ಯರ್ಥಿಗಳ ತೀವ್ರ ತಪಾಸಣೆ ಮಾಡಲಾಗುತ್ತದೆ. ಪರೀಕ್ಷೆ ಕೊಠಡಿಯೊಳಗೆ ಎಲೆಕ್ಟ್ರಾನಿಕ್ ವಸ್ತುಗಳು, ಮೊಬೈಲ್, ಪೆನ್ ಡ್ರೈವ್, ಇಯರ್ ಪೋನ್, ಮೈಕ್ರೋ ಪೋನ್, ಬ್ಲೂಟೂತ್ ಸಾಧನ ಅನುಮತಿಸಲಾಗುವುದಿಲ್ಲ. ವಿದ್ಯಾರ್ಥಿ ಮತ್ತು ಪರೀಕ್ಷಾ ಸಿಬ್ಬಂದಿಗಳಿಗೆ ಮೊಬೈಲ್ ಬಳಕೆಗೆ, ಫೋಟೋಗ್ರ್ರಫಿಗೆ ಸಂಪೂರ್ಣ ನಿಷೇಧಿಸಲಾಗಿದೆ. ನೀಟ್ ಪರೀಕ್ಷೆ ಸಿಸಿಟಿವಿ ಕಣ್ಗಾವಲು ನಲ್ಲಿ ನಡೆಸಲಾಗುತ್ತಿದ್ದು, ಸಿಸಿಟಿವಿ ಕಾರ್ಯನಿರ್ವಹಣೆ ಬಗ್ಗೆ ಮುಂಚಿತವಾಗಿ ಖಾತ್ರಿಪಡಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.

ಬೆಳಿಗ್ಗೆ 11ರಿಂದ ಪರೀಕ್ಷಾ ಕೇಂದ್ರ ಪ್ರವೇಶ
ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಭಾನುವಾರ ಬೆಳಿಗ್ಗೆ 11ರಿಂದ ಮಧ್ಯಾಹ್ನ 1.30ರವರೆಗೆ ಪ್ರವೇಶಿಸಬಹುದು. ಮಧ್ಯಾಹ್ನ 2 ರಿಂದ ಸಂಜೆ 5-15 ಗಂಟೆಯವರೆಗೆ ಪರೀಕ್ಷೆ ನಡೆಯಲಿದ್ದು, ವಿಶೇಷಚೇತನರಿಗೆ ಹೆಚ್ಚುವರಿ ಒಂದು ಗಂಟೆ ಕಾಲಾವಕಾಶ ನೀಡಲಾಗುತ್ತದೆ. ಈ ಬಾರಿಯ ಪರೀಕ್ಷೆಯಲ್ಲಿ ಎಲ್ಲ ಅಭ್ಯರ್ಥಿಗಳಿಗೆ ಹೆಚ್ಚುವರಿ 15 ನಿಮಿಷಗಳ ಕಾಲಾವಕಾಶ ನೀಡಲಾಗಿದೆ ಎಂದು ಅವರು ಹೇಳಿದರು.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ಮಾರ್ಗಸೂಚಿ ಅನ್ವಯ ನಿಯಮಗಳಂತೆ ಪರೀಕ್ಷೆ ನಡೆಸಬೇಕು. ಸುಸೂತ್ರ ಪರೀಕ್ಷೆಗೆ ಪೋಲಿಸ್ ಇಲಾಖೆ, ಖಜಾನೆ ಇಲಾಖೆ, ಸಂಬಂಧಿಸಿದ ಇಲಾಖೆಗಳ ಸಮನ್ವಯಕ್ಕೆ ಸೂಚಿಸಲಾಗಿದೆ. ಪರೀಕ್ಷೆ ಕೇಂದ್ರದ ಹೊರಗೆ ಜನಸಂದಣಿ ಮೇಲೆ ನಿಗಾ ಇಡಬೇಕು. ನಿಗದಿತ ಪರೀಕ್ಷಾ ಸಮಯ ಪರಿಪಾಲನೆ ಮಾಡಬೇಕು ಎಂದರು.
ಸಭೆಯಲ್ಲಿ ನೀಟ್ ನೋಡಲ್ ಅಧಿಕಾರಿ, ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲ ಟೇಕ್‍ಚಂದ್, ಮತ್ತೋರ್ವ ನೋಡಲ್ ಅಧಿಕಾರಿ ಜಸ್ವೀಂದರ್, ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ, ಪದವಿಪೂರ್ವ ಶಿಕ್ಷಣ ಇಲಾಖೆ ಕಚೇರಿ ಅಧೀಕ್ಷಕ ನಿತಿನ್ ಶೆಟ್ಟಿ, ಪೊಲೀಸ್ ನಿರೀಕ್ಷಕ ಗೋಪಾಲಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles