ಬಂಟ್ವಾಳ: ಕಾರಿನ ಸೈಡ್ ಕೊಟ್ಟಿಲ್ಲ ಎ೦ದು ತಕರಾರು ತೆಗೆದು ಸರಕಾರಿ ಬಸ್ ಚಾಲಕನ ಮೇಲೆ ತಂಡವೊಂದು ಹಲ್ಲೆ ನಡೆಸಿ, ಬಸ್ ಗೆ ಹಾನಿಗೊಳಿಸಿದ ಘಟನೆ ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪದ ದಾಸಕೋಡಿ ಎಂಬಲ್ಲಿ ರವಿವಾರ ನಡೆದಿದೆ. ಪುಂಜಾಲಕಟ್ಟೆ ನಿವಾಸಿ ಕೃಷ್ಣಪ್ಪ ಅವರು ಹಲ್ಲೆಗೊಳಗಾದ ಚಾಲಕ.
ರವಿವಾರ ಸಂಜೆ ವೇಳೆ ಮಂಗಳೂರಿನಿಂದ ಸೋಮವಾರಪೇಟೆಗೆ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಾ, ಬಂಟ್ವಾಳ ದಾಸಕೋಡಿ ಎಂಬಲ್ಲಿಗೆ ತಲುಪಿದಾಗ, ಎರಡು ಕಾರುಗಳಲ್ಲಿ ಬಂದ ಆರು ಜನರು, ಬಸ್ಸನ್ನು ಅಡ್ಡಗಟ್ಟಿ, ಕಲ್ಲಡ್ಕ ಏಕಮುಖ ರಸ್ತೆಯಲ್ಲಿ ಸದರಿ ಕಾರುಗಳಿಗೆ ಮುಂದೆ ಹೋಗಲು ಸೈಡ್ ಕೊಡದಿರುವುದಾಗಿ ತಕರಾರು ತೆಗೆದು, ಬಸ್ಸಿನ ಸೈಡ್ ಮಿರರನ್ನು ಹಾಗು ಬಸ್ಸಿನ ಎದುರಿನ ಗ್ಲಾಸ್ ನ್ನು ಜಖಂಗೊಳಿಸಿದ್ದು, ಇದರಿಂದಾಗಿ ಸುಮಾರು 30,000 ರೂ ನಷ್ಟ ಸಂಭವಿಸಿದೆ . ಬಳಿಕ ಅವ್ಯಾಚವಾಗಿ ಬೈದು, ಜೀವ ಬೆದರಿಕೆ ಒಡ್ಡಿ, ಹಲ್ಲೆ ನಡೆಸಿರುತ್ತಾರೆ ಎಂದು ಕೃಷ್ಣಪ್ಪ ಅವರು ಬಂಟ್ವಾಳ ನಗರ ಪೋಲಿಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.