ಮ೦ಗಳೂರು: ಪ್ರಧಾನಿ ನರೇಂದ್ರ ಮೋದೀಯವರು ಲೋಕಸಭಾ ಚುನಾವಣಾ ಪ್ರಚಾರದ ಭಾಗವಾಗಿ ಇದೇ ಏಪ್ರಿಲ್ 14 ರಂದು ಮಂಗಳೂರಿಗೆ ಆಗಮಿಸಿ ಬೃಹತ್ ರೋಡ್ ಶೋ ನಲ್ಲಿ ಭಾಗವಹಿಸಲಿರುವ ಹಿನ್ನಲೆಯಲ್ಲಿ ಬಿಜೆಪಿ ಮಂಗಳೂರು ನಗರ ದಕ್ಷಿಣದ ಪ್ರಮುಖರ ಪೂರ್ವಭಾವಿ ಸಭೆಯನ್ನು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆಸಲಾಯಿತು.
ಶಾಸಕ ವೇದವ್ಯಾಸ ಕಾಮತ್ ಮಾತನಾಡಿ ಇಡೀ ದೇಶವೇ ಈಗ ಲೋಕಸಭಾ ಚುನಾವಣೆಗೆ ಸಜ್ಜಾಗಿದ್ದು ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಪಕ್ಷ ಚಟುವಟಿಕೆಗಳು ಭರದಿಂದ ಸಾಗಿವೆ. ಇಂತಹ ಸಂದರ್ಭದಲ್ಲಿ ಮೋದಿಯವರು ಮಂಗಳೂರಿಗೆ ಆಗಮಿಸುತ್ತಿರುವುದು ಇಡೀ ಜಿಲ್ಲೆಯ ಪಕ್ಷದ ಪ್ರಮುಖರಾದಿಯಾಗಿ ಕಾರ್ಯಕರ್ತ ಬಂಧುಗಳಲ್ಲಿ ಮಿಂಚಿನ ಸಂಚಲನ ಮೂಡಿಸಿದೆ. ನಾವೆಲ್ಲರೂ ಸರ್ವ ರೀತಿಯ ಜವಾಬ್ದಾರಿಗಳನ್ನು ವಹಿಸಿಕೊಂಡು ನಮೋ ರೋಡ್ ಶೋ ನ ಸಂಪೂರ್ಣ ಯಶಸ್ಸಿಗೆ ಸಹಕರಿಸೋಣವೆಂದು ಕರೆ ನೀಡಿದರು.
ರಮೇಶ್ ಕಂಡೆಟ್ಟು, ವಿಜಯ್ ಕುಮಾರ್ ಶೆಟ್ಟಿ, ಮೋನಪ್ಪ ಭಂಡಾರಿ, ರಾಕೇಶ್ ರೈ ಸೇರಿದಂತೆ ಪಕ್ಷದ ಅನೇಕ ಪ್ರಮುಖರು ಉಪಸ್ಥಿತರಿದ್ದರು.