ಮ೦ಗಳೂರು: ಮಂಗಳೂರಿನ ಅಮೃತ ವಿದ್ಯಾಲಯಂ ನಲ್ಲಿ ಗುರುಪೂರ್ಣಿಮೆ ಪ್ರಯುಕ್ತ ಸಂಸ್ಕೃತಿ ಪೂಜೆಯನ್ನು ನಡೆಸಲಾಯಿತು.
ಗುರುಪೂರ್ಣಿಮಾ ಆಚರಣೆಯ ಪ್ರಯುಕ್ತ ನಡೆದ ಸಂಸ್ಕೃತಿ ಪೂಜೆಯನ್ನು ಮಠದ ಮುಖ್ಯಸ್ಥರಾದ ಸ್ವಾಮಿನಿ ಮಂಗಳಾಮೃತ ಪ್ರಾಣ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.ರಾಮಕೃಷ್ಣ ಮಠದ ಸ್ವಚ್ಛ ಮಂಗಳೂರು ಅಭಿಯಾನದ ಮುಖ್ಯ ಸಂಯೋಜಕರಾದ ರಂಜನ್ ಬೆಳ್ಳರ್ಪಾಡಿ ಭಾಗವಹಿಸಿದ್ದರು. ಅವರು ಮಾತನಾಡಿ ಧರ್ಮ ಮತ್ತು ಸಂಸ್ಕೃತಿ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ವಿವರಿಸಿ ತಂದೆತಾಯಿಯನ್ನು ಪ್ರೀತಿಸಿ, ಗೌರವಿಸಿ, ಒಳ್ಳೆಯ ವ್ಯಕ್ತಿತ್ವ ವನ್ನು ರೂಪಿಸಿ ಎಂದು ವಿದ್ಯಾರ್ಥಿಗಳಿಗೆ ಕರೆಯಿತ್ತರು.

ಯೋಗ ರತ್ನ ಗೋಪಾಲ ಕೃಷ್ಣ ದೇಲಂಪಾಡಿಯವರು ಅತಿಥಿಯಾಗಿ ಭಾಗವಹಿಸಿ”ಇತ್ತೀಚಿನ ದಿನಗಳಲ್ಲಿ ಮರೆಯಾಗುತ್ತಿರುವ ಭಾರತೀಯ ಸಂಸ್ಕೃತಿಯನ್ನು, ಅಮೃತ ವಿದ್ಯಾಲಯಂ ಸಮಾಜದ ಹಿತದೃಷ್ಟಿಯಿಂದ ಉಳಿಸಿ ಬೆಳೆಸುವ ಕಾರ್ಯವನ್ನು ಅಚ್ಕುಕಟ್ಟಾಗಿ ನಿರ್ವಹಿಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ನಂತರ ಸ್ವಾಮಿನಿ ಮಂಗಳಾಮೃತ ಪ್ರಾಣರವರ ನಿರ್ದೇಶನಾನುಸಾರ ಸಂಸ್ಕೃತಿ ಪೂಜೆಯ ವಿಧಿವಿಧಾನಗಳು ನಡೆದು ವಿದ್ಯಾರ್ಥಿಗಳು ಶ್ರದ್ಧಾ ಭಕ್ತಿಯಿಂದ ತಮ್ಮ ತಂದೆ ತಾಯಿಯರ ಪಾದಪೂಜೆಗೈದು ಸಂತೃಪ್ತರಾದರು.
ಶಿಕ್ಷಕ ಅಭಿಷೇಕ್ ಅವರ ಮಾರ್ಗದರ್ಶನದಲ್ಲಿ ಆಯುಧ್ ತಂಡ ಮತ್ತು ವಿದ್ಯಾರ್ಥಿಗಳಿಂದ ಗುರು ಸ್ತೋತ್ರ, ಅಷ್ಟೋತ್ತರ ಪಠನೆ ಹಾಗೂ ಭಜನೆಗಳು ನೆರೆದಿದ್ದ ಪೋಷಕರ ಹಾಗೂ ಸಾರ್ವಜನಿಕರ ಮೆಚ್ಚುಗೆ ಗಳಿಸಿತು.
ವೇದಿಕೆಯಲ್ಲಿ ಶಾಲಾಆಡಳಿತಾಧಿಕಾರಿ ದೀಪ ಮನೋಜ್, ಉಪಸ್ಥಿತರಿದ್ದರು.
ಶಿಕ್ಷಕಿ ರೇಖಾ ಕಾಮತ್ ಸ್ವಾಗತಿಸಿದರು. ಶಿಕ್ಷಕಿ ವನಮಾಲ ಶೆಣೈ ವಂದಿಸಿದರು.ಶಾಲಾ ಶಿಕ್ಷಕಿ ಶ್ವೇತಾ ನಿರೂಪಿಸಿದರು.ಭಾಗವಹಿಸಿದ ಸರ್ವರಿಗೂ ಪ್ರಸಾದ ವಿತರಣೆ ಮಾಡಲಾಯಿತು. ಮಕ್ಕಳ ಪೋಷಕರು, ಶಿಕ್ಷಕ – ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.


