ಪುತ್ತೂರು : ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಬಡಗನ್ನೂರು ಗ್ರಾಮದ ಕೊಯಿಲಾ ಎಂಬಲ್ಲಿ ಆ.26 ರಂದು ನಡೆದಿದ್ದ ಅಡಿಕೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ 4 ಮ೦ದಿ ಆರೋಪಿಗಳನ್ನು ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಬ೦ಧಿಸಿದ್ದು ಸುಮಾರು ರೂ 4,15,925 ರೂ. ಮೌಲ್ಯದ ಸೊತ್ತು ವಶಕ್ಕೆ ಪಡೆದಿದ್ದಾರೆ.ಪುತ್ತೂರು ತಾಲೂಕು ಬಡಗನ್ನೂರು ಗ್ರಾಮದ ನಿವಾಸಿಗಳಾದ ಶ್ರವಣ್ ಕೆ (20), ಜಯಚಂದ್ರ (21),ನಿಡ್ಪಳ್ಳಿ ಗ್ರಾಮದ ಅಶೋಕ, (24),ಪುನೀತ್ (20) ಬಂಧಿತ ಅರೋಪಿಗಳು.
ಕೊಯಿಲಾ ಎಂಬಲ್ಲಿ ಆ.26 ರಂದು ಹಳೆಯ ಮನೆಯ ಕೊಟ್ಟಿಗೆಯ ಅಟ್ಟದಲ್ಲಿದ್ದ, ಸುಮಾರು 23 ಗೋಣಿ ಸುಲಿಯದ ಅಡಿಕೆ ಕಳ್ಳತನವಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ, ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿ, ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಧನಂಜಯ ಬಿ.ಸಿ ರವರ ನೇತೃತ್ವದ ತನಿಖಾ ತಂಡವು ಅ.31ರಂದು ಆರೋಪಿಗಳನ್ನು ಬಂಧಿಸಿದರು. ಬ೦ಧಿತರಿ೦ದ ಸುಮಾರು ರೂ 1,55,925/- ಮೌಲ್ಯದ ಅಡಿಕೆ ಹಾಗೂ ಕಳವು ಮಾಡಲು ಉಪಯೋಗಿಸಿದ ಸ್ವಿಪ್ಟ್ ಕಾರು ಮತ್ತು ಆಟೋ ರಿಕ್ಷಾವನ್ನು ವಶಪಡಿಸಿಕೊಂಡಿರುತ್ತಾರೆ. ವಶಪಡಿಸಿಕೊಂಡಿರುವ ಸೊತ್ತುಗಳ ಒಟ್ಟು ಮೌಲ್ಯ ಸುಮಾರು ರೂ 4,15,925/- ಆಗಿರುತ್ತದೆ.